Site icon Vistara News

Datta jayanti | ದತ್ತ ಪೀಠಕ್ಕೆ ಹೋಗುವ ರಸ್ತೆಯಲ್ಲಿ ಮೊಳೆ ಚೆಲ್ಲಿ ಕುಕೃತ್ಯ ನಡೆಸಿದ್ದ ಇಬ್ಬರು ದುಷ್ಕರ್ಮಿಗಳು ಅರೆಸ್ಟ್‌

Datta peeta nails

ಚಿಕ್ಕಮಗಳೂರು: ಡಿಸೆಂಬರ್‌ ೬, ೭, ೮ರಂದು ನಡೆದಿದ್ದ ದತ್ತ ಜಯಂತಿ ಕಾರ್ಯಕ್ರಮದ ವೇಳೆ ದತ್ತಪೀಠಕ್ಕೆ ಸಾಗುವ ದಾರಿಯಲ್ಲಿ ಚೂಪಾದ ಮೊಳೆಗಳನ್ನು ಚೆಲ್ಲಿ ದೊಡ್ಡ ಮಟ್ಟದ ಕುಕೃತ್ಯಕ್ಕೆ ಮುಂದಾಗಿದ್ದ ಇಬ್ಬರು ದುಷ್ಕರ್ಮಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಮಹಮದ್ ಶಹಬಾಸ್, ವಾಹೀದ್ ಹುಸೇನ್ ಬಂಧಿತ ಆರೋಪಿಗಳು. ಇವರು ಚಿಕ್ಕಮಗಳೂರಿನ ದುಬೈ ನಗರದ ನಿವಾಸಿಗಳಾಗಿದ್ದು, ಈ ರಸ್ತೆಯಲ್ಲಿ ಸಾಗುವ ವಾಹನಗಳನ್ನು ಪಂಚರ್‌ ಮಾಡುವ ಉದ್ದೇಶದಿಂದ ಮತ್ತು ನಡೆಯುವವರ ಕಾಲಿಗೆ ಚುಚ್ಚಲಿ ಎನ್ನುವ ಉದ್ದೇಶದಿಂದ ಈ ರೀತಿ ಮಾಡಿದ್ದರು ಎಂದು ಪ್ರಾಥಮಿಕ ವಿಚಾರಣೆಯ ವೇಳೆ ತಿಳಿದುಬಂದಿದೆ. ಈ ಪ್ರಕರಣ ನಡೆಯುತ್ತಿದ್ದಂತೆಯೇ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ತನಿಖೆ ಆರಂಭಿಸಿದ್ದರು, ಹಲವು ತಂಡಗಳಾಗಿ ದುಷ್ಕೃತ್ಯದ ಸೂತ್ರಧಾರರ ಪತ್ತೆಗೆ ಮುಂದಾಗಿದ್ದರು. ಈಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ.

ಅಂದು ಏನಾಗಿತ್ತು?
ಈ ಬಾರಿ ಡಿಸೆಂಬರ್‌ ೬,೭, ೮ರಂದು ದತ್ತ ಪೀಠದಲ್ಲಿ ದತ್ತಜಯಂತಿ ಆಚರಣೆಗೆ ಅವಕಾಶ ನೀಡಲಾಗಿತ್ತು. ಇದೇ ಮೊದಲ ಬಾರಿ ಇಬ್ಬರು ಹಿಂದು ಅರ್ಚಕರಿಗೂ ಪೂಜೆಯ ಅವಕಾಶ ದೊರೆತಿತ್ತು. ಇದು ಕೆಲವರ ಕಣ್ಣು ಕೆಂಪಗಾಗುವಂತೆ ಮಾಡಿತ್ತು.

ದತ್ತ ಜಯಂತಿಯ ಮೊದಲ ದಿನ ಅನಸೂಯಾ ಸಂಕೀರ್ತನೆ ನಡೆದಿತ್ತು. ಅಂದು ಸಾವಿರಾರು ಮಹಿಳೆಯರು ದತ್ತ ಪೀಠಕ್ಕೆ ಸಂಕೀರ್ತನಾ ಮೆರವಣಿಗೆ ನಡೆಸಿದ್ದರು. ಅವರು ಪೀಠಕ್ಕೆ ಹೋಗುವ ದಾರಿಯಲ್ಲಿ ಮೊಳೆಗಳನ್ನು ಚೆಲ್ಲಲಾಗಿತ್ತು.
ಈ ರೀತಿ ಮೊಳೆ ಚೆಲ್ಲಿದ್ದರಿಂದ ಪೊಲೀಸ್ ಸೇರಿದಂತೆ ನಾಲ್ಕೈದು ವಾಹಗಳು ಪಂಚರ್ ಆಗಿ ರಸ್ತೆ ಮಧ್ಯೆ ನಿಂತಿದ್ದವು.

ದುಷ್ಕರ್ಮಿಗಳು ಚಿಕ್ಕಮಗಳೂರಿನ ಹಾರ್ಡ್‍ವೇರ್ ಶಾಪ್‍ನಲ್ಲಿ 4 ಕೆ.ಜಿ. ಮೊಳೆಗಳನ್ನು ಖರೀದಿಸಿ ಆಯಕಟ್ಟಿನ ಜಾಗದಲ್ಲಿ ಚೆಲ್ಲಿದ್ದರು. ಇದೊಂದು ದುಷ್ಕರ್ಮಿ ಕೃತ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಅಂದೇ ಆರೋಪಿಸಿದ್ದರು.

ಈ ಪ್ರಕರಣದಲ್ಲಿ ಇನ್ನೂ ಹಲವರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಗ್ರಾಮಾಂತರ ಪೊಲೀಸರು ಬಲೆ ಬೀಸಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವಿಶೇಷ ತಂಡಗಳ ರಚನೆ ಮಾಡಲಾಗಿದೆ. ಆರೋಪಿಗಳ ನಿಜವಾದ ಉದ್ದೇಶದ ಬಗ್ಗೆ ಹಲವು ಚರ್ಚೆಗಳಿದ್ದು, ಪೊಲೀಸರು ಅವರ ಬಾಯಿ ಬಿಡಿಸುವ ನಿರೀಕ್ಷೆ ಇದೆ.

ಇದನ್ನೂ ಓದಿ | Datta Jayanti | ದತ್ತಪೀಠಕ್ಕೆ ಹೋಗುವ ಮಾರ್ಗದಲ್ಲಿ ಮೊಳೆಗಳ ರಾಶಿ; ವಿಧ್ವಂಸಕ ಕೃತ್ಯಕ್ಕೆ ಸಂಚು ಎಂದ ಸಿ.ಟಿ. ರವಿ

Exit mobile version