Site icon Vistara News

Missing case : ಬಸ್‌ನಲ್ಲಿ ನಿದ್ದೆಗೆ ಜಾರಿದ ಅಜ್ಜ; ದಾರಿ ತಪ್ಪಿದ ಮೊಮ್ಮಗ!

The boy who was leaving with his grandfather in the bus is missing

ಚಿಕ್ಕಮಗಳೂರು: ಹೊರಗೆ ಹೊರಟ್ಟಿದ್ದ ಅಜ್ಜನಿಗೆ ಮೊಮ್ಮಗ ತಾನು ಜತೆಗೆ ಬರುವುದಾಗಿ ಹಠಕ್ಕೆ ಬಿದ್ದಿದ್ದ. ದೊಂಬಾಲು ಬಿದ್ದ ಮೂರು ವರ್ಷದ ಬಾಲಕನನ್ನು ಸಮಾಧಾನಿಸಿ ಕರೆದುಕೊಂಡು ಹೋಗಿದ್ದರು. ಬಸ್‌ ಏರಿ ಸೀಟು ಹಿಡಿದು ಜತೆಗೆ ಕೂರಿಸಿಕೊಂಡಿದ್ದರು. ಬಸ್‌ ಮುಂದಕ್ಕೆ ಸಾಗುತ್ತಿದ್ದಂತೆ ಇತ್ತ ಅಜ್ಜ ತೂಕಡಿಸಿ ತೂಕಡಿಸಿ ನಿದ್ದೆಗೆ ಜಾರಿದರು. ಘಳಿಗೆ ನಿದ್ದೆ ಮುಗಿಸಿ ಕಣ್ಣು ಬಿಟ್ಟರೆ ಮೊಮ್ಮಗನ ಸುಳಿವೇ ಇರಲಿಲ್ಲ. ಆಗಲೇ ನೋಡಿ ಆತಂಕ, ಭಯ ಎಲ್ಲವೂ ಶುರುವಾಗಿತ್ತು. ಯಾಕೆಂದರೆ ಬಸ್‌ನಲ್ಲಿ ಜತೆಗೆ ಇದ್ದ ಮೊಮ್ಮಗ ನಾಪತ್ತೆ (Missing Case) ಆಗಿದ್ದ.

3 ವರ್ಷದ ಶ್ರೇಯಸ್ ಎಂಬಾತ ಬಸ್ಸಿನಲ್ಲಿ ಅಜ್ಜನ ಜತೆ ಪ್ರಯಾಣಿಸುತ್ತಿದ್ದ. ಬಸ್‌ನಲ್ಲಿ ಕೂತಿದ್ದಾಗ ಶ್ರೇಯಸ್‌ನ ಅಜ್ಜ ನಿದ್ದೆಗೆ ಜಾರಿದ್ದರು. ಬಸ್‌ವೊಳಗೆ ಅತ್ತಿಂದಿತ್ತ ಆಟವಾಡುತ್ತಿದ್ದ ಶ್ರೇಯಸ್‌, ಬಸ್‌ ನಿಲ್ಲಿಸಿದಾಗ ಏಕಾಏಕಿ ಕೆಳಗೆ ಇಳಿದು ಹೋಗಿದ್ದ. ತರೀಕೆರೆ ಮಾರ್ಗವಾಗಿ ಹೊರಟಿದ್ದ ಮತ್ತೊಂದು ಬಸ್ ಹತ್ತಿದ್ದ.

ನಂತರ ಜತೆಗೆ ಅಜ್ಜ ಇಲ್ಲದೇ ಇರುವುದು ಗಮನಕ್ಕೆ ಬಂದಾಗ ತರೀಕೆರೆಯಲ್ಲಿ ಬಸ್ಸಿನಲ್ಲಿ ಒಂದೇ ಸಮನೇ ಅಳುತ್ತಿದ್ದ. ಇದನ್ನೂ ಗಮನಿಸಿದ ಸ್ಥಳೀಯರು ಕೂಡಲೇ ಬಾಲಕನನ್ನು ಠಾಣೆಗೆ ಕರೆದು ಹೋಗಿದ್ದಾರೆ. ಶ್ರೇಯಸ್‌ ತನ್ನ ಹೆಸರು ಬಿಟ್ಟು ಬೇರೆಯಾವುದೇ ಮಾಹಿತಿ ನೀಡದೇ ಇದ್ದಾಗ, ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಹರಿಬಿಟ್ಟಿದ್ದಾರೆ.

ಬಳಿಕ ಪೊಲೀಸ್ ಠಾಣೆಗೆ ಬಂದು ಪೋಷಕರು ಮಗುವನ್ನು ಹಿಂಪಡೆದಿದ್ದಾರೆ. ಶ್ರೇಯಾಸ್‌ ತರೀಕೆರೆ ತಾಲೂಕಿನ ತಣಿಗೆ ಬೈಲು ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದೆ. ಪೊಲೀಸರು ಹಾಗೂ ಸ್ಥಳೀಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾಪತ್ತೆಯಾಗಿದ್ದ ಬಾಲಕನನ್ನು ಪೋಷಕರಿಗೆ ಒಪ್ಪಿಸಿದ ಪೊಲೀಸರು

ಅಜ್ಜಿಯ ನೋಡಲು ಹೊರಟ 6 ವರ್ಷದ ಬಾಲಕ ಬೇರೊಂದು ವಿಮಾನ ಹತ್ತಿದ; ಮುಂದೇನಾಯ್ತು?

ವಾಷಿಂಗ್ಟನ್: ಸಾಮಾನ್ಯವಾಗಿ ವಿಮಾನ ಪ್ರಯಾಣದ (Air Travel) ವೇಳೆ ಒಂದು ವಿಮಾನದ ಬದಲು, ಬೇರೊಂದು ವಿಮಾನ ಹತ್ತುವುದು ವಿರಳದಲ್ಲಿ ಅತಿ ವಿರಳ. ಆಯಾ ಟರ್ಮಿನಲ್‌, ಗೇಟ್‌ಗಳ ವಿಂಗಡಣೆ, ಪ್ರತಿಯೊಬ್ಬ ಪ್ರಯಾಣಿಕರ ತಪಾಸಣೆ ಮಾಡುವುದರಿಂದ ಬೇರೆ ವಿಮಾನ ಹತ್ತುವ ಸಾಧ್ಯತೆ ತುಂಬ ಕಡಿಮೆ. ಆದರೆ, ಅಮೆರಿಕದಲ್ಲಿ ವಿಮಾನಯಾನ ಸಂಸ್ಥೆಯ (Airlines) ಸಿಬ್ಬಂದಿಯೇ ಆರು ವರ್ಷದ ಬಾಲಕನನ್ನು ಬೇರೊಂದು ವಿಮಾನವನ್ನು ಹತ್ತಿಸಿದ ಅಚಾತುರ್ಯ ನಡೆದಿದೆ.

ಹೌದು, ಪ್ರೀತಿಯ ಅಜ್ಜಿಯನ್ನು ನೋಡಲು ವಿಮಾನ ಹತ್ತಿದ ಬಾಲಕನು ವಿಮಾನಯಾನ ಸಂಸ್ಥೆ ಸಿಬ್ಬಂದಿಯ ಅಚಾತುರ್ಯದಿಂದಾಗಿ ಸಂಕಷ್ಟ ಅನುಭವಿಸಿದ್ದಾನೆ. ಅತ್ತ, ಮೊಮ್ಮಗನ ಆಗಮನಕ್ಕಾಗಿ ಕಾಯುತ್ತಿದ್ದ ಅಜ್ಜಿಯು ಆತ ಬಾರದ್ದನ್ನು ಕಂಡು ಆತಂಕಗೊಂಡಿದ್ದಾರೆ. ಅಮೆರಿಕದ ಫಿಲಾಡೆಲ್ಫಿಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫೋರ್ಟ್‌ ಮೇಯರ್ಸ್‌ನಲ್ಲಿರುವ ಸೌತ್‌ವೆಸ್ಟ್‌ ಫ್ಲೊರಿಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಾಲಕ ಸಂಚರಿಸಬೇಕಿತ್ತು. ಆದರೆ, ಸ್ಪಿರಿಟ್‌ ಏರ್‌ಲೈನ್ಸ್‌ ಸಿಬ್ಬಂದಿಯು ಬಾಲಕನನ್ನು ಒರಾಲ್ಡೋಗೆ ತೆರಳುತ್ತಿದ್ದ ವಿಮಾನದಲ್ಲಿ ಹತ್ತಿಸಿದ್ದು ಅಚಾತುರ್ಯಕ್ಕೆ ಕಾರಣವಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಿರಿಟ್‌ ಏರ್‌ಲೈನ್ಸ್‌ ಸಂಸ್ಥೆಯು ಕ್ಷಮೆಯಾಚಿಸಿದೆ. “ಬಾಲಕ ಹಾಗೂ ಆತನ ಅಜ್ಜಿಗೆ ಉಂಟಾದ ತೊಂದರೆಗೆ ಸ್ಪಿರಿಟ್‌ ಏರ್‌ಲೈನ್ಸ್‌ ಕ್ಷಮೆಯಾಚಿಸುತ್ತದೆ. ಸಿಬ್ಬಂದಿಯ ತಪ್ಪಿನಿಂದಾಗಿ ಬಾಲಕನು ಬೇರೊಂದು ವಿಮಾನ ಹತ್ತುವಂತಾಗಿದೆ. ಪ್ರಮಾದ ಗೊತ್ತಾದ ಕೂಡಲೇ ವಿಮಾನದ ಸಿಬ್ಬಂದಿಯು ಬಾಲಕನಿಗೆ ರಕ್ಷಣೆ ನೀಡಿದೆ. ಆತನನ್ನು ಸಮಾಧಾನಪಡಿಸಲಾಗಿದೆ. ಹಾಗೆಯೇ, ಆತನ ಕುಟುಂಬಸ್ಥರನ್ನು ಸಂಪರ್ಕಿಸಿ ನಡೆದಿರುವ ಘಟನೆಯ ಕುರಿತು ಮಾಹಿತಿ ನೀಡಲಾಗಿದೆ. ಸುರಕ್ಷಿತವಾಗಿ ಆತನನ್ನು ಅಜ್ಜಿಯ ಬಳಿ ಕಳುಹಿಸಲು ಎಲ್ಲ ರೀತಿಯ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ತಿಳಿಸಿದೆ. ಹಾಗೆಯೇ, ಪ್ರಕರಣವನ್ನು ತನಿಖೆಗೆ ಆದೇಶಿಸಿದೆ.

ಇದನ್ನೂ ಓದಿ: Viral Story: ಒಂದೇ ದಿನ ಎರಡು ಪ್ರತ್ಯೇಕ ವಿಮಾನ ಅಪಘಾತ; ಬದುಕುಳಿದ ಯುವಜೋಡಿ!

“ನನ್ನ ಮೊಮ್ಮಗ ಬರುತ್ತಾನೆ ಎಂದು ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದೆ. ಗಂಟೆಗಟ್ಟಲೆ ಕಾದು ಕುಳಿತರೂ ನನ್ನ ಮೊಮ್ಮಗ ಬರಲಿಲ್ಲ. ಕೂಡಲೇ ಈ ಕುರಿತು ವಿಮಾನಯಾನ ಸಿಬ್ಬಂದಿಗೆ ಕೇಳಿದೆ. ಅವರು ಸರಿಯಾಗಿ ಮಾಹಿತಿ ನೀಡಲಿಲ್ಲ. ನಾನು ವಿಮಾನದೊಳಗೆ ಓಡಿ ಹೋಗಿ ಪರಿಶೀಲನೆ ನಡೆಸಿದೆ. ಅಲ್ಲೂ ನನ್ನ ಮೊಮ್ಮಗ ಇರಲಿಲ್ಲ. ಕೆಲ ಹೊತ್ತನ ಬಳಿಕ ನನ್ನ ಮೊಮ್ಮಗ ಬೇರೊಂದು ವಿಮಾನ ಹತ್ತಿರುವ, ಸುರಕ್ಷಿತವಾಗಿ ಲ್ಯಾಂಡ್‌ ಆಗಿರುವ ಕುರಿತು ಮಾಹಿತಿ ನೀಡಲಾಗಿತ್ತು. ಕೆಲ ಗಂಟೆಗಳ ನಂತರ ಆತನನ್ನು ಫೋರ್ಟ್‌ ಮೈಯರ್ಸ್‌ ವಿಮಾನ ನಿಲ್ದಾಣಕ್ಕೆ ಕಳುಹಿಸಲಾಯಿತು” ಎಂದು ಆರು ವರ್ಷದ ಬಾಲಕನ ಅಜ್ಜಿ ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version