ಬೆಂಗಳೂರು: ಚಾಕೊಲೇಟ್ ಎಂದರೆ ಯಾರಿಗೆ ತಾನೆ ಇಷ್ಟವಿಲ್ಲ. ಅದರಲ್ಲೂ ಹೆಣ್ಮಕ್ಕಳಿಗೆ ಅಂತೂ ಚಾಕೊಲೇಟ್ ಅಂದರೆ ಪಂಚಪ್ರಾಣ. ಹೀಗೆ ಚಾಕೊಲೇಟ್‌ಗೆ ಅಪ್ಪ ಹಣ ಕೊಡದಿದ್ದಕ್ಕೆ ಕೋಪಗೊಂಡ ಸಹೋದರಿಯರು ನಾಪತ್ತೆಯಾಗಿದ್ದರು. ಮನೆಯಲ್ಲಿ ಹೆಣ್ಮಕ್ಕಳು ಕಾಣದೆ ಹೋದಾಗ ಪೋಷಕರು ಕಂಗಾಲಾಗಿದ್ದರು. ಮಕ್ಕಳಿಗೆ ಹುಡುಕಾಟ ನಡೆಸಿ ಸುಸ್ತಾದ ಪೋಷಕರು (Konanakunte police station) ಕಡೆಗೆ ಠಾಣಾ ಮೆಟ್ಟಿಲೇರಿದ್ದರು. ಮಿಸ್ಸಿಂಗ್ ಕೇಸ್ (Missing Case) ದಾಖಲಿಸಿಕೊಂಡ ಪೊಲೀಸರಿಗೆ ಹೆಣ್ಮಕ್ಕಳ ಸುಳಿವು ಕೊಟ್ಟಿದ್ದು ಫ್ರೀ ಬಸ್ (Free Bus Service) ಸರ್ವೀಸ್.
ಇಲ್ಲಿನ ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಜೂನ್ 16ರಂದು ಅಕ್ಕ-ತಂಗಿ ನಾಪತ್ತೆ ಆಗಿದ್ದರು. 9 ಮತ್ತು10ನೇ ತರಗತಿಯಲ್ಲಿ ಓದುತ್ತಿದ್ದ ಸಹೋದರಿಯರು ಹೀಗೆ ಏಕಾಏಕಿ ಕಾಣದೆ ಇದ್ದಾಗ ಪೋಷಕರು ಗಾಬರಿಗೊಂಡಿದ್ದರು. ಮನೆಯ ಸುತ್ತಮುತ್ತ ಹುಡುಕಾಡಿದರು, ಸ್ನೇಹಿತರು, ಪರಿಚಿತರ ಬಳಿ ವಿಚಾರಿಸಿದರೂ ಹೆಣ್ಣುಮಕ್ಕಳ ಸುಳಿವು ಇರಲಿಲ್ಲ. ಹೀಗಾಗಿ ಪೋಷಕರು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡ ಪೊಲೀಸರು ಕೂಡಲೇ ಕಾರ್ಯಾಚರಣೆಗೆ ಇಳಿದಿದ್ದರು. ತಲೆಯಲ್ಲಿ ನೂರಾರು ಗೊಂದಲದ ಜತೆಗೆ ಏರಿಯಾದಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದಾಗ ಫ್ರೀ ಬಸ್‌ವೊಂದು ಹುಡುಗಿಯರ ಸುಳಿವು ನೀಡಿತ್ತು. ಸುಳಿವು ಹಿಡಿದು ಹೋದ ಪೊಲೀಸರಿಗೆ ಬೆಂಗಳೂರಲ್ಲಿ ನಾಪತ್ತೆಯಾದವರು ಧರ್ಮಸ್ಥಳದ ಮಂಜುನಾಥ್‌ನ ಸನ್ನಿಧಿಯಲ್ಲಿದ್ದರು.
ಇದನ್ನೂ ಓದಿ: Free Bus service : ನಮ್ ಹೆಂಡ್ರಿಗೆ ನಾವಿಲ್ವಾ? ಸಿದ್ದರಾಮಯ್ಯ ಏನ್ ಫ್ರೀ ಕೊಡೋದು? ನೋಡಲೇಬೇಕಾದ ವಿಡಿಯೊಗಳಿವು!
ಕಾಣೆಯಾಗಿ ಎರಡು ದಿನದ ಬಳಿಕ ಪೊಲೀಸರ ಕೈಗೆ ಸಿಕ್ಕ ಸಹೋದಯರಿಂದ ಶಕ್ತಿ ಯೋಜನೆಯ ಫ್ರೀ ಬಸ್ ಸರ್ವೀಸ್ ರಿವೀಲ್ ಆಗಿದೆ. ಇಬ್ಬರು ಪುತ್ರಿಯರು ಚಾಕೊಲೇಟ್‌ಗೆ ಹಣ ಕೊಡುವಂತೆ ಕೇಳಿದ್ದರು. ಆದರೆ ಹಣ ಕೊಡದೆ ಅಪ್ಪ ರೇಗಾಡಿಬಿಟ್ಟರು ಎಂದು ತನಿಖೆಯಲ್ಲಿ ತಿಳಿಸಿದ್ದಾರೆ. ತಂದೆ ಹಣ ಕೊಡಲಿಲ್ಲ ಎಂದು ಕೋಪಗೊಂಡ ಅಕ್ಕ-ತಂಗಿ ಫ್ರೀ ಬಸ್ ಏರಿ ಧರ್ಮಸ್ಥಳಕ್ಕೆ ಪ್ರಯಾಣಿಸಿದ್ದಾರೆ. ಎರಡು ದಿನದ ಬಳಿಕ ಜೂನ್ 18ರಂದು ಧರ್ಮಸ್ಥಳದಲ್ಲಿ ಸಹೋದರಿಯರು ಪತ್ತೆಯಾಗಿದ್ದಾರೆ. ಮಕ್ಕಳಿಬ್ಬರು ಸಿಕ್ಕರಲ್ಲ ಎಂದು ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ