ಬೆಂಗಳೂರು: ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲಾ ಹುಡುಕಾಡಿದರು ಎಂಬ ಗಾದೆಯು ಈ ಪ್ರಕರಣಕ್ಕೆ ಹೋಲಿಕೆ ಆಗುತ್ತದೆ. ಮಗು ಕಳೆದುಹೋಗಿದೆ (Missing Case) ಎಂದು ಊರೆಲ್ಲ ಹುಡುಕಾಡಿದ ಪೋಷಕರು, ಬಳಿಕ ಪೊಲೀಸ್ ಠಾಣೆಯ (Police Station) ಮೆಟ್ಟಿಲೇರಿದವರಿಗೆ ಕೊನೆಗೆ ಮಗು ಸಿಕ್ಕಿದ್ದೇ ರೋಚಕವಾಗಿದೆ.
ಇಲ್ಲಿನ ಕೆ.ಆರ್.ಪುರಂ ಬಳಿಯ ಜನತಾ ಕಾಲೋನಿಯಲ್ಲಿ ಮೀನಾ ಎಂಬುವವರು, ತಮ್ಮ ಆರು ವರ್ಷದ ಮಗಳು ಕಾಣದೆ ಇದ್ದಾಗ ಕಂಗಾಲಾಗಿದ್ದರು. ಮನೆಯಲ್ಲಿ ಹುಡುಕಾಡಿದರೂ, ರಸ್ತೆಯಲ್ಲಿ ತಡಕಾಡಿದರೂ ಮಗಳ ಸುಳಿವು ಮಾತ್ರ ಸಿಕ್ಕಿರಲಿಲ್ಲ. ಬಳಿಕ ಹುಡುಕಿ ಸುಸ್ತಾದ ಮೀನಾ ದಂಪತಿ ಕಡೆಗೆ ಕೆ.ಆರ್ ಪುರಂ ಪೊಲೀಸ್ ಸ್ಟೇಶನ್‌ಗೆ ಹೋಗಿದ್ದರು.
ಗುರುವಾರ (ಮೇ 11) ರಾತ್ರಿ 7.30ಕ್ಕೆ ಪೊಲೀಸ್ ಠಾಣೆಗೆ ತೆರಳಿದ ಅವರು, ಮನೆ ಮುಂದೆ ಆಟವಾಡುತ್ತಿದ್ದ ಆರು ವರ್ಷದ ಮಗಳು ಕಾಣಿಯಾಗಿದ್ದಾಳೆ. ನನ್ನ ಮಗಳ ಅನ್ನು ಯಾರೋ ಕಿಡ್ನ್ಯಾಪ್ ಮಾಡಿದ್ದಾರೆ ಎಂದು ದೂರು ಕೊಟ್ಟಿದ್ದರು. ಪೋಷಕರು ನೀಡಿದ ದೂರಿನ್ವಯ ಪೊಲೀಸರು ಕಿಡ್ನ್ಯಾಪ್ ಕೇಸ್ ದಾಖಲಿಸಿಕೊಂಡು ಹುಡುಕಾಟಕ್ಕೆ ಮುಂದಾದರು.
ಸಬ್ ಇನ್ಸ್‌ಪೆಕ್ಟರ್ ರಮ್ಯ ಮತ್ತು ತಂಡದವರು ಮಗುವಿಗಾಗಿ ಎಲ್ಲಾ ಕಡೆ ಹುಡುಕಾಟ ನಡೆಸಿದರು. ಏರಿಯಾದ ಸಿಸಿ ಕ್ಯಾಮೆರಾ ಎಲ್ಲವನ್ನು ಪರಿಶೀಲನೆ ಮಾಡಿದರೂ ಕೂಡ ಬಾಲಕಿ ಬಗ್ಗೆ ಯಾವುದೇ ಸುಳಿವು ಪೊಲೀಸರಿಗೆ ಸಿಗಲಿಲ್ಲ. ಖಾಕಿ ಪಡೆಗೆ ಇದೊಂದು ಸವಾಲಿನ ಪ್ರಕರಣ ಆಗಿ ಮಾರ್ಪಟ್ಟಿತ್ತು.
ಬಾಲಕಿ ಮಿಸ್ಸಿಂಗ್ ಕೇಸ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು. ಈ ಮಧ್ಯೆ ಪೊಲೀಸರು ಬಾಲಕಿ ಕಿಡ್ನ್ಯಾಪ್ ಆದ ಸ್ಥಳದಲ್ಲೇ ಏನಾದರೂ ಸುಳಿವು ಸಿಗಬಹುದಾ ಎಂದು ಪರಿಶೀಲನೆಗೆ ಮುಂದಾದರು. ಮನೆಯಲ್ಲೆ ಮತ್ತೊಮ್ಮೆ ಹುಡುಕಾಟ ಮಾಡುವಾಗ ಬಟ್ಟೆಗಳ ಕೆಳಗೆ ಏನೋ ಇದ್ದಂತೆ ಕಂಡಿತ್ತು. ಬಟ್ಟೆಯನ್ನು ಸರಿಸಿ ನೋಡಿದರೆ ಬಾಲಕಿ ನೆಮ್ಮದಿಯಾಗಿ ನಿದ್ದೆ ಮಾಡುತ್ತಿದ್ದಳು. ಕಂಕುಳಲ್ಲಿ ಮಗು ಇಟ್ಟುಕೊಂಡು ಊರೆಲ್ಲಾ ಹುಡುಕಾಡಿದಂತಾಗಿತ್ತು.
ಇದನ್ನೂ ಓದಿ: Weather Report: ಕಳಸದಲ್ಲಿ ಭಾರಿ ಮಳೆಗೆ ಕುಸಿದು ಬಿದ್ದ ಸೇತುವೆ; ಸಿಕ್ಕಿಹಾಕಿಕೊಂಡ ಪಿಕಪ್ ವಾಹನ
ಇಷ್ಟಕ್ಕೂ ಈ ಪ್ರಕರಣದಲ್ಲಿ ಆಗಿದ್ದು ಇಷ್ಟೇ, ಬಾಲಕಿ ತಾಯಿ ಮೀನಾ ಅವರು ಒಣಗಿದ್ದ ಬಟ್ಟೆಯನ್ನು ತಂದು ಮಲಗಿದ್ದ ಮಗಳ ಮೇಲೆ ಕಾಣದೆ ಹಾಕಿದ್ದರು. ಬಾಲಕಿ ಗಾಢವಾಗಿ ನಿದ್ರಿಸುತ್ತಿತ್ತು. ತಾಯಿ ಬಟ್ಟೆ ಹಾಕಿದರೂ ಎಚ್ಚರಗೊಂಡಿರಲಿಲ್ಲ. ಹೀಗಾಗಿ ಅಲ್ಲಿ ಮಗಳು ಮಲಗಿದ್ದು ತಿಳಿಯದೇ ಹೋಯಿತು. ತುಂಬಾ ಸಮಯ ಮಗಳು ಕಾಣದೆ ಇದ್ದಾಗ, ಗಾಬರಿಗೊಂಡು ಪೊಲೀಸ್ ಠಾಣೆಯವರೆಗೂ ಹೋಗಿತ್ತು. ಸದ್ಯ ಮಗಳು ಸಿಕ್ಕಿದ್ದಳೆಂದು ಪೋಷಕರು ನಿರಾಳರಾದರೆ, ಇತ್ತ ಪೊಲೀಸರು ಸುಸ್ತಾಗಿ ಹೋದರು.