Site icon Vistara News

Missing Case | ಲೇಡಿ ಪಿಎಸ್‌ಐ ಕಿರುಕುಳ ಆರೋಪ; ಡೆತ್‌ನೋಟ್‌ ಬರೆದಿಟ್ಟವ ನಾಪತ್ತೆ

psi geetanjali land dispute harassment Suspend

ರಾಯಚೂರು: ಸಿರವಾರ ಗ್ರಾಮೀಣ ಪೊಲೀಸ್ ಠಾಣೆ ಪಿಎಸ್‌ಐ ಹೆಸರನ್ನು ಉಲ್ಲೇಖಿಸಿ ವ್ಯಕ್ತಿಯೊಬ್ಬ ಡೆತ್‌ನೋಟ್ ಬರೆದಿಟ್ಟು ನಾಪತ್ತೆ (Missing Case) ಆಗಿದ್ದು, ಆತನಿಗಾಗಿ ಶೋಧ ಕಾರ್ಯ ಪ್ರಾರಂಭವಾಗಿದೆ.

ಜಿಲ್ಲೆಯ ಸಿರವಾರ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಆಗಿರುವ ಗೀತಾಂಜಲಿ ಶಿಂಧೆ ಮೇಲೆ ದೌರ್ಜನ್ಯ ಎಸೆಗಿರುವ ಆರೋಪವನ್ನು ಸಿರವಾರದ ನಿವಾಸಿ ತಾಯಣ್ಣ ಎಂಬಾತ ಮಾಡಿದ್ದಾನೆ. ಈ ಸಂಬಂಧ ಆತ ಶುಕ್ರವಾರ ರಾತ್ರಿ ಡೆತ್‌ ನೋಟ್‌ ಬರೆದಿಟ್ಟು, ನಾಪತ್ತೆಯಾಗಿದ್ದಾನೆ. ಈಗ ಪೊಲೀಸರು ತಾಯಣ್ಣನ ಹುಡುಕಾಟದಲ್ಲಿದ್ದಾರೆ.

ತಾಯಣ್ಣ ಬರೆದಿಟ್ಟಿರುವ ಡೆತ್‌ನೋಟ್‌

ತಮ್ಮ ಮನೆ ಜಾಗದ ವಿಚಾರವಾಗಿ ಪಿಎಸ್‌ಐ ಮಧ್ಯಪ್ರವೇಶ ಮಾಡಿದ್ದು, ಸುಖಾಸುಮ್ಮನೆ ನನ್ನನ್ನು ಠಾಣೆಗೆ ಕರೆಸಿಕೊಳ್ಳುತ್ತಿದ್ದಾರೆ. ನನ್ನನ್ನು ಕಂಡಲ್ಲಿ ನಿಲ್ಲಿಸಿ ಹೊಡೆಯುತ್ತಾರೆ. ನಾನು ರಸ್ತೆಯಲ್ಲಿ ಕಂಡಾಗಲೆಲ್ಲ ಹೀಗೆ ಮಾಡಿದ್ದಾರೆ. ಆದರೆ, ನಾನು ಇದನ್ನು ಯಾರಿಗೂ ಹೇಳಿರಲಿಲ್ಲ. ನನಗೆ ಇದರಿಂದ ಬಹಳ ನೋವಾಗಿದೆ. ನಿನ್ನೆ ರಾತ್ರಿ (ಶುಕ್ರವಾರ) ಮಲ್ಲಣ್ಣ ಎಂಬ ಪೊಲೀಸರೊಬ್ಬರು ನನ್ನನ್ನು ಕರೆದು ಪಿಎಸ್‌ಐ ಗೀತಾಂಜಲಿ ಶಿಂಧೆ ಅವರು ಕರೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ. ನಾನು ನನ್ನ ಮಾವನ ಮನೆಗೆ ಹೋಗುತ್ತಿದ್ದವನು ಠಾಣೆಗೆ ವಾಪಸ್‌ ಬಂದೆ. ಆದರೆ, ಬಂದ ಕೂಡಲೇ ಕಾರಣ ಹೇಳದೆ ನನ್ನನ್ನು ಲಾಕಪ್‌ನಲ್ಲಿ ವಿನಾಕಾರಣ ಕೂರಿಸಿದ್ದಾರೆ. ಬಳಿಕ ನನ್ನನ್ನು ಬಿಟ್ಟುಕಳುಹಿಸಿದ್ದಾರೆ. ಮತ್ತೆ ನನ್ನನ್ನು ಲಾಕಪ್‌ ಹಾಕುವ ಬೆದರಿಕೆಯನ್ನು ಒಡ್ಡಿದ್ದಾರೆ. ಇದರಿಂದ ನನ್ನ ಮನಸ್ಸಿಗೆ ತೀವ್ರ ನೋವಾಗಿದೆ ಎಂದು ತಾಯಣ್ಣ ಪತ್ರದಲ್ಲಿ ಬರೆದುಕೊಂಡಿದ್ದಾರೆ.

ನನ್ನ ಪಿತ್ರಾರ್ಜಿತ ಆಸ್ತಿ ಇರುವ ಜಾಗಕ್ಕೂ ನಾನು ಹೋಗುವಂತಿಲ್ಲ ಎಂದು ಪಿಎಸ್‌ಐ ಗೀತಾಂಜಲಿ ತಾಕೀತು ಮಾಡಿದ್ದಾರೆ. ಈ ಕಾರಣಕ್ಕಾಗಿ ನನ್ನ ಮೇಲೆ ಹಲ್ಲೆಯನ್ನೂ ಮಾಡಿದ್ದಾರೆ. ನನಗೆ ಗೀತಾಂಜಲಿ ಅವರು ಬಹಳವೇ ನೋವು ಕೊಟ್ಟಿದ್ದಾರೆ. ನನಗೆ ರೌಡಿಶೀಟರ್‌ ಕೇಸ್‌ ಹಾಕುವ ಬೆದರಿಕೆಯನ್ನೂ ಒಡ್ಡಿದ್ದಾರೆ. ಹೀಗೆ ಬಹಳ ಸಲ ಹೇಳಿದ್ದಾರೆ. ಇದು ನನಗೆ ತುಂಬಾ ನೋವು ತಂದಿದೆ. ಇದರಿಂದ ಮನನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಅಮ್ಮ, ಅಪ್ಪ, ಅಣ್ಣಂದಿರೇ, ಅಕ್ಕಂದಿರೇ ನಿಮಗೆ ನಮಸ್ಕರಿಸುತ್ತಾ ನಾನು ಈ ಭೂಮಿ ಬಿಟ್ಟು ಹೋಗುತ್ತಿದ್ದೇನೆ. ಮುಂದಿನ ವರ್ಷ ನಾನು ಲಾಯರ್‌ ಆಗುತ್ತಿದ್ದೆ. ಆದರೆ, ನನ್ನ ಆ ಕನಸಿಗೆ ಈ ಪಿಎಸ್‌ಐ ಗೀತಾಂಜಲಿ ಕಪ್ಪು ಚುಕ್ಕೆ ಇಟ್ಟರು. ನನ್ನ ಈ ಆತ್ಮಹತ್ಯೆಯಿಂದ ರಾಜ್ಯದಲ್ಲಿ ಅಮಾಯಕರ ಮೇಲಿನ ದೌರ್ಜನ್ಯ ಕಡಿಮೆ ಆಗಬೇಕು ಎಂದೂ ತಾಯಣ್ಣ ಬರೆದುಕೊಂಡಿದ್ದಾರೆ.

ನಮ್ಮ ಸಂವಿಧಾನ ಶಿಲ್ಪಿ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದಲ್ಲಿ ಎಲ್ಲರಿಗೂ ಬದುಕುವ ಹಕ್ಕಿದೆ. ಆದರೆ, ಇಲ್ಲಿ ಎಲ್ಲರಿಗೂ ಜೀವಿಸುವ ಹಕ್ಕಿಗೆ ನ್ಯಾಯ ಸಿಗಬೇಕು ಎಂದು ಬರೆದಿಟ್ಟು ನಾಪತ್ತೆಯಾಗಿದ್ದಾರೆ. ಪೊಲೀಸರು ಈಗ ತಾಯಣ್ಣನ ಹುಡುಕಾಟದಲ್ಲಿದ್ದಾರೆ.

ಇದನ್ನೂ ಓದಿ | Karnataka Election | ಸದ್ಯ ಬಿಜೆಪಿಯಲ್ಲೇ ಇದ್ದೇವೆ, ದಿನ ಕಳೆದಂತೆ ಯೋಚಿಸೋಣ: ನಿಖಿಲ್‌ ಕತ್ತಿ

Exit mobile version