ಬೆಂಗಳೂರು: ಭಾರಿ ಕುತೂಹಲಕ್ಕೆ ಕಾರಣವಾಗಿರುವ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಘೋಷಣೆ ಮತ್ತೆ ಮುಂದಕ್ಕೆ ಹೋಗಿದೆ. ಶನಿವಾರ (ಫೆ. 18) ಅಭ್ಯರ್ಥಿಯನ್ನು ಅಂತಿಮಗೊಳಿಸಲಾಗುತ್ತದೆ ಎಂದು ಹೇಳಲಾಗಿತ್ತಾದರೂ ಇನ್ನು ಒಂದು ವಾರದಲ್ಲಿ ಅಂತಿಮಗೊಳಸಿವುದಾಗಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ನಡುವೆ ಈಗಾಗಲೇ ಜೆಡಿಎಸ್‌ನಿಂದ ಕಾಲು ಹೊರಗಿಟ್ಟಿರುವ ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಅವರು ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರನ್ನು ರಾವಣನಿಗೆ ಹೋಲಿಕೆ ಮಾಡಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಚುನಾವಣಾ ಅಖಾಡ ದಿನೇದಿನೆ ರಂಗುಪಡೆದುಕೊಳ್ಳುತ್ತಿದೆ. ಅಲ್ಲದೆ, ಚುನಾವಣೆ ದಿನಾಂಕ ಪ್ರಕಟಕ್ಕೂ ಮುನ್ನವೇ ಜೆಡಿಎಸ್ ರಾಜ್ಯದ 120 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿತ್ತು. ಆದರೆ, ಹಾಸನ ಭಾಗದಲ್ಲಿ ಮಾತ್ರ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಯಾವುದೇ ಅಭ್ಯರ್ಥಿಯ ಪಟ್ಟಿಯನ್ನು ಪ್ರಕಟಪಡಿಸಿರಲಿಲ್ಲ. ಅಲ್ಲದೆ, ಈ ಭಾಗದಲ್ಲಿ ಸಹೋದರ ಎಚ್.ಡಿ. ರೇವಣ್ಣ ಅವರ ಪ್ರಾಬಲ್ಯವೂ ಹೆಚ್ಚಿರುವುದರಿಂದ ಅವರ ಅಭಿಪ್ರಾಯಕ್ಕೂ ಮನ್ನಣೆ ಕೊಡುವ ಉದ್ದೇಶವನ್ನು ಹೊಂದಲಾಗಿತ್ತು. ಈ ನಡುವೆ ಹಾಸನ ಕ್ಷೇತ್ರಕ್ಕೆ ಭವಾನಿ ರೇವಣ್ಣ ಅಭ್ಯರ್ಥಿಯಾಗುವ ಇಂಗಿತ ವ್ಯಕ್ತಪಡಿಸಿದ್ದು, ಆ ಪಕ್ಷದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿತ್ತು.
ಭವಾನಿ ಪರವಾಗಿ ಅವರ ಮಕ್ಕಳಾದ ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ಸಹ ಬ್ಯಾಟ್ ಬೀಸಿದ್ದರು. ಇದರ ಜತೆಗೆ ಭವಾನಿ ಸಹ ಕ್ಷೇತ್ರ ಸಂಚಾರವನ್ನು ಕೈಗೊಂಡಿದ್ದರು. ಎಲ್ಲ ಬೆಳವಣಿಗೆ ಮಧ್ಯೆ ಪಕ್ಷದ ವರಿಷ್ಠ ದೇವೇಗೌಡರು ಎಲ್ಲರಿಗೂ ತಾಳ್ಮೆ ವಹಿಸಲು ಸೂಚನೆ ಕೊಟ್ಟಿದ್ದರು. ಆ ನಡುವೆಯೂ ಮೊಮ್ಮಕ್ಕಳಾದ ಪ್ರಜ್ವಲ್ ಹಾಗೂ ಸೂರಜ್ ಆಗಾಗ ಹೇಳಿಕೆ ನೀಡುತ್ತಲೇ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಾಲಿಗೆ ಈ ಕ್ಷೇತ್ರ ಸ್ವಲ್ಪ ಕಗ್ಗಂಟಾಗಿಯೇ ಉಳಿದುಕೊಂಡಿದೆ. ಈ ನಡುವೆ ಮಾಜಿ ಶಾಸಕ ಎಚ್.ಎಸ್. ಪ್ರಕಾಶ್ ಪುತ್ರ ಸ್ವರೂಪ್ ಸಹ ಸ್ಪರ್ಧಾಕಾಂಕ್ಷಿಯಾಗಿದ್ದು, ಅವರಿಗೇ ಟಿಕೆಟ್ ಕೊಡುವ ಬಗ್ಗೆ ಎಚ್‌ಡಿಕೆ ಒಲವು ತೋರಿದ್ದರು. ಇದೂ ಕೂಡ ಜಟಾಪಟಿಗೆ ಕಾರಣವಾಗಿದೆ. ಈಗ ಶನಿವಾರವೂ (ಫೆ. 18) ಈ ಕ್ಷೇತ್ರದ ಟಿಕೆಟ್ ಫೈನಲ್ ಮಾಡಲು ಆಗಲಿಲ್ಲ. ಹೀಗಾಗಿ ಇನ್ನೊಂದು ವಾರದಲ್ಲಿ 2ನೇ ಪಟ್ಟಿಯನ್ನು ಅಂತಿಮಗೊಳಿಸುವುದಾಗಿ ಎಚ್‌ಡಿಕೆ ಹೇಳಿದ್ದಾರೆ.
ಟಿಕೆಟ್ ಗೊಂದಲ ಬಗೆಹರಿಸುತ್ತೇವೆ ಎಂದ ಎಚ್‌ಡಿಕೆ
ಹಾಸನ ಟಿಕೆಟ್ ವಿಚಾರಕ್ಕೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯಿಸಿ, ಯಾವುದೇ ಗೊಂದಲ ಇಲ್ಲದೆ ಟಿಕೆಟ್ ವಿಚಾರ ಬಗೆಹರಿಸುತ್ತೇವೆ. ಯಾರೂ ತಲೆ ಕೆಡಿಸಿಕೊಳ್ಳೋದು ಬೇಡ. ಸುಲಭವಾಗಿ ಟಿಕೆಟ್ ಸಮಸ್ಯೆ ಬಗೆಹರಿಯಲಿದೆ. ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿ ಇನ್ನೊಂದು ವಾರದಲ್ಲಿ ಸರಿ ಹೋಗಲಿದೆ. ಪಟ್ಟಿಯಲ್ಲಿ ಯಾವುದೇ ಗೊಂದಲ ಇಲ್ಲ. ದೇವೇಗೌಡರ ಅನುಮತಿ ಪಡೆದು ಪಟ್ಟಿ ಬಿಡುಗಡೆ ಮಾಡಲಿದ್ದೇವೆ. ಕಾಂಗ್ರೆಸ್, ಬಿಜೆಪಿ ಪಟ್ಟಿ ಬಿಡುಗಡೆ ಆಗುವುದರೊಳಗೆ ನಮ್ಮ ಪಟ್ಟಿ ಬಿಡುಗಡೆ ಆಗುತ್ತದೆ. ಹಾಸನದ ಟಿಕೆಟ್ ಕೂಡ ಘೋಷಣೆ ಆಗಲಿದೆ ಎಂದು ತಿಳಿಸಿದ್ದಾರೆ.
ಎಚ್.ಡಿ.ರೇವಣ್ಣರನ್ನು ರಾವಣನಿಗೆ ಹೋಲಿಕೆ ಮಾಡಿದ ಶಾಸಕ ಎ.ಟಿ.ರಾಮಸ್ವಾಮಿ
ಹಾಸನ: ರಾವಣನಿಗೆ ಸಕಲ ಐಶ್ವರ್ಯ ಇತ್ತು, ಈಶ್ವರನಿಂದ ಪಡೆದಂತಹ ಶಕ್ತಿಶಾಲಿ ಅಸ್ತ್ರಗಳಿದ್ದವು. ಆದರೆ ಅವನು ನಾಶವಾದ, ಲಂಕೆಯೂ ಕೂಡ ಬೂದಿ ಆಗಲಿಲ್ಲವೇ? ಯಾವುದೇ ವಿಷಯಕ್ಕೂ ಆದಿ, ಅಂತ್ಯ ಇರುತ್ತದೆ. ಹುಟ್ಟಿದ ಮೇಲೆ ಸಾಯುವುದು ನಿಶ್ಚಿತ, ನನ್ನಂತಹವನಿಗೆ ಹೀಗೆ ಮಾಡಿದ್ದಾರೆ ನಿಮ್ಮನ್ನು ಬಿಡುತ್ತಾರಾ ಎಂದು ಕಾರ್ಯಕರ್ತರಿಗೆ ಹೇಳುವ ಮೂಲಕ ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರನ್ನು (JDS Politics) ಪರೋಕ್ಷವಾಗಿ ರಾವಣನಿಗೆ ಹೋಲಿಕೆ ಮಾಡಿ ಅರಕಲಗೂಡು ಶಾಸಕ ಎ.ಟಿ.ರಾಮಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
ಹೊಳ ನರಸೀಪುರ ತಾಲೂಕಿನ ಜೋಗಿಕೊಪ್ಪಲು ಗ್ರಾಮದಲ್ಲಿ ನಿವೇಶನ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ವಾಗ್ದಾಳಿ ಮಾತನಾಡಿದ ಅವರು, ನೀವೆಲ್ಲಾ ಸ್ವಾಭಿಮಾನಿಗಳಾಗಿ, ಆತ್ಮಗೌರವದಿಂದ ನಿಂತುಕೊಳ್ಳಿ. ಕೈಕಟ್ಟಿ ನಿಲ್ಲಬೇಡಿ, ಜತೆಯಲ್ಲಿ ಕುಳಿತುಕೊಳ್ಳುವ ಸ್ಥಾನಮಾನ ಎಲ್ಲಿ ಇರುತ್ತದೆಯೋ ಅಲ್ಲಿಗೆ ಹೋಗಿ. ಕೈಕಟ್ಟಿ ನಿಂತುಕೊಳ್ಳುವ ಕಡೆಗೆ ಹೋಗಬೇಡಿ, ಕೈ ಕಟ್ಟಿ ನಿಲ್ಲಬೇಡಿ. ಅವರಿಗೆ ಒಳ್ಳೆಯವರು ಬೇಕಾಗಿಲ್ಲ, ಕೆಲವು ಜನ ಸ್ವಾರ್ಥಕ್ಕೆ ಏನು ಬೇಕಾದರೂ ಮಾಡಲು ತಯಾರಾಗಿದ್ದಾರೆ ಎಂದು ಕಿಡಿ ಕಾರಿದರು.
ಇದನ್ನೂ ಓದಿ | PM Modi: ಮೋದಿ ಜತೆಯೇ ಕೆಲಸ ಮಾಡುವೆ; ನಾನು ಮುಖ್ಯಮಂತ್ರಿಯಾಗುವ ಪ್ರಶ್ನೆಯೇ ಉದ್ಭವಿಸುವುದಿಲ್ಲ: ಪ್ರಲ್ಹಾದ್ ಜೋಶಿ
ಕೆಲವರು ಸತ್ಯವನ್ನೇ ಸಾಯಿಸುತ್ತಾರೆ. ಆದರೆ, ಅದನ್ನು ಎದುರಿಸುವ ಶಕ್ತಿ ಜನ ನನಗೆ ಕೊಟ್ಟಿದ್ದಾರೆ. ರಾಜಕೀಯದಿಂದ ಹಿಮ್ಮುಖವಾಗುವ ಸಂದರ್ಭ ಇಲ್ಲವೇ ಇಲ್ಲ ಎಂದ ಅವರು, ನಾನು ಸ್ಪರ್ಧೆ ಮಾಡುವುದು ಖಚಿತ. ಪ್ರಧಾನಮಂತ್ರಿಯಾಗಿದ್ದ, ದೊಡ್ಡ ಹುದ್ದೆಯಲ್ಲಿದ್ದ ದೇವೇಗೌಡ ಅಂತಹವರನ್ನೇ ಮನೆಯಿಂದ, ಜಿಲ್ಲೆಯಿಂದ ಹೊರಗೆ ಹಾಕಿದಂತಹ ಜನ ನನ್ನನ್ನು ಬಿಡುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ದೇವೇಗೌಡರನ್ನು ಉತ್ಸವಮೂರ್ತಿ ಮಾಡಿಕೊಂಡಿದ್ದಾರೆ
ದೇವೇಗೌಡರು ಲೋಕಸಭಾ ಚುನಾವಣೆಗೆ ನಿಂತುಕೊಳ್ಳಲ್ಲ ಎಂದಿದ್ದರೆ ಅದು ಎರಡನೇ ಮಾತು, ಬೇರೆಯವರು ನಿಂತುಕೊಳ್ಳಬಹುದು. ಆದರೆ, ಅವರನ್ನು ಜಿಲ್ಲೆಯಿಂದ ಹೊರಗೆ ಹಾಕಿ ತುಮಕೂರಿಗೆ ಕಳುಹಿಸಿ ಸೋಲಿಸಿದರು. ಇದನ್ನು ರಾಜಕೀಯ ಇತಿಹಾಸದಲ್ಲಿ ಯಾರು ಕೂಡ ಮರೆಯಬಾರದು, ಮರೆಯುವಂತಹದ್ದಲ್ಲ. ದೇವೇಗೌಡರನ್ನು ಇವರೆಲ್ಲ ಉತ್ಸವಮೂರ್ತಿ ಮಾಡಿಕೊಂಡಿದ್ದಾರೆ. ಅಂತಹ ಮುತ್ಸದ್ದಿ ರಾಜಕಾರಣಿಯನ್ನು ಮೂಲೆಗುಂಪು ಮಾಡಿದ್ದಾರೆ. ಅವರ ಮಾತಿಗೆ ಕಿಮ್ಮತ್ತು ಕೊಡುತ್ತಿಲ್ಲ ಎಂದು ಆರೋಪಿಸಿದರು.
ಪ್ರಜ್ವಲ್ ರೇವಣ್ಣ ಆಸ್ತಿ ಘೋಷಣೆ ಸರಿಯಾಗಿ ಮಾಡಿಲ್ಲ. ಈ ಬಗ್ಗೆ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿತ್ತು. ಶಿಕ್ಷೆ ಆಗುವ ಸಂದರ್ಭ ಬಂದಿತ್ತು. ಆ ಕೇಸ್‌ನ್ನು ರಾಜಿ ಮಾಡಿಕೊಳ್ಳಲು ಸ್ವಾರ್ಥಕ್ಕಾಗಿ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ ಎಂದು ಟೀಕಿಸಿದರು.