ಮಡಿಕೇರಿ: ರಾಜಕಾರಣಿಗಳಿಗೆ ಜನಪ್ರೀತಿಯನ್ನು ಗಳಿಸಬೇಕು ಎನ್ನುವುದು ಒಂದು ಆಸೆಯಾದರೆ ತಮ್ಮ ಮಕ್ಕಳನ್ನೂ ತಮ್ಮಂತೆಯೇ ಜನಪ್ರಿಯ ನಾಯಕರಾಗಿ (Popular leader) ಬೆಳೆಸಬೇಕು ಎನ್ನುವ ಆಸೆ ಇನ್ನೂ ದೊಡ್ಡದಾಗಿರುತ್ತದೆ. ಹಾಗಂತ ಅವರಿಗೆ ತರಬೇತಿ ಕೊಟ್ಟು ಮುನ್ನಡೆಸುವ ಕೆಲಸವನ್ನೇನೂ ಅವರು ಮಾಡುವುದಿಲ್ಲ. ಹಿರಿಯರು ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದನ್ನು ನೋಡಿ ಮಕ್ಕಳು ಬೆಳೆಯುತ್ತಾರೆ. ಹೀಗೆ ಬೆಳೆದ ಮಕ್ಕಳು ದೊಡ್ಡ ಸ್ಥಾನಕ್ಕೇರಿದಾಗ ಹೇಗೆ ನಡೆದುಕೊಳ್ಳುತ್ತಾರೆ, ಹೇಗೆ ಜನರೊಂದಿಗೆ ಬೆರೆಯುತ್ತಾರೆ, ಸಭೆಗಳನ್ನು ಹೇಗೆ ನಡೆಸುತ್ತಾರೆ ಎಂದು ನೋಡುವ ಆಸೆ ಹಿರಿಯ ರಾಜಕಾರಣಿಗಳಿಗೆ ಇರುತ್ತದೆ.
ಇಂಥಹುದೊಂದು ಆಸೆ ಹೊತ್ತೇ ಕೊಡಗು ಜಿಲ್ಲಾ ಪಂಚಾಯಿತಿ (Kodagu zilla Panchayat) ಕೆಡಿಪಿ ಸಭೆಯಲ್ಲಿ (KDP Meeting) ಬಂದು ಕುಳಿತಿದ್ದರು ಜೆಡಿಎಸ್‌ನ ಹಿರಿಯ ನಾಯಕ ಅರಕಲಗೂಡು ಮಂಜು (Arakalaguru Manju). ಮಂಗಳವಾರ ಕೊಡಗು ಜಿಲ್ಲಾ ಪಂಚಾಯಿತಿಯಲ್ಲಿ ಕೆಡಿಪಿ ಸಭೆ ಇತ್ತು. ಅದಕ್ಕೆ ಬಂದಿದ್ದ ಎ. ಮಂಜು ಅಧಿಕಾರಿಗಳ ಸಾಲಿನಲ್ಲಿ ಕುಳಿತಿದ್ದರು.
ಅದು ಎ. ಮಂಜು ಅವರ ಮಗ ಮಂಥರ್ ಗೌಡ (Manthar gowda) ಅವರು ಎದುರಿಸುತ್ತಿರುವ ಮೊದಲ ಕೆಡಿಪಿ ಸಭೆ. ಮಂಥರ್ ಗೌಡ ಅವರು ಮಡಿಕೇರಿ ಶಾಸಕ. ಮಂಥರ್ ಅವರ ಜತೆ, ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಮತ್ತು ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಸಭೆಯ ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಎ. ಮಂಜು ಅವರು, ನಾನು ಕರ್ನಾಟಕ ರಾಜ್ಯ ಕೃಷಿ ಸಹಕಾರ ಮಂಡಲದ ನಿರ್ದೇಶಕನಾಗಿರುವುದರಿಂದ ನನಗೂ ಕೊಡಗು ಜಿಲ್ಲಾ ಪಂಚಾಯಿತಿ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಅಹ್ವಾನವಿದೆ ಎಂದರು.
ʻʻನಾನೂ ಕೂಡ ಕೊಡಗು ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಗೆ ಆಹ್ವಾನದ ಮೇಲೆ ಬಂದಿದ್ದೇನೆ. SLDPಗೆ ಅನುದಾನ ಕೊಡದಿರುವುದರಿಂದ ಇದರಲ್ಲಿ ಈ ಸಭೆಯಲ್ಲಿ ನಮ್ಮದೇನು ವಿಚಾರಗಳು ಇಲ್ಲʼʼ ಎಂದು ಹೇಳಿದ ಅವರು, ಮಗ ನಡೆಸುವ ಸಭೆ ನೋಡಿ ಖುಷಿ ಆಗಿದೆ, ಅದಕ್ಕೆ ಅಧಿಕಾರಿಗಳ ಸಾಲಲ್ಲಿ ಕುಳಿತು ಸಭೆಯಲ್ಲಿ ಭಾಗಿಯಾದೆʼʼ ಎಂದು ಹೇಳಿದರು.
ಮಡಿಕೇರಿ ಶಾಸಕ ಮಂಥರ್ ಗೌಡ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅಪ್ಪಚ್ಚು ರಂಜನ್ ಅವರನ್ನು ಸೋಲಿಸಿದ್ದರು. ಪಕ್ಕದ ವಿರಾಜಪೇಟೆ ಕ್ಷೇತ್ರದಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಿದ್ದು, ಎ.ಎಸ್. ಪೊನ್ನಣ್ಣ ಗೆದ್ದಿದ್ದರು.
ಇದನ್ನೂ ಓದಿ: Madikeri Election Results : ಮಡಿಕೇರಿಯಲ್ಲಿ ಕಾಂಗ್ರೆಸ್ ಅಲೆ; ಮಂಥರ್ ಗೌಡಗೆ ಗೆಲುವು