Site icon Vistara News

Freedom March | ಆ.15ರ ‘ಸ್ವಾತಂತ್ರ್ಯ ನಡಿಗೆ’ ಪಾದಯಾತ್ರೆಗೆ ಕಾಂಗ್ರೆಸ್‌ ಸಜ್ಜು: ಡಾ.ಜಿ.ಪರಮೇಶ್ವರ್‌

Freedom March

ಬೆಂಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಕೆಪಿಸಿಸಿ ವತಿಯಿಂದ ನಗರದಲ್ಲಿ ಆ.15ರಂದು ಸ್ವಾತಂತ್ರ್ಯ ನಡಿಗೆ (Freedom March) ಹಮ್ಮಿಕೊಂಡಿದ್ದು, ಎಲ್ಲ ರೀತಿಯ ತಯಾರಿ ಮಾಡಿಕೊಳ್ಳಲಾಗಿದೆ. ಪಾದಯಾತ್ರೆಯಲ್ಲಿ 2.5 ಲಕ್ಷ ಜನ ಭಾಗಿಯಾಗುವ ನಿರೀಕ್ಷೆ ಇದೆ. ಇದು ಜನರ ಉತ್ಸವ ಆಗಬೇಕು, ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು ಎಂದು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ ಹೇಳಿದರು.

ನಗರದ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಪ್ರತಿಮೆ ಬಳಿ ಆ.15ರಂದು ಮಧ್ಯಾಹ್ನ 2 ಗಂಟೆಗೆ ಸ್ವಾತಂತ್ರ್ಯ ನಡಿಗೆಗೆ ಚಾಲನೆ ನೀಡಲಾಗುತ್ತದೆ. ಪಾದಯಾತ್ರೆ ಅಲ್ಲಿಂದ ಕೆ.ಆರ್‌.ಸರ್ಕಲ್‌, ಹಡ್ಸನ್ ಸರ್ಕಲ್, ಜೆಸಿ.ರೋಡ್, ವಿವಿಪುರಂ ಸರ್ಕಲ್ ಮೂಲಕ ಸಾಗಿ ಜಯನಗರ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಬೃಹತ್‌ ಸಮಾವೇಶ ನಡೆಸಲಾಗುತ್ತದೆ ಎಂದರು.

ಇದನ್ನೂ ಓದಿ | ಬೊಮ್ಮಾಯಿ ನೇತೃತ್ವದಲ್ಲೇ 2023ರ ಚುನಾವಣೆ: ಬಿಜೆಪಿ ಹೈಕಮಾಂಡ್‌ ಘೋಷಣೆ, ಎಲ್ಲ ಗೊಂದಲಕ್ಕೆ ತೆರೆ

ಬೆಂಗಳೂರಿನ 28 ಕ್ಷೇತ್ರ, ರಾಜ್ಯದ ವಿವಿಧ ಜಿಲ್ಲೆಗಳಿಂದ ಲಕ್ಷಾಂತರ ಜನರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದು, ಅವರಿಗಾಗಿ ಊಟ, ತಿಂಡಿ ವ್ಯವಸ್ಥೆ ಮಾಡಲಾಗುತ್ತದೆ. ಬೆಂಗಳೂರಿನ ಎಲ್ಲ ಕಾಲೇಜುಗಳಿಗೆ ಮನವಿ ಮಾಡಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು. ಚಿತ್ರರಂಗದ ಗಣ್ಯರಿಗೂ ಆಹ್ವಾನ ನೀಡಲಾಗಿದೆ. ಪೊಲೀಸ್ ಇಲಾಖೆಯಿಂದ ಅನುಮತಿ ಪಡೆದಿದ್ದು, ಇದು ಪಕ್ಷದ ಕಾರ್ಯಕ್ರಮವಲ್ಲ, ಪಕ್ಷಾತೀತ ಕಾರ್ಯಕ್ರಮ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಪಾದಯಾತ್ರೆಯಲ್ಲಿ ಭಾಗವಹಿಸಲು ಈವರೆಗೆ 69,350 ಜನ ನೋಂದಣಿ ಮಾಡಿಕೊಂಡಿದ್ದಾರೆ. ಅವರಿಗೆ ವೆಲ್‌ಕಮ್ ಕಿಟ್‌ ಕಳುಹಿಸಲಾಗುತ್ತಿದೆ. 1.5 ಲಕ್ಷ ಧ್ವಜ ಮತ್ತು ಟೋಪಿ ಆರ್ಡರ್‌ ಮಾಡಿದ್ದೇವೆ. ಯುವಕರು ಹೆಚ್ಚು ನೊಂದಣಿ ಆಗಿದ್ದು, ನಗರದ ಜನ ಬರಲು ಮೆಟ್ರೋ ಟಿಕೆಟ್ ವ್ಯವಸ್ಥೆ ಮಾಡಿದ್ದೇವೆ. ಸ್ವಾತಂತ್ರ್ಯ ನಡಿಗೆ ಬಳಿಕ ನಡೆಯುವ ಸಮಾರೋಪ ಸಮಾವೇಶದಲ್ಲಿ ರಾಜಕೀಯ ಭಾಷಣಕ್ಕೆ ಅವಕಾಶವಿರುವುದಿಲ್ಲ ಎಂದರು.

ನಮ್ಮ ಎಲ್ಲ ನಾಯಕರಿಗೆ ಬಿಳಿ ಬಟ್ಟೆಯಲ್ಲಿ ಬರಲು ಹೇಳಿದ್ದೇವೆ. ಸರ್ಕಾರ ಹಣ ಪಡೆದು ಬಾವುಟ ಹಂಚಿಕೆ ಮಾಡುತ್ತಿದೆ. ನಮ್ಮ ಪಕ್ಷದಿಂದ ಉಚಿತವಾಗಿ ಬಾವುಟ ವಿತರಣೆ ಮಾಡುತ್ತಿದ್ದೇವೆ. ಖಾದಿ ಬಾವುಟ ಬಳಸಲು ನಿರ್ಧಾರ ಮಾಡಿದ್ದೇವೆ, ಜನರಿಗೆ ಸ್ವ ಇಚ್ಛೆಯಿಂದ ಪಾದಯಾತ್ರೆಯಲ್ಲಿ ಭಾಗವಹಿಸಲು ಕರೆ ಕೊಟ್ಟಿದ್ದೇವೆ ಎಂದು ಹೇಳಿದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್, ಮಾಜಿ ಸಚಿವ ಕೆ.ಜೆ ಜಾರ್ಜ್, ಶಾಸಕ ಪ್ರಿಯಾಂಕ್ ಖರ್ಗೆ, ಮಾಜಿ ಸಚಿವ ಎಚ್.ಎಂ ರೇವಣ್ಣ ಉಪಸ್ಥಿತರಿದ್ದರು.

ಇದನ್ನೂ ಓದಿ | ಪ್ರವೀಣ್‌ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ರದ್ದಾಗಿದ್ದ ಸರಕಾರದ ಜನೋತ್ಸವ ಆಗಸ್ಟ್‌ 28ಕ್ಕೆ ಮರುನಿಗದಿ

Exit mobile version