Site icon Vistara News

Dr HD Ranganath: ಉಚಿತ ಶಸ್ತ್ರಚಿಕಿತ್ಸೆ ಮಾಡಿ, ಮಾನವೀಯತೆ ಜತೆಗೆ ವೃತ್ತಿಪರತೆ ಮೆರೆದ ಶಾಸಕ ಡಾ. ರಂಗನಾಥ್

MLA Dr Ranganath

ಬೆಂಗಳೂರು: ಹಲವು ವೈದ್ಯರು ರಾಜಕಾರಣಿಗಳಾಗಿ ಬದಲಾಗಿರುವುದನ್ನು ಕಂಡಿರುತ್ತೇವೆ. ಅಂತಹವರಲ್ಲಿ ಕುಣಿಗಲ್ ಕ್ಷೇತ್ರದ ಶಾಸಕ ಡಾ. ಎಚ್​. ಡಿ. ರಂಗನಾಥ್ ಅವರು ಕೂಡ ಒಬ್ಬರು. ಶಾಸಕರಾದ ಮೇಲೆ ಎರಡು ಶಸ್ತ್ರ ಚಿಕಿತ್ಸೆ ನಡೆಸಿ ಗಮನ ಸೆಳೆದಿದ್ದ ಶಾಸಕ ಡಾ. ಎಚ್​. ಡಿ ರಂಗನಾಥ್ ಅವರು, ಇದೀಗ ಮತ್ತೊಂದು ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ. ನಗರದ ಬೌರಿಂಗ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ಉಚಿತ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಮಾನವೀಯತೆ ಜತೆಗೆ ವೃತ್ತಿಪರತೆ ಮೆರೆದಿದ್ದಾರೆ.

ಕುಣಿಗಲ್ ನಿವಾಸಿ ಗಂಗಾ ಹನುಮಯ್ಯ ಅವರು ತಮ್ಮ ಎಡಗೈಗೆ ಶಸ್ತ್ರ ಚಿಕಿತ್ಸೆ ಮಾಡಿಸಲು ಸಹಾಯ ಕೋರಿ ಡಾ. ರಂಗನಾಥ್ ಅವರನ್ನು ಸಂಪರ್ಕಿಸಿದ್ದರು. ಹೀಗಾಗಿ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡುವುದಾಗಿ ಹನುಮಯ್ಯ ಅವರಿಗೆ ರಂಗನಾಥ್ ಭರವಸೆ ನೀಡಿದ್ದರು. ಅದರಂತೆಯೇ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಮೂಲತಃ ಮೂಳೆ ಶಸ್ತ್ರಚಿಕಿತ್ಸಕರಾಗಿರುವ ರಂಗನಾಥ್ ಅವರು, ಶಾಸಕರಾಗಿ ಆಯ್ಕೆಯಾದ ನಂತರ ಇದು ಅವರು ನಡೆಸಿದ ಮೂರನೇ ಶಸ್ತ್ರಚಿಕಿತ್ಸೆಯಾಗಿದೆ. ಇತ್ತೀಚೆಗೆ ಮಹಿಳೆಯೊಬ್ಬರ ಕಾಲಿಗೆ ಶಸ್ತ್ರ ಚಿಕಿತ್ಸೆ ಮಾಡಿದ್ದರು. ಇದೀಗ ಮತ್ತೊಬ್ಬರಿಗೆ ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ.

ಅಂದ ಹಾಗೆ, ಡಾ. ಎಚ್‌.ಡಿ. ರಂಗನಾಥ್‌ ಅವರು ಮೂಲತಃ ಆರ್ಥೋಪೆಡಿಕ್ ವೈದ್ಯರೇ ಆಗಿದ್ದಾರೆ. ಶಾಸಕರಾಗುವ ಮೊದಲೇ ವೈದ್ಯರಾಗಿಯೇ ಹೆಸರಾಗಿದ್ದ ಅವರು ಬಿಡುವಿನ ವೇಳೆಯಲ್ಲಿ ಈಗಲೂ ಸೇವೆ ನೀಡುತ್ತಾರೆ.

ಇದನ್ನೂ ಓದಿ | Yuvaraja College: ಪಿಯುಸಿ ಸೆಕೆಂಡ್ ಕ್ಲಾಸು, ಅದ್ಕೇ ಮೆಡಿಕಲ್‌‌ ಸೀಟ್ ಸಿಗಲಿಲ್ಲ ಎಂದ ಸಿದ್ದರಾಮಯ್ಯ

ರಂಗನಾಥ್‌ ಅವರು 1989ರಿಂದ 1996ರವರೆಗೆ ಬೆಂಗಳೂರಿನ ಕಿಮ್ಸ್‌ನಲ್ಲಿ ಮೆಡಿಕಲ್‌ ಶಿಕ್ಷಣ ಅಧ್ಯಯನ ನಡೆಸಿದ್ದರು. ಬಳಿಕ ಮೈಸೂರಿನ ಜೆ.ಎಸ್‌. ಮೆಡಿಕಲ್‌ ಕಾಲೇಜಿನಲ್ಲಿ ಆರ್ಥೊಪೆಡಿಕ್‌ನಲ್ಲಿ ಎಂ.ಎಸ್‌. ಮಾಡಿದ್ದರು. 2001ರಲ್ಲಿ ಅವರ ಎಂ.ಎಸ್‌ ಮುಗಿದಿದ್ದು ಬಳಿಕ ವೈದ್ಯಕೀಯ ಸೇವೆ ಆರಂಭಿಸಿ ಮುಂದೆ ರಾಜಕಾರಣಿಯಾದರು.

Exit mobile version