Site icon Vistara News

ಅಪಘಾತದಲ್ಲಿ ಗಾಯಗೊಂಡ ಮಹಿಳೆಯ ಆಸ್ಪತ್ರೆಗೆ ಸಾಗಿಸಿದ ಶಾಸಕ ಹರತಾಳು ಹಾಲಪ್ಪ; ಸಾರ್ವಜನಿಕರ ಪ್ರಶಂಸೆ

halappa accident

ಶಿವಮೊಗ್ಗ: ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ನೆವಟೂರು ಸಮೀಪದ ಆನೆಕೆರೆ ಗ್ರಾಮದ ಬಳಿ ಸ್ಕೂಟಿಯಿಂದ ಬಿದ್ದು ರಕ್ತಸ್ರಾವಗೊಂಡಿದ್ದ ಮಹಿಳೆಯನ್ನು ಶಾಸಕ, ಎಂಎಸ್ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಅವರು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ.

ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ದೀಪಾ ಆಚಾಪುರ ಎಂಬುವವರೇ ಅಪಘಾತದಿಂದ ಗಾಯಗೊಂಡವರಾಗಿದ್ದಾರೆ. ಇವರು ರಿಪ್ಪನ್ ಪೇಟೆಯಿಂದ ಆನಂದಪುರಕ್ಕೆ ಹೋಗುವ ಮಾರ್ಗದಲ್ಲಿ ಸ್ಕೂಟಿಯಿಂದ ಬಿದ್ದು, ತೀವ್ರ ಗಾಯಗೊಂಡಿದ್ದರು. ಅದೇ ಮಾರ್ಗದಲ್ಲಿ ತೆರಳಯತ್ತಿದ್ದ ಶಾಸಕ ಹಾಲಪ್ಪ ಕೂಡಲೇ ವಾಹನ ನಿಲ್ಲಿಸಿ ಅವರನ್ನು ತಮ್ಮ ವಾಹನದಲ್ಲಿಯೇ ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಬಳಿಕ ಅವರಿಗೆ ಚಿಕಿತ್ಸೆ ಕೊಡಿಸಿ ಅಲ್ಲಿಂದ ತೆರಳಿದ್ದಾರೆ.

ಶುಕ್ರವಾರ ಮಧ್ಯಾಹ್ನ ಶಾಸಕರು ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ ಸಾಗರದಿಂದ ರಿಪ್ಪನ್‌ಪೇಟೆಗೆ ಶಾಸಕರು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಶಾಸಕರ ಈ ಕಾರ್ಯವೈಖರಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

Exit mobile version