ಚಿತ್ರದುರ್ಗ: ಮುರುಘಾ ಮಠದ ಅಧೀನದಲ್ಲಿರುವ ಎಸ್‌ಜೆಎಂ ವಿದ್ಯಾಪೀಠದ ನೂತನ ಕಾರ್ಯದರ್ಶಿಯಾಗಿ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರು ಮಂಗಳವಾರ ಅಧಿಕಾರ ಸ್ವೀಕರಿಸಿದರು. ಮುರುಘಾ ಮಠದ ಉಸ್ತುವಾರಿ ಬಸವ ಪ್ರಭು ಸ್ವಾಮೀಜಿ ಅವರು ಶಾಸಕರಿಗೆ ಅಧಿಕಾರ ಹಸ್ತಾಂತರ ಮಾಡಿದರು.
ಅಧಿಕಾರ ಸ್ವೀಕರಿಸಿದ ಬಳಿಕ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಮಾತನಾಡಿ, ಈ ಹಿಂದೆ ನಡೆದ ಸಭೆಯಲ್ಲಿ ತಾತ್ಕಾಲಿಕ ಕಮಿಟಿ ರಚನೆ ಆಗಿತ್ತು. ಆಗ ನನ್ನನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಿದ್ದರು. ಇಂದು ಅಧಿಕಾರ ಕೂಡ ಹಸ್ತಾಂತರವಾಗಿದೆ. ಈ ಅಧಿಕಾರ ಬಯಸದೆ ಬಂದ ಭಾಗ್ಯ, ನಮ್ಮ ತಾತನ ಕಾಲದಿಂದ ನಾವು ಮಠದ ಭಕ್ತರಾಗಿದ್ದು, ಮಠದ ಸೇವೆ ಮಾಡಲು ಒಂದೊಳ್ಳೆ ಅವಕಾಶ ಸಿಕ್ಕಿದೆ. ಸಿಕ್ಕ ಅವಕಾಶವನ್ನು ಯಶಸ್ವಿಯಾಗಿ ನಿಭಾಯಿಸುತ್ತೇನೆ ಎಂದು ತಿಳಿಸಿದರು.
ಈ ಹಿಂದೆ ಮಠ ಯಾವ ರೀತಿ ನಡೆಯುತ್ತಿತ್ತು, ಅದೇ ರೀತಿಯಾಗಿ ನಡೆಸಿಕೊಂಡು ಹೋಗುವೆ. ಮಠದ ಭಕ್ತರು, ಮುರುಘೇಶನ ಆಶೀರ್ವಾದ ಇದೆ. ನಾಲ್ಕು ವಾರಗಳಲ್ಲಿ ಅಧಿಕಾರ ಹಸ್ತಾಂತರ ಮಾಡುವಂತೆ ಹೈಕೋರ್ಟ್ ಹೇಳಿತ್ತು. ಹೀಗಾಗಿ ಹೈಕೋರ್ಟ್ ಆದೇಶದಂತೆ ಹಿಂದಿನ ಆಡಳಿತಾಧಿಕಾರಿ ಪಿ.ಎಸ್.ವಸ್ತ್ರದ್ ಎಲ್ಲಾ ದಾಖಲೆಗಳನ್ನು ನಮಗೆ ನೀಡಬೇಕು ಎಂದು ಹೇಳಿದರು.
ಇದನ್ನೂ ಓದಿ | Electricity Bill: ಸರ್ಕಾರಕ್ಕೆ ಕೆಟ್ಟ ಹೆಸರು ಬೇಕಾ? ಕೂಡಲೇ ವಿದ್ಯುತ್ ದರ ತಗ್ಗಿಸಿ; ಸಿಎಂಗೆ ತನ್ವೀರ್ ಸೇಠ್ ಪತ್ರ
ಮುರುಘಾ ಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ಮಠದ ಆಡಳಿತಾಧಿಕಾರಿ ನೇಮಕ ಸಂಬಂಧ ನಾವು ಯಾವುದೇ ಮೇಲ್ಮನವಿ ಸಲ್ಲಿಸಲ್ಲ ಎಂದು ಅಡ್ವೊಕೇಟ್ ಜನರಲ್ ತಿಳಿಸಿದ್ದಾರೆ. ಅವರ ಮಾತಿನಿಂದ ನಮಗೆ ತುಂಬಾ ಸಂತೋಷವಾಗಿದೆ. ಮುರುಘಾ ಶರಣರು ಇದ್ದಾಗ ಹೇಗಿತ್ತು, ಹಾಗೆ ಮಠವನ್ನು ನಡೆಸಿಕೊಂಡು ಹೋಗಲು ಚಿಂತನೆ ಮಾಡಿದ್ದೇವೆ. ಈ ಕೂಡಲೇ ಹಿಂದಿನ ಆಡಳಿತಾಧಿಕಾರಿ ಪಿ.ಎಸ್. ವಸ್ತ್ರದ್ ಬಂದು ಅಧಿಕಾರ ಹಸ್ತಾಂತರ ಮಾಡಬೇಕು. ಗುರುಗಳು ಬರುವವರೆಗೆ ತಾತ್ಕಾಲಿಕ ಸಮಿತಿ ಇರುತ್ತದೆ ಎಂದು ಹೇಳಿದರು.
ಶಾಸಕರ ಬೆಂಬಲ ಮಠಕ್ಕೆ ಆನೆ ಬಲ
ಮುರುಘಾ ಶರಣರು ಆದಷ್ಟು ಬೇಗ ಹೊರಗೆ ಬರಲಿ ಎಂಬುವುದೇ ನಮ್ಮ ಆಶಯ. ಜನರಿಗೆ ಇದು ವ್ಯವಸ್ಥಿತ ಷಡ್ಯಂತ್ರ ಎಂಬುದು ತಿಳಿಯಬೇಕು. ಮಾಧ್ಯಮದವರು ಶರಣರ ಬಗ್ಗೆ ಹೆಚ್ಚು ಅಪಪ್ರಚಾರ ಮಾಡಿದರು ಎಂದು ಆರೋಪಿಸಿದ ಅವರು, ಭಾರತ್ ಜೋಡೊ ಯಾತ್ರೆ ಬಂದಾಗ ಸಾವಿರಾರು ಜನರು ಬಂದು ದಾಸೋಹ ಮಾಡಿದರು. ನಾವು ಯಾರ ಬಳಿಯೂ ದೇಣಿಗೆ ಕೇಳಿಲ್ಲ. ಮುರುಘಾ ಶರಣರ ಶ್ರಮ ಹಾಗೂ ಮಠದ ಎಲ್ಲ ಶರಣರ ಶ್ರಮದ ಫಲವಾಗಿ ಇಂದು ಮುರುಘಾ ಮಠ ಬೆಳೆದಿದೆ ಎಂದು ಬಸವಪ್ರಭು ಸ್ವಾಮೀಜಿ ತಿಳಿಸಿದರು.
ಕೆಲವರು ಬೇಕಂತಲೇ ಮಠಕ್ಕೆ ಆಡಳಿತಾಧಿಕಾರಿ ಆಯ್ಕೆ ಮಾಡಿದರು. ಯಾವ ಮಠಕ್ಕೂ ಆಡಳಿತಾಧಿಕಾರಿ ನೇಮಕ ಮಾಡುವಂತಿಲ್ಲ ಎಂದು ಹೈಕೋರ್ಟ್ ಹೇಳಿದೆ. ನ್ಯಾಯಾಲಯದ ತೀರ್ಪಿಗೆ ನಾವು ತಲೆ ಬಾಗುತ್ತೇವೆ. ಶಾಸಕರು ಮುಂದೆ ಬಂದು ಕಾರ್ಯದರ್ಶಿ ಸ್ಥಾನ ಪಡೆದಿದ್ದಾರೆ. ಅವರ ಬೆಂಬಲದಿಂದ ನಮಗೆ ಆನೆ ಬಲ ಬಂದಂತಾಗಿದೆ. ಮುರುಘಾ ಶ್ರೀಗಳು ಆದಷ್ಟು ಬೇಗ ಬಂದು ಪೀಠದಲ್ಲಿ ಕೂರಬೇಕು ಎಂದು ಹೇಳಿದರು.