ಚಿಕ್ಕಮಗಳೂರು: ಕಾಡಾನೆ ದಾಳಿಯಿಂದ (Elephant Attack) ಮಹಿಳೆಯೊಬ್ಬರು ಮೃತಪಟ್ಟ ಘಟನೆ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದ ಚಿಂದಿಯಾಗಿರುವ ತಮ್ಮ ಬಟ್ಟೆಯೊಂದಿಗೆ ವಿಡಿಯೊ ಮಾಡಿರುವ ಶಾಸಕರು, ಇದೊಂದು ವ್ಯವಸ್ಥಿತ ಪಿತೂರಿ ಎಂದು ಆರೋಪಿಸಿದ್ದಾರೆ.
ಮೂಡಿಗೆರೆ ತಾಲೂಕಿನ ಕುಂದೂರಿನಲ್ಲಿ ಭಾನುವಾರ ಸಂಜೆ ಘಟನೆ ನಡೆದಿದೆ. ಗ್ರಾಮಸ್ಥರು ಎಂಪಿ ಕುಮಾರಸ್ವಾಮಿ ಅವರನ್ನು ಅಟ್ಟಾಡಿಸಿ ಹೊಡೆದಿದ್ದಾರೆ ಎನ್ನಲಾಗಿದೆ. ಉದ್ರಿಕ್ತಗೊಂಡ ಗ್ರಾಮಸ್ಥರನ್ನು ತಡೆಯಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಏತನ್ಮಧ್ಯೆ, ಘಟನೆಯಲ್ಲಿ ಪೊಲೀಸರ ವೈಫಲ್ಯವೂ ಇದೆ ಎಂಬುದಾಗಿ ಶಾಸಕರು ಆರೋಪಿಸಿದ್ದಾರೆ.
ಯಾಕೆ ಆಕ್ರೋಶ?
ಭಾನುವಾರ ಬೆಳಗ್ಗೆ ಕಾಡಾನೆ ದಾಳಿಯಿಂದ ಶೋಭಾ ಎಂಬುವರು ಮೃತಪಟ್ಟಿದ್ದರು. ಘಟನೆಯಿಂದಾಗಿ ಗ್ರಾಮಸ್ಥರು ರೊಚ್ಚಿಗೆದ್ದಿದ್ದರು. ಸ್ಥಳೀಯ ಶಾಸಕರವಾಗಿರುವ ಎಂಪಿ ಕುಮಾರಸ್ವಾಮಿ ಅವರು ಬೆಳಗ್ಗೆ ಘಟನೆ ನಡೆದರೂ ಸಂಜೆಯ ತನಕ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬುದೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಸಂಜೆಯ ವೇಳೆಗೆ ಶಾಸಕರು ಸ್ಥಳಕ್ಕೆ ಬಂದಿದ್ದು, ಈ ವೇಳೆ ಮಾತಿನ ಚಕಮಕಿಯೊಂದಿಗೆ ಆರಂಭಗೊಂಡ ಆಕ್ರೋಶ ಥಳಿಸುವ ಮಟ್ಟಕ್ಕೆ ಮುಂದುವರಿದಿದೆ ಎನ್ನಲಾಗಿದೆ. ಪೊಲೀಸರ ಭದ್ರತೆಯನ್ನು ಲೆಕ್ಕಿಸದೇ ಗ್ರಾಮಸ್ಥರು ಶಾಸಕರಿಗೆ ಅಟ್ಟಾಡಿಸಿ ಹೊಡೆದಿದ್ದಾರೆ ಎನ್ನಲಾಗಿದೆ.
ಶಾಸಕರ ಅರೋಪವೇನು?
ಗ್ರಾಮಸ್ಥರು ಅನಗತ್ಯವಾಗಿ ಹಲ್ಲೆ ಮಾಡಿದ್ದಾರೆ. ಇದು ವ್ಯವಸ್ಥಿತ ಪಿತೂರಿಯಾಗಿದೆ. ನಾನು ಆನೆಯನ್ನು ಸಾಕುತ್ತಿದ್ದೇನೆ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ. ಘಟನೆಯಲ್ಲಿ ಪೊಲೀಸರ ವೈಫಲ್ಯವೂ ಇದೆ. ನನಗೆ ಭದ್ರತೆ ಒದಗಿಸಲು ಪೊಲೀಸರು ವಿಫಲಗೊಂಡರು. ನನ್ನ ಹಾದಿ ತಪ್ಪಿಸಿ ಮುಂದೆ ಕರೆದುಕೊಂಡು ಹೋದರು ಎಂದು ಎಂಪಿ ಕುಮಾರಸ್ವಾಮಿ ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ | Voter data | ಎಲ್ಲಾ ಮಾಡ್ತಿರೋದು ಮಂತ್ರಿಗಳಿಗೆ ಸೇರಿದ ಬೇನಾಮಿ ಹೆಸರಿನ ಸಂಸ್ಥೆ ಎಂದ ಎಚ್.ಡಿ ಕುಮಾರಸ್ವಾಮಿ