ದಾವಣಗೆರೆ: ಹೊನ್ನಾಳಿಯ ಬಿಜೆಪಿ ಶಾಸಕರಾಗಿರುವ ಎಂ.ಪಿ. ರೇಣುಕಾಚಾರ್ಯ (MP Renukacharya) ಅವರು ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಂಡು ಅಧಿಕಾರಿಗಳಿಂದಲೂ, ಸಿಎಂ ಸೇರಿದಂತೆ ಬಿಜೆಪಿ ನಾಯಕರಿಂದಲೂ ಬೈಸಿಕೊಂಡಿದ್ದಾರೆ!
ಹೊನ್ನಾಳಿಯಲ್ಲಿ 1938 ಕೋಟಿ ವೆಚ್ಚ ವಿವಿಧ ಕಾಮಗಾರಿ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜನೆಯಾಗಿತ್ತು. ಇದೊಂದು ಸರ್ಕಾರಿ ಕಾರ್ಯಕ್ರಮವಾಗಿದ್ದು, ಇಲ್ಲಿ ಬಿಜೆಪಿಯ ಬಗ್ಗೆ ಪ್ರಚಾರ ಮಾಡಲು ಹೊರಟಿದ್ದರು ರೇಣುಕಾಚಾರ್ಯ.
ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರು ಭಾಗಿಯಾದ ಕಾರ್ಯಕ್ರಮ ಇದಾಗಿತ್ತು. ಈ ಕಾರ್ಯಕ್ರಮ ಆರಂಭಕ್ಕೆ ಮೊದಲು ರೇಣುಕಾಚಾರ್ಯ ಮತ್ತು ಸರ್ಕಾರಿ ಅಧಿಕಾರಿಗಳ ನಡುವೆ ವಾಗ್ವಾದ ಉಂಟಾಯಿತು. ಕಾರ್ಯಕ್ರಮ ನಡೆಯುವ ವೇದಿಕೆಯ ಮುಂಭಾಗದಲ್ಲಿ ಬಿಜೆಪಿ ಬಾವುಟ ಹಾರಿಸಲು ಮುಂದಾಗಿದ್ದರು. ಆಗ ಅಧಿಕಾರಿಗಳು ಇದನ್ನು ಆಕ್ಷೇಪಿಸಿದ್ದರು.
ಆಗ ವೇದಿಕೆ ಮಾತ್ರ ಸರ್ಕಾರದ್ದು, ವೇದಿಕೆ ಮುಂಭಾಗ ನಮ್ಮದು. ಇಲ್ಲಿ ಇರುವವರೆಲ್ಲಾ ಬಿಜೆಪಿಯವರೇ, ಕಾಂಗ್ರೆಸ್ ನವರು ಯಾರು ಇಲ್ಲ. ಬಿಜೆಪಿ ಬಾವುಟ ಏಕೆ ಪ್ರದರ್ಶನ ಮಾಡಬಾರದು, ಯಾಕ್ರೀ ಬಾವುಟ ಹಾರಿಸಬಾರದು ಎಂದು ಅಧಿಕಾರಿಗಳೊಂದಿಗೆ ಜತೆ ರೇಣುಕಾಚಾರ್ಯ ವಾಗ್ವಾದ ನಡೆಸಿದರು.
ವೇದಿಕೆಯಲ್ಲೇ ಬಿಜೆಪಿಗೆ ಸೇರ್ಪಡೆಗೆ ಯತ್ನ
ಈ ನಡುವೆ ರೇಣುಕಾಚಾರ್ಯ ಅವರು ಸರ್ಕಾರಿ ಕಾರ್ಯಕ್ರಮದ ವೇದಿಕೆಯಲ್ಲೇ ಬೇರೆ ಪಕ್ಷದವರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಮುಂದಾದರು. ರೇಣುಕಾಚಾರ್ಯ ಅವರ ನಡೆಯಿಂದ ಗಲಿಬಿಲಿಯಾದ ಬೊಮ್ಮಾಯಿ, ಯಡಿಯೂರಪ್ಪ ಇಬ್ಬರೂ ಗರಂ ಆದರು.
ಅಧಿಕಾರಿಗಳಿಗೆ ಸನ್ಮಾನ ಮಾಡಲು ಯತ್ನ
ಇದರ ನಡುವೆ, ರೇಣುಕಾಚಾರ್ಯ ಅವರು ಅಧಿಕಾರಿಗಳಿಗೆ ಸನ್ಮಾನ ಮಾಡಲು ಮುಂದಾಗಿದ್ದು, ಸಿಎಂಗೆ ಸಿಟ್ಟು ಉಂಟು ಮಾಡಿತು. ಟೈಂ ಆಗಿದೆ ಅದೆಲ್ಲ ಬೇಡ ಅಂತ ಗರಂ ಆದರು ಬೊಮ್ಮಾಯಿ. ಬೊಮ್ಮಾಯಿ ಸೂಚನೆಯಂತೆ ಸನ್ಮಾನ ಕಾರ್ಯಕ್ರಮವನ್ನು ರೇಣುಕಾಚಾರ್ಯ ಅವರು ಅರ್ಧಕ್ಕೇ ಕೈ ಬಿಟ್ಟರು.
ನಾನು ನಿಮ್ಮ ಸೇವಕ ಎಂದ ರೇಣುಕಾಚಾರ್ಯ
ಇಷ್ಟೆಲ್ಲ ಆದ ಬಳಿಕ ಮಾತನಾಡಿದ ಶಾಸಕ ರೇಣುಕಾಚಾರ್ಯ ಅವರು, ನಾನು ಹೊನ್ನಾಳಿ ಹುಲಿನೂ ಅಲ್ಲ, ಸಿಂಹನೂ ಅಲ್ಲ. ನಾನು ನಿಮ್ಮ ಸೇವಕ ಎಂದರು. ʻʻಹೊನ್ನಾಳಿ-ನ್ಯಾಮತಿ ಜನತೆ ನನ್ನನ್ನು ಮನೆ ಮಗನಂತೆ ನೋಡಿಕೊಳ್ಳುತ್ತಿದ್ದಾರೆ. ಕೋವಿಡ್ ಸೆಂಟರ್‌ನಲ್ಲಿ ನಿಮ್ಮ ಜೊತೆ ನಾನಿದ್ದೆ. ಅದು ಕೋವಿಡ್ ಸೆಂಟರ್ ಅಲ್ಲ, ಪಿಕ್ನಿಕ್ ಸೆಂಟರ್‌ನಂತಿತ್ತು. ಕೋವಿಡ್ ಸೆಂಟರ್ ಒಂದು ರೀತಿ ಮನೆಯಂತೆ ಇತ್ತುʼʼ ಎಂದರು.
ʻʻಹೊನ್ನಾಳಿ-ನ್ಯಾಮತಿ ಕ್ಷೇತ್ರದಲ್ಲಿ 4500 ಕೋಟಿಗೂ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಮಾಡಿದ್ದೀನಿ. ಇದು ಸುಳ್ಳು ಎಂದು ಪ್ರೂವ್ ಮಾಡಿದ್ರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ. ನಾನು ಹೇಳೋದು ಸುಳ್ಳು ಎಂದು ಸಾಬೀತು ಮಾಡಿದರೆ ಚುನಾವಣೆಯಲ್ಲಿ ನಿಲ್ಲೋದಿಲ್ಲʼʼ ಎಂದರು.
ರೇಣುಕಾಚಾರ್ಯರನ್ನು ಹೊಗಳಿದ ಬೊಮ್ಮಾಯಿ
ಸಮಾರಂಭದಲ್ಲಿ ರೇಣುಕಾಚಾರ್ಯಾ ಅವರನ್ನು ಹೊನ್ನಾಳಿ ಹುಲಿ ಎಂದು ಸಿಎಂ ಬೊಮ್ಮಾಯಿ ಹಾಡಿ ಹೊಗಳಿದರು. ರೇಣುಕಾಚಾರ್ಯ ಅವರು ಕ್ಷೇತ್ರವನ್ನು ತನ್ನ ಮಕ್ಕಳ ರೀತಿ ಪ್ರೀತಿ ಮಾಡುತ್ತಾರೆ ಎಂದರು.
ಇದನ್ನೂ ಓದಿ : Puneeth Rajkumar: ಪೋಸ್ಟರ್‌ಗೆ ಸೀಮಿತವಾಯಿತು ಸಿಎಂ ಬಸವರಾಜ ಬೊಮ್ಮಾಯಿ ಘೋಷಿಸಿದ ಸ್ಫೂರ್ತಿ ದಿನ