ಚಾಮರಾಜನಗರ: ಜನರು ಆ ನೀರೊಳಗೆ ನಡೆಯಬಹುದು, ಆದರೆ ಶಾಸಕರಿಂದ ಆಗಲ್ಲ! ಮೊಣಕಾಲುದ್ದ ನೀರಿಲ್ಲದಿದ್ದರೂ ಮಳೆ ಹಾನಿ ವೀಕ್ಷಣೆಗೆ ತೆಪ್ಪದಲ್ಲಿ ಶಾಸಕ ಎನ್.ಮಹೇಶ್ ತೆರಳಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.
ಜಿಲ್ಲೆಯ ಯಳಂದೂರು ತಾಲೂಕಿನ ಮಾಂಬಳ್ಳಿಯಲ್ಲಿ ನಾಲ್ಕು ದಿನಗಳ ಹಿಂದೆ ಶಾಸಕ ಎನ್. ಮಹೇಶ್ ಮಳೆ ಹಾನಿ ಪರಿಶೀಲಿಸಿದ್ದ ವಿಡಿಯೋ ತಡವಾಗಿ ಬೆಳಕಿಗೆ ಬಂದಿದೆ. ಕೇವಲ ಒಂದೂವರೆ ಅಡಿ ನೀರಿನಲ್ಲಿ ಶಾಸಕ ಎನ್. ಮಹೇಶ್ ತೆಪ್ಪದಲ್ಲಿ ಸವಾರಿ ಮಾಡಿದ್ದು, ಆ ನೀರೊಳಗೆ ನಡೆಯಬಹುದಾಗಿದ್ದರೂ ನೀರಿಗೆ ಇಳಿಯದೆ ಗ್ರಾಮಸ್ಥರಿಂದ ತೆಪ್ಪ ತಳ್ಳಿಸಿಕೊಂಡು ಸುಮಾರು ದೂರ ಸಾಗಿ ಅಧಿಕಾರಿಗಳೊಂದಿಗೆ ಮಳೆ ಹಾನಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ | Narendra Modi | ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ ಭಾರತ 81ರಿಂದ 46ನೇ ಸ್ಥಾನಕ್ಕೆ, ಮೋದಿ ಮೆಚ್ಚುಗೆ
ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದ ಹಲವೆಡೆ ಮನೆಗಳಿಗೆ ನೀರು ನುಗ್ಗಿ, ರಸ್ತೆಗಳು ಜಲಾವೃತವಾಗಿ ಜನರು ಸಂಕಷ್ಟ ಎದುರಿಸುತ್ತಿರಬೇಕಾದರೆ ಶಾಸಕರು ಜನರ ಕಷ್ಟಗಳನ್ನು ಆಲಿಸದೆ ಕಾಟಾಚಾರಕ್ಕೆ ತೆಪ್ಪ ವಿಹಾರ ಮಾಡಿ ಹೋಗಿದ್ದಾರೆ ಎಂದು ಸಾರ್ವಜನಿಕರು ಟೀಕಿಸಿದ್ದಾರೆ.
ಜ್ವರ ಇದ್ದಿದ್ದರಿಂದ ತೆಪ್ಪದಲ್ಲಿ ಹೋಗಿದ್ದೆ ಎಂದ ಎನ್. ಮಹೇಶ್
ಪ್ರವಾಹ ಪೀಡಿತ ಪ್ರದೇಶದಲ್ಲಿ ತೆಪ್ಪದ ಸವಾರಿ ಬಗ್ಗೆ ಚಾಮರಾಜನಗರದಲ್ಲಿ ಪ್ರತಿಕ್ರಿಯಿಸಿರುವ ಶಾಸಕ ಎನ್.ಮಹೇಶ್ “ಅಂದು ನನಗೆ ಜ್ವರ ಇತ್ತು. ಹೀಗಾಗಿ ತೆಪ್ಪದಲ್ಲಿ ಹೋಗಿದ್ದೆ. ಇಲ್ಲದಿದ್ದರೆ ನಡೆದುಕೊಂಡು ಹೋಗುತ್ತಿದ್ದೆ. ಗ್ರಾಮ ಜಲಾವೃತವಾಗಿದ್ದರಿಂದ ತೊಡೆ ಮಟ್ಟದವರೆಗೆ ನೀರಿತ್ತು. ಹೀಗಾಗಿ ತೆಪ್ಪದಲ್ಲಿ ತೆರಳಿದ್ದೇನೆʼʼ ಎಂದು ಸ್ಪಷ್ಟಪಡಿಸಿದ್ದಾರೆ.
ಅರ್ಧ ಅಡಿ ಅಥವಾ ಒಂದು ಅಡಿ ನೀರಿದ್ದಾಗ ತೆಪ್ಪ ಮುಂದೆಯೇ ಹೋಗುವುದಿಲ್ಲ. ಅಲ್ಲಿ ಮೂರಡಿಗಿಂತ ನೀರು ಹೆಚ್ಚಿದ್ದರಿಂದ ತೆಪ್ಪದಲ್ಲಿ ತೆರಳಬೇಕಾಯಿತು. ನಾಟಕ ಆಡುವುದು ನನಗೆ ಗೊತ್ತಿಲ್ಲ, ವಿಡಿಯೋ ವೈರಲ್ ಮಾಡಿರುವವರು ನಾಟಕ ಆಡುತ್ತಿದ್ದಾರೆ ಎಂದು ಅವರು ಕಿಡಿ ಕಾರಿದ್ದಾರೆ.
ಇದನ್ನೂ ಓದಿ | Video Viral | ಚಳ್ಳಕೆರೆ ತಹಸೀಲ್ದಾರ್ ವರ್ತನೆಗೆ ಜನಾಕ್ರೋಶ; ಕೆರೆ ಕೋಡಿಯಲ್ಲಿ ಬಿದ್ದು ಹೊರಳಾಟ!