ಬೆಂಗಳೂರು: ಬೆಂಗಳೂರು ಕರಗವನ್ನು (Bangalore Karaga) ನಾಟಕ ಎಂದು ಹೀಗಳೆದ ಆರೋಪ ಎದುರಿಸುತ್ತಿರುವ ಶಾಂತಿನಗರದ ಕಾಂಗ್ರೆಸ್ ಶಾಸಕ ಎನ್.ಎ ಹ್ಯಾರಿಸ್ (MLA NA Harris) ಅವರು ಶುಕ್ರವಾರ ತಿಗಳರ ಪೇಟೆಯಲ್ಲಿರುವ ಶ್ರೀಧರ್ಮರಾಯಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿ ಕ್ಷಮೆ ಯಾಚಿಸಿದರು.
ಕರಗದ ಬಗ್ಗೆ ಅವಹೇಳನಕಾರಿಯಾಗಿದ್ದ ಮಾತನಾಡಿದ್ದನ್ನು ಖಂಡಿಸಿ ಸಮಾಜದ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಅದಕ್ಕಿಂತಲೂ ಹೆಚ್ಚಾಗಿ ಸಾಮಾಜಿಕ ಜಾಲತಾಣದಲ್ಲಿ ಹ್ಯಾರಿಸ್ ವಿರುದ್ಧ ತೀವ್ರ ಸಿಟ್ಟು ವ್ಯಕ್ತವಾಗಿತ್ತು. ಶಾಂತಿ ನಗರ ಕ್ಷೇತ್ರದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು ಕೆಲವರು ಕರಗದ ರೀತಿಯಲ್ಲಿ ನಾಟಕ ಮಾಡುತ್ತಿದ್ದಾರೆ ಎಂದು ಹೇಳಿದ್ದರು. ಇಂಥ ಮಾತಿಗೆ ತಿಗಳರ ಸಮಾಜ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
ನಂತರ ಎನ್.ಎ ಹ್ಯಾರಿಸ್ ಅವರು ಸಮಾಜದ ಕ್ಷಮೆ ಕೋರಿದ್ದರಾದರೂ ಆಕ್ರೋಶ ಕಡಿಮೆಯಾಗಿರಲಿಲ್ಲ. ಸಾಮಾಜಿಕ ಜಾಲತಾಣದಲ್ಲೂ ಆಕ್ರೋಶ ಮುಂದುವರಿದಿತ್ತು. ಈ ಹಿನ್ನೆಲೆಯಲ್ಲಿ ಹ್ಯಾರಿಸ್ ಅವರು ಶುಕ್ರವಾರ ನೇರವಾಗಿ ದೇವಾಲಯಕ್ಕೆ ಆಗಮಿಸಿದರು.
ಶ್ರೀ ಧರ್ಮರಾಯ ದೇವಾಲಯಕ್ಕೆ ಆಗಮಿಸಿದ ಅವರು ಅಲ್ಲಿ ದೇವರ ಮುಂದೆ ನಿಂತು ಕ್ಷಮೆ ಯಾಚನೆ ಮಾಡಿದರು. ಕರಗ ಸಮಿತಿಯ ಅಧ್ಯಕ್ಷರಾಗಿರುವ ಸತೀಶ್ ಕೂಡಾ ಉಪಸ್ಥಿತರಿದ್ದರು.
ಬಳಿಕ ಮಾತನಾಡಿದ ಕರಗ ಸಮಿತಿ ಅಧ್ಯಕ್ಷ ಸತೀಶ್ ಅವರು, ʻʻಶಾಸಕರು ಈಗಾಗಲೇ ನಮ್ಮ ಸಮಾಜದ ಕ್ಷಮೆ ಕೇಳಿದ್ದಾರೆ. ಆದರೂ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ರೋಶ ಮುಂದುವರಿದಿದೆ. ಹೀಗಾಗಿ ಖುದ್ದಾಗಿ ಶಾಸಕರು ಆಗಮಿಸಿ ದೇವರ ಬಳಿ ಕ್ಷಮೆ ಕೇಳಿದ್ದಾರೆ. ನಮ್ಮ ಸಮಾಜದವರು ಇದನ್ನು ಇಲ್ಲಿಗೆ ದಯವಿಟ್ಟು ಬಿಡಬೇಕು ಎಂದು ಮನವಿ ಮಾಡ್ತೀನಿʼʼ ಎಂದು ಹೇಳಿದ್ದಾರೆ.
ಈ ನಡುವೆ, ʻʻದಯವಿಟ್ಟು ಎಲ್ಲರಲ್ಲೂ ಮನವಿ ಮಾಡಿಕೊಳ್ತೀನಿ. ಯಾರೂ ಕರಗದ ಬಗ್ಗೆ ಅವಹೇಳನಕಾರಿಯಾಗಿ. ಮಾತಾಡಬೇಡಿ, ಮಾತಾಡಿದ್ರೆ ಇದನ್ನು ತೀವ್ರವಾಗಿ ವಿರೋಧಿಸ್ತೀವಿʼʼ ಎಂದು ಹೇಳಿದರು ಸತೀಶ್.
ಹಾಗಿದ್ದರೆ ಶಾಸಕ ಎನ್.ಎ ಹ್ಯಾರಿಸ್ ಹೇಳಿದ್ದೇನು?
ಶಾಂತಿ ನಗರದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ್ದ ಹ್ಯಾರಿಸ್ ಅವರು, ಆಡಳಿತ ಪಕ್ಷವನ್ನು ಟೀಕಿಸುವ ಭರದಲ್ಲಿ ʻಅವರು ನಾಟಕ ಮಾಡುತ್ತಿದ್ದಾರೆ. ಇದೊಂದು ಎರಡು ತಿಂಗಳು ನಾಟಕದ ಟೈಮ್. ಹಬ್ಬಕ್ಕೆ ಕರಗ ಟೈಮ್‌ನಲ್ಲೆಲ್ಲ ಹಾಕಿಕೊಂಡು ಬರ್ತಾರಲ್ಲ. ಅದೇ ಥರ ಇವರೆಲ್ಲ ಈಗ ಓಡಾಡ್ತಿರೋದುʼʼ ಎಂದು ಹೇಳಿದ್ದರು.
ಇದಕ್ಕೆ ತಿಗಳರ ಸಮಾಜ ಸಿಡಿದೆದ್ದಿತ್ತು. ಒಂದು ಹಂತದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆಗೂ ಮುಂದಾಗಿತ್ತು. ಆದರೆ, ಅಷ್ಟು ಹೊತ್ತಿಗೆ ಹ್ಯಾರಿಸ್ ಕ್ಷಮಾಪಣೆ ಕೇಳಿದ್ದರಿಂದ ಪ್ರತಿಭಟನೆ ಹಿಂದೆ ಪಡೆಯಲಾಗಿತ್ತು. ಅಷ್ಟಾದರೂ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ಮುಂದುವರಿದಿದ್ದರಿಂದ ಹ್ಯಾರಿಸ್ ದೇವಸ್ಥಾನಕ್ಕೇ ಭೇಟಿ ನೀಡಿ ಕ್ಷಮೆ ಯಾಚಿಸಿದ್ದಾರೆ.
Republic Day : ಹ್ಯಾರಿಸ್ ಕಾರ್ಯಕ್ರಮದಲ್ಲಿ ಹಾರದ ತ್ರಿವರ್ಣ ಧ್ವಜ: ಸಿಎಂ ಸಮ್ಮುಖದಲ್ಲೇ ಎರಡೆರಡು ಎಡವಟ್ಟು