Site icon Vistara News

ಗೃಹ ಸಚಿವರ ನಿವಾಸಕ್ಕೇ ರಕ್ಷಣೆಯಿಲ್ಲ ಎಂದಾದರೆ ಸಾಮಾನ್ಯ ಜನರ ಸ್ಥಿತಿ ಹೇಗೆ?: ಶಾಸಕ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಗೃಹ ಸಚಿವರ ನಿವಾಸಕ್ಕೆ ಬಿಜೆಪಿಯ ಕಾರ್ಯಕರ್ತರು ಮುತ್ತಿಗೆ ಹಾಕಿ ಪ್ರತಿಭಟನೆ ಮಾಡುತ್ತಾರೆ ಎಂದರೆ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುವುದು ತಿಳಿಯುತ್ತದೆ ಎಂದು ಕಾಂಗ್ರೆಸ್‌ ಶಾಸಕ ಹಾಗೂ ಕೆಪಿಸಿಸಿ ಸಂವಹನಾ ವಿಭಾಗದ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಿಯಾಂಕ್‌ ಖರ್ಗೆ, ಹಾದಿ ಬೀದಿಯಲ್ಲಿ ಹೋಗುವವರು ಪ್ರತಿಭಟನೆ ಮಾಡಿಲ್ಲ. ಬಿಜೆಪಿಯ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಗೃಹ ಸಚಿವರ ಕಚೇರಿಗೆ ನುಗ್ಗಿ ದಾಳಿ ಮಾಡಿದೆ. ಗೃಹ ಸಚಿವರಿಗೆ ತಮ್ಮ ಪಕ್ಷದಲ್ಲಿರುವವರ ಮಾಹಿತಿ ಪಡೆಯಲು ಆಗದಿದ್ದರೆ ಜನರಿಗೆ ಹೇಗೆ ರಕ್ಷಣೆ ನೀಡುತ್ತಾರೆ?. ಅವರ ಕಚೇರಿಗೇ ರಕ್ಷಣೆ ಇಲ್ಲ ಎಂದರೆ ಸಾರ್ವಜನಿಕರ ಸ್ಥಿತಿ ಏನು? ಎಂದು ಪ್ರಶ್ನಿಸಿದರು.

ಈ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದ್ದು, ಗೃಹ ಸಚಿವರು, ಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು. ಮೊನ್ನೆ ಮಂಗಳೂರಲ್ಲಿ, ಈಗ ಬೆಂಗಳೂರಲ್ಲಿ ಇಂತಹ ಘಟನೆ ನಡೆದಿದೆ. ಬಿಜೆಪಿ ಸಂಸದರು ಎಲ್ಲರಿಗೂ ಭದ್ರತೆ ನೀಡಲು ಆಗುವುದಿಲ್ಲ ಎಂದು ಹೇಳಿದ್ದರು. ಆದರೆ ಹೇಗೆ ಬಿಜೆಪಿ ಕಚೇರಿಗಳಿಗೆ ಭದ್ರತೆ ಒದಗಿಸಿದ್ದಾರೆ? ಸರ್ಕಾರ ಮೊದಲು ತಮ್ಮ ಕಾರ್ಯಕರ್ತರನ್ನು ನಿಯಂತ್ರಿಸಲಿ ಎಂದು ಹೇಳಿದರು.

ಇದನ್ನೂ ಓದಿ | Praveen Nettaru | ದ.ಕ. ಉದ್ವಿಗ್ನಗೊಂಡಿದ್ದರೂ ಜಿಲ್ಲೆಗೆ ಬಾರದ ಉಸ್ತುವಾರಿ ಸಚಿವ ಸುನೀಲ್ ಕುಮಾರ್​

ತೇಜಸ್ವಿ ಸೂರ್ಯ ಅವರು ಎಲ್ಲರಿಗೂ ಭದ್ರತೆ ನೀಡಲು ಆಗುವುದಿಲ್ಲ ಎಂದಾದರೆ ಅವರು ಹೇಗೆ ಭದ್ರತೆ ಪಡೆದಿದ್ದಾರೆ? ಅವರು ಹೇಳಿದ್ದು ಸರಿಯಾಗಿದ್ದರೆ, ಬಿಜೆಪಿ ಯುವ ಮೋರ್ಚಾ ಸದಸ್ಯರು ಅವರ ರಾಷ್ಟ್ರೀಯ ಅಧ್ಯಕ್ಷರ ಮಾತು ಕೇಳುತ್ತಿಲ್ಲ. ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ನೀವು ಕಾರ್ಯಕರ್ತರನ್ನು ಯಾವ ಮಟ್ಟಿಗೆ ದುರುಪಯೋಗ ಮಾಡಿಕೊಂಡಿದ್ದೀರಿ ಎಂಬುದಕ್ಕೆ ಇದೇ ಸಾಕ್ಷಿ. ಪರಿಸ್ಥಿತಿ ಕೈ ಮೀರಲು ತತ್ವ ಸಿದ್ಧಾಂತ ಕಾರಣ. ಈಗಲಾದರೂ ಸರ್ಕಾರ ಎಚ್ಚೆತ್ತು ರಾಜ್ಯವನ್ನು ಈ ಹಿಂದಿನಂತೆ ಉದ್ಯೋಗ ಸೃಷ್ಟಿಯಲ್ಲಿ ನಂ.1 ಸ್ಥಾನಕ್ಕೆ ತಂದು, ಶಾಂತಿ ಕಾಪಾಡಬೇಕು ಎಂದರು.

ಎಬಿವಿಪಿ ಹೆಸರರಿಲ್ಲಿ ಪ್ರತಿಭಟನೆ ಆಗುತ್ತಿದೆ ಎಂಬ ಬಿಜೆಪಿ ನಾಯಕರ ಮಾತಿನ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಗೃಹ ಸಚಿವರ ಕಚೇರಿಗೆ ಜನ ನುಗ್ಗಿದ್ದಾರೆ. ಗುಪ್ತಚರ ಇಲಾಖೆ ಕತ್ತೆ ಕಾಯುತ್ತಿದೆಯಾ? ಪೊಲೀಸ್ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಇದು ಯಾವುದೋ ಸಣ್ಣ ಕಚೇರಿ ಮೇಲಿನ ದಾಳಿಯಲ್ಲ, ಬಿಜೆಪಿಯವರು ಮೈ ಮೇಲೆ ಪ್ರಜ್ಞೆ ಇಟ್ಟುಕೊಂಡು ಮಾತನಾಡಲಿ. ಗೃಹ ಸಚಿವರ ನಿವಾಸಕ್ಕೆ ಇಷ್ಟೇನಾ ಭದ್ರತೆ? ಎಬಿವಿಪಿ ಹೆಸರಲ್ಲಿ ಪ್ರತಿಭಟನೆ ಮಾಡಿರುವುದೇ ಆದರೆ ಇದು ಗುಪ್ತಚರ ಇಲಾಖೆ ವೈಫಲ್ಯ ಅಲ್ಲವೇ? ಮುಖ್ಯಮಂತ್ರಿಗಳು ಇದನ್ನು ಸಂಘಟಿತ ಅಪರಾಧ ಎನ್ನುತ್ತಾರೆ. ಹಾಗಾದರೆ ಗುಪ್ತಚರ ಇಲಾಖೆ ಕೆಲಸ ಏನು? ಇದು ಸರ್ಕಾರದ ವೈಫಲ್ಯ ಅಲ್ಲವೇ? ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಈ ವಿಚಾರದಲ್ಲಿ ರಾಜಕೀಯ ಲಾಭ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಶಿವಮೊಗ್ಗದಲ್ಲಿ ಹರ್ಷ ಕೊಲೆ ಆದಾಗ, ಆಳಂದದಲ್ಲಿ ಬಿಜೆಪಿ ಸಂಸದರು ರಾಜಕೀಯ ಲಾಭಕ್ಕೆ ಸೆಕ್ಷನ್ 144 ಉಲ್ಲಂಘನೆ ಮಾಡಿದ್ದರು. ಶಿವಮೊಗ್ಗದಲ್ಲಿ ಹರ್ಷನಿಗಾಗಿ ಈಶ್ವರಪ್ಪ ಮೆರವಣಿಗೆ ಮಾಡಿದ್ದರು. ಈಗ ಪ್ರವೀಣ್ ಮೇಲೆ ಯಾಕೆ ಕನಿಕರ ಇಲ್ಲ. ಕಟೀಲ್ ಅವರ ಕಾರು ಗಾಡಿ ಮಗುಚಲು ಪ್ರಯತ್ನಿಸಿದ್ದು, ಸಚಿವ ಸುನೀಲ್ ಹಾಗೂ ಅಂಗಾರ ಅವರಿಗೆ ದಿಗ್ಬಂಧನ ಹಾಕಿದ್ದು ಯಾರು? ಕಾಂಗ್ರೆಸ್ ನವರಾ? ಜವಾಬ್ದಾರಿ ಸ್ಥಾನಮಾನದಲ್ಲಿ ಇದ್ದವರು ಸುಮ್ಮನೆ ಉಡಾಫೆ ಮಾತುಗಳನ್ನಾಡಲು ನಾಚಿಕೆ ಆಗಬೇಕು ಎಂದು ಹರಿಹಾಯ್ದರು.

ಇದನ್ನೂ ಓದಿ | SDPIಗೆ BJP ಫಂಡಿಂಗ್‌: ಸತ್ಯಜಿತ್‌ ಸುರತ್ಕಲ್‌ ವಿಡಿಯೋ ಬಿಡುಗಡೆ ಮಾಡಿದ ಪ್ರಿಯಾಂಕ್‌ ಖರ್ಗೆ

Exit mobile version