ಯಾದಗಿರಿ: ಹೃದಯಾಘಾತದಿಂದ ನಿಧನರಾದ ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ (Raja Venkatappa Nayaka) ಅವರು ಪಂಚಭೂತಗಳಲ್ಲಿ ಲೀನವಾಗಿದ್ದಾರೆ. ಸುರಪುರ ಪಟ್ಟಣದ ಆಸಾರ್ ಮೊಹಲ್ಲಾದಲ್ಲಿರುವ ರಾಜಮನೆತನದ ರುದ್ರಭೂಮಿಯಲ್ಲಿ ಕುಟುಂಬಸ್ಥರು, ಬಂಧು- ಮಿತ್ರರು, ಸಾವಿರಾರು ಬೆಂಬಲಿಗರು, ಕಾರ್ಯಕರ್ತರ ಸಮ್ಮುಖದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಸೋಮವಾರ ಅಂತ್ಯ ಸಂಸ್ಕಾರ ನೆರವೇರಿತು.
ಪ್ಯಾಪ್ಲಿ ಸಂಸ್ಥಾನದ ಸಂಪ್ರದಾಯದ ಪ್ರಕಾರ ಅಂತ್ಯ ಸಂಸ್ಕಾರ ಮಾಡಲಾಗಿದ್ದು, ಅಂತಿಮ ವಿಧಿ ವಿಧಾನಗಳನ್ನು ರಾಜಾ ವೆಂಕಟಪ್ಪ ನಾಯಕ ಅವರ ಹಿರಿಯ ಪುತ್ರ ರಾಜಾ ವೇಣುಗೋಪಾಲ ನಾಯಕ ನೆರವೇರಿಸಿ, ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ರಾಜಾ ವೆಂಕಟಪ್ಪ ನಾಯಕ ಅವರ ತಂದೆ ಹಾಗೂ ತಾಯಿ ಸಮಾಧಿ ಪಕ್ಕದಲ್ಲಿ ರಾಜಾ ವೆಂಕಟಪ್ಪ ನಾಯಕ ಅವರ ಅಂತ್ಯಕ್ರಿಯೆ ನಡೆದಿದೆ.
ಇದಕ್ಕೂ ಮುನ್ನಾ ರಾಜಾ ವೆಂಕಟಪ್ಪ ನಾಯಕ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸುರಪುರದ ಪ್ರಭು ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ನಂತರ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ರುದ್ರಭೂಮಿಗೆ ಪಾರ್ಥಿವ ಶರೀರವನ್ನು ತೆಗೆದುಕೊಂಡು ಹೋಗಲಾಯಿತು.
ಇದನ್ನೂ ಓದಿ | Constitution and National Unity: ಸಂವಿಧಾನಕ್ಕೆ ಧಕ್ಕೆಯಾದ್ರೆ ದೇಶದಲ್ಲಿ ಸರ್ವಾಧಿಕಾರಿ ಆಡಳಿತ: ಮಲ್ಲಿಕಾರ್ಜುನ ಖರ್ಗೆ
ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸಾಂತ್ವನ
ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ನಾಯಕರು, ಅಂತಿಮ ದರ್ಶನ ಪಡೆದು, ಶಾಸಕರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ರಾಜಾ ವೆಂಕಟಪ್ಪ ನಾಯಕ ಅವರ ಪುತ್ರನಿಗೆ ಸಾಂತ್ವನ ಹೇಳಿದ ಸಿಎಂ ಸಿದ್ದರಾಮಯ್ಯ ಅವರು, ದೇವರು ಅವರ ಆತ್ಮಕ್ಕೆ ಶಾಂತಿ ಕೊಡುತ್ತಾನೆ. ಧೈರ್ಯದಿಂದ ಇರಿ ಎಂದು ಸಾಂತ್ವನ ಹೇಳಿದರು. ಈ ವೇಳೆ ಸಚಿವ ಪ್ರೀಯಾಂಕ ಖರ್ಗೆ ಉಪಸ್ಥಿತರಿದ್ದರು.
ರಾಜಾ ವೆಂಕಟಪ್ಪ ನಾಯಕ ಅವರು ನಿಧನರಾಗಿದ್ದು ದುಖ:ದ ಸಂಗತಿ. ಮಂಡಲ ಪ್ರಧಾನರಾಗಿ ರಾಜಕೀಯಕ್ಕೆ ಪ್ರವೇಶ ಮಾಡಿ ನಂತರ ನಾಲ್ಕು ಬಾರಿ ಶಾಸಕರಾಗಿದ್ದರು. ಅವರು ರಾಜ ಮನೆತನದಿಂದ ಬಂದವರಾಗಿ ಜನ ಸಾಮಾನ್ಯರ ಸೇವೆ ಮಾಡಿದರು. ಬಹಳ ಸಭ್ಯ, ಸರಳ, ಸಜ್ಜನ ರಾಜಕಾರಣಿಯಾಗಿದ್ದರು. ಅವರ ಅಗಲಿಕೆಯು ತುಂಬಲಾರದ ನಷ್ಟವಾಗಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಸಿದ್ದರಾಮಯ್ಯ ಹೇಳಿದರು.
ಖರ್ಗೆ ಕುಟುಂಬಕ್ಕೆ ರಾಜಾ ವೆಂಕಟಪ್ಪ ನಾಯಕ ಆಪ್ತರಾಗಿದ್ದರು. ಹೀಗಾಗಿ ಶಾಸಕರ ಅಂತಿಮ ದರ್ಶನಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಿ, ತಮ್ಮ ರಾಜಕೀಯ ಶಿಷ್ಯನ ಅಂತಿಮ ದರ್ಶನ ಪಡೆದರು. ಈ ವೇಳೆ ಖರ್ಗೆ ಕಾಲಿಗೆ ಬಿದ್ದು ಅತ್ತ ರಾಜಾ ವೆಂಕಟಪ್ಪ ನಾಯಕ ಪುತ್ರ ಕಣ್ಣೀರಿಟ್ಟರು. ಈ ವೇಳೆ ಅವರನ್ನು ತಬ್ಬಿಕೊಂಡು ಖರ್ಗೆ ಧೈರ್ಯ ತುಂಬಿದರು.
ಇದನ್ನೂ ಓದಿ | KN Rajanna : ಕೆ.ಎನ್. ರಾಜಣ್ಣ ಮೇಲೆ ನಡೆಯಿತಾ ವಾಮಾಚಾರ? ಹಾಸನಕ್ಕೆ ಹೋದ್ರೆ ಡೇಂಜರಾ?
ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡಿ, ರಾಜಾ ವೆಂಕಟಪ್ಪ ನಾಯಕ ಅಗಲಿಕೆಯಿಂದ ನನಗೆ ಬಹಳ ನೋವು, ದುಖ:ವಾಗಿದೆ. ಈ ಕುಟುಂಬದ ಜತೆ 50 ವರ್ಷದಿಂದ ಒಡನಾಟವಿದೆ. ವೆಂಕಟಪ್ಪ ನಾಯಕ ನನ್ನ ಜೊತೆಯಲ್ಲಿ ಸಾಕಷ್ಟು ಕೆಲಸ ಮಾಡಿದರು, ನೀರಾವರಿ ಯೋಜನೆಯನ್ನು ಕಾಳಜಿ ವಹಿಸಿ ಅಭಿವೃದ್ಧಿ ಮಾಡಿದರು. ಅವರ ಅಗಲಿಕೆ ನಮಗೆ ತುಂಬಲಾರದ ನಷ್ಟವಾಗಿದೆ. ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ಅವರಿಗೆ ಭಗವಂತ ಕಲ್ಪಿಸಲಿ ಎಂದು ಹೇಳಿದರು.