ಕೋಲಾರ: ʻʻನಾನು ಆಕಸ್ಮಿಕವಾಗಿ ಬ್ರಾಹ್ಮಣರ ಮನೆಯಲ್ಲಿ ಹುಟ್ಟಿದರೆ ಸಾಯುವವರೆಗೂ ನೀವೆಲ್ಲಾ ನನ್ನ ಕಾಲಿಗೆ ನಮಸ್ಕಾರ ಮಾಡುತ್ತಲೇ ಇರಬೇಕು. ಏಕೆಂದರೆ ನಾನು ಬ್ರಾಹ್ಮಣ. ನಾನು ಏನು ಹಲ್ಕಾ ಕೆಲಸ ಮಾಡಿದರೂ ನೀವು ನನಗೆ ಬಗ್ಗಿ ನಮಸ್ಕಾರ ಮಾಡಬೇಕು. ಆದರೆ ಸಂವಿಧಾನ ಇದನ್ನು ಬೇಡ ಎಂದು ಹೇಳುತ್ತದೆʼʼ ಎಂದು ಮಾಜಿ ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ತಿಳಿಸಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಮಾಲೂರು ತಾಲೂಕಿನ ಶಿವಾರಪಟ್ಟಣ ಗ್ರಾಮದಲ್ಲಿ ಕಾಂಗ್ರೆಸ್‌ನಿಂದ ಹಮ್ಮಿಕೊಂಡಿದ್ದ ಪಾದಯಾತ್ರೆಯಲ್ಲಿ ಮಾತನಾಡಿ, ಬಿಜೆಪಿಯ ಹೃದಯವಾದ ಆರ್‌ಎಸ್‌ಎಸ್‌ನ ಸಿದ್ಧಾಂತ ಚಾತುರ್ವರ್ಣ ಪದ್ಧತಿ, ಮನುಸ್ಮೃತಿ. ಅಂದರೆ ಜಾತಿಯ ಶ್ರೇಷ್ಠತೆ ಬಗ್ಗೆ ಹೇಳುತ್ತದೆ. ಯಾರು ಯಾವ ಜಾತಿ ಎಂದು ಜನ್ಮದಿಂದ ನಿರ್ಧಾರವಾಗುತ್ತದೆ. ಯಾರು ಯಾವ ಜಾತಿಯಲ್ಲಿ ಹುಟ್ಟುತ್ತಾರೋ ಅವರು ಬೇರೆ ಜಾತಿಗೆ ಹೋಗುವ ಹಾಗಿಲ್ಲ ಎಂದು ಚಾತುರ್ವರ್ಣ ಪದ್ಧತಿ ಹೇಳುತ್ತದೆ ಎಂದರು.
ʻʻಈಗ ಅಧಿಕಾರ ನಡೆಸುತ್ತಿರುವವರು ಸ್ವಾತಂತ್ರ್ಯದ ಹೋರಾಟದ ಭಾಗವಾಗಿರಲಿಲ್ಲ. ಆದರೆ ಅವರ ಪ್ರಕಾರ ಅವರೇ ದೇಶ ಭಕ್ತರು, ಉಳಿದವರೆಲ್ಲಾ ದೇಶದ್ರೋಹಿಗಳು. ನಾವು ಅಪರಾಧಿಗಳು, ಅವರು ಜಡ್ಜ್‌ಗಳು ಎನ್ನುವ ರೀತಿ ಆಗಿದೆ. ನಮ್ಮ ಶರೀರವನ್ನು, ಪ್ರಾಣವನ್ನು ಹೇಗೆ ನಾವು ಕಾಪಾಡಿಕೊಳ್ಳುತ್ತೇವೆಯೋ ಹಾಗೇ ನಮ್ಮ ಸಂವಿಧಾನವನ್ನು ಕಾಪಾಡಿಕೊಳ್ಳಬೇಕು. ಸಂವಿಧಾನ ಇರಲೇಬೇಕು ಎನ್ನುವವರು ಇಲ್ಲಿ ಸೇರಿದ್ದೇವೆ, ಸಂವಿಧಾನವನ್ನು ತೆಗೆಯಲೇ ಬೇಕು ಎನ್ನುವವರು ಅಲ್ಲಿದ್ದಾರೆʼʼ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಸಿದ್ದರಾಮಯ್ಯ ಎನ್‌ಟಿಆರ್ ಅಲ್ಲ, ರಾಜ್ ಕುಮಾರ್ ಅಲ್ಲ
ಸಿದ್ದರಾಮಯ್ಯನವರು ಎನ್.ಟಿ.ರಾಮರಾವ್ ಅಲ್ಲ, ಡಾ.ರಾಜ್ ಕುಮಾರ್ ಅಲ್ಲ, ದಿಲೀಪ್ ಕುಮಾರ್ ಅಲ್ಲ. ಆದರೂ ಏಕೆ ಸಿದ್ದರಾಮಯ್ಯ ಅವರ ಹುಟ್ಟುಹಬ್ಬಕ್ಕೆ ಅಷ್ಟು ಜನ ಸೇರಿದ್ದರು? ಯಾಕೆಂದರೆ ಅವರು ನಮ್ಮ ಭವಿಷ್ಯದ ಮಾತುಗಳನ್ನು ಎಲ್ಲಿ ಬೇಕಾದರೂ ಧೈರ್ಯದಿಂದ ಹೇಳುತ್ತಾರೆ. ಮಾತಿಲ್ಲದವರಿಗೆ ಮಾತಾಗಿ ಬಾಯಿ ಇಲ್ಲದವರಿಗೆ ಬಾಯಾಗಿ ಸಿದ್ದರಾಮಯ್ಯ ಇದ್ದಾರೆ ಎಂದು ಕೊಂಡಾಡಿದರು.
ಇದನ್ನೂ ಓದಿ | ಎಲ್ಲರಿಗೂ ರಾಷ್ಟ್ರಧ್ವಜ ಸಿಗಲೆಂದು ನಿಯಮ ತಿದ್ದುಪಡಿ, ಹಾಗಾಗಿ ರಾಜಕೀಯ ಬೇಡ ಎಂದ ಪ್ರಲ್ಹಾದ್ ಜೋಶಿ