ತುಮಕೂರು: ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಾಳಯದಲ್ಲಿ ಉತ್ಸಾಹ ಹೆಚ್ಚಾಗಿದೆ. ಇನ್ನು ಮುಂಬರುವ ಚುನಾವಣೆಗಳಿಗೆ ಈಗಲೇ ತಯಾರಿ ಶುರು ಮಾಡಿರುವ ಜಿಲ್ಲೆಯ (Tumkur News) ಕುಣಿಗಲ್ ಶಾಸಕ ಡಾ.ಎಚ್.ಡಿ. ರಂಗನಾಥ್ ಅವರು, ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ಗ್ರಾಮ ವಾಸ್ತವ್ಯ ಮಾಡಿ, ಜನರ ಸಮಸ್ಯೆಗಳನ್ನು ಆಲಿಸಿದ್ದಾರೆ.
ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಲೋಕಸಭಾ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಿರುವ ಡಾ.ರಂಗನಾಥ್ ಅವರು, ಮತದಾರರಲ್ಲಿ ವಿಶ್ವಾಸ ಉಳಿಸಿಕೊಳ್ಳಲು ವಿಭಿನ್ನ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಕುಣಿಗಲ್ ತಾಲೂಕಿನ ಹೇರೂರು ಗ್ರಾಮದಲ್ಲಿ ಮಂಗಳವಾರ ʼಶಾಸಕರ ನಡೆ ಹಳ್ಳಿ ಕಡೆʼ ಎಂಬ ಕಾರ್ಯಕ್ರಮದ ಮೂಲಕ ಗ್ರಾಮ ವಾಸ್ತವ್ಯ ಹೂಡಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ಪ್ರಯತ್ನ ಮಾಡಿದರು.
ಶಾಸಕ ಡಾ.ಎಚ್.ಡಿ.ರಂಗನಾಥ್ ಮಾತನಾಡಿ, ಯಾವುದೇ ಕೆಲಸ ಮಾಡಿಕೊಡಲು ಜನರಿಗೆ ಅಧಿಕಾರಿಗಳು ಕಿರಿಕಿರಿ ನೀಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಈ ಹಿಂದೆಯೂ ನಾನು ಜನತಾ ಸಂದರ್ಶನ ಮಾಡಿದ್ದೆ. ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ಹಾಗೂ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಲು ಅಧಿಕಾರಿಗಳೊಂದಿಗೆ ಗ್ರಾಮಕ್ಕೆ ಆಗಮಿಸಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ | Saffronisation issue: ಕೇಸರಿ ಶಾಲಿನ ವಿರುದ್ಧ ಡಿಕೆಶಿ ಆಕ್ರೋಶಕ್ಕೆ ವಿಜಯೇಂದ್ರ, ಕೋಟ ತಿರುಗೇಟು
ಡಿಸಿಎಂ ಡಿ.ಕೆ.ಶಿವಕುಮಾರ್ ಸಂಬಂಧಿಯಾದ ಶಾಸಕ ರಂಗನಾಥ್ ಅವರು, ಅಧಿಕಾರಿಗಳೊಂದಿಗೆ ಹೇರೂರು ಗ್ರಾಮಕ್ಕೆ ತೆರಳಿದ ವೇಳೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ ಲಭಿಸಿತು. ನಂತರ ಸಭೆ ನಡೆಸಿದ ಅವರು, ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಶೀಘ್ರ ಪರಿಹಾರ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ರಾತ್ರಿ ಗ್ರಾಮದಲ್ಲೇ ಅಧಿಕಾರಿಗಳೊಂದಿಗೆ ವಾಸ್ತವ್ಯ ಇದ್ದರು.