ರಾಯಚೂರು: ನಗರದ ಅಂದ್ರೂಲ್ ಖಿಲ್ಲಾ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸಲೆಂದು ಹೋದ ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್ (MLA Shivaraj pateel) ಅವರಿಗೆ ಅಲ್ಲಿನ ಜನರು ಘೆರಾವೊ ಹಾಕಿದ್ದು ಭಾರಿ ಮಾತಿನ ಚಕಮಕಿಗೆ ಕಾರಣವಾಯಿತು. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ, ತಳ್ಳಾಟ ಉಂಟಾಗಿದ್ದರಿಂದ ಶಾಸಕರು ಗುದ್ದಲಿ ಪೂಜೆ ಮಾಡದೆಯೇ ಹೊರಡಬೇಕಾಯಿತು.
ಮುಸ್ಲಿಮರೇ ಅಧಿಕವಾಗಿರುವ ಇಲ್ಲಿನ ಅಂದ್ರೂಲ್ ಖಿಲ್ಲಾದಲ್ಲಿ ರಸ್ತೆ ನಿರ್ಮಾಣಕ್ಕೆ ಗುದ್ದಲಿ ಪೂಜೆ ನಡೆಸುವ ಕಾರ್ಯಕ್ರಮ ನಿಗದಿಯಾಗಿತ್ತು. ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಅವರು ಆಗಮಿಸುವ ಕಾರ್ಯಕ್ರಮಕ್ಕೆ ಪೆಂಡಾಲ್ ಹಾಕಲಾಗಿತ್ತು.
ಆದರೆ, ಶಾಸಕ ಶಿವರಾಜ್ ಪಾಟೀಲ್ ಗುದ್ದಲಿ ಪೂಜೆ ನಡೆಸುವುದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದರು. ʻʻಇಷ್ಟು ದಿನ ಜನರ ಸಮಸ್ಯೆ ಆಲಿಸಿಲ್ಲ. ಈಗ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಗುದ್ದಲಿ ಪೂಜೆ ಮಾಡಲು ಬಂದಿದ್ದೀರಾʼʼ ಎಂದಿ ಜನರು ಶಾಸಕರನ್ನು ತರಾಟೆಗೆ ತೆಗೆದುಕೊಂಡರು. ಶಾಸಕರನ್ನು ತಡೆ ಹಿಡಿದು ಗಲಾಟೆ ಕೂಡಾ ಮಾಡಿದರು.
ಒಂದು ಹಂತದಲ್ಲಿ ಶಾಸಕರ ಬೆಂಬಲಿಗರು ಹಾಗೂ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಯಿತು. ಗಲಾಟೆ ಹೆಚ್ಚಾಗುತ್ತಿದ್ದಂತೆಯೇ ಪೊಲೀಸರು ಮಧ್ಯಪ್ರವೇಶ ಮಾಡಿದರು. ಕೊನೆಗೆ ಶಾಸಕರು ಗುದ್ದಲಿ ಪೂಜೆ ಮಾಡದೆಯೇ ಹೊರಟು ಹೋದರು. ಈ ವಿದ್ಯಮಾನದಿಂದಾಗಿ ಅಂದ್ರೂನ್ ಖಿಲ್ಲಾದಲ್ಲಿ ಕೆಲ ಹೊತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತು.
ಇದನ್ನೂ ಓದಿ | CT Ravi vs Siddaramaiah | ಸಿದ್ರಾಮುಲ್ಲಾ ಖಾನ್ ಹೇಳಿಕೆಗೆ ಬಿಜೆಪಿ ಸಮರ್ಥನೆ, ಮತ್ತೇನು ಮೀರ್ ಸಾದಕ್ ಅನ್ನಬೇಕಾ?