ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೈಲೂರಿನ ಮಾರ್ಕಂಡೇಶ್ವರ ಗ್ರಾಮದಲ್ಲಿ ರಸ್ತೆ ಕಾಮಗಾರಿ ಪೂರ್ಣ ಮಾಡಿಕೊಡಿ ಎಂದು ಕೇಳಿದ್ದಕ್ಕೆ ಜನರ ಮೇಲೆ ಶಾಸಕ ಸುನೀಲ್ ನಾಯ್ಕ (MLA Sunil Naik) ದರ್ಪ ತೋರಿದ್ದಾರೆ.
ಬೈಲೂರಿನ ಮಾರ್ಕಂಡೇಶ್ವರ ಗ್ರಾಮದಲ್ಲಿ ರಸ್ತೆ ಕಾಮಗಾರಿ ಭೂಮಿಪೂಜೆಗೆ ಶಾಸಕ ಸುನೀಲ್ ನಾಯ್ಕ ತೆರಳಿದ್ದರು. ಈ ವೇಳೆ ಕಳೆದ ಹಲವು ವರ್ಷಗಳಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು, 1.8 ಕಿ.ಮೀ ರಸ್ತೆಯನ್ನು ಸಂಪೂರ್ಣ ಮಾಡಿಕೊಡಿ ಎಂದು ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಶಾಸಕ, ನಾನು ಈ ಬಾರಿ ಕೇವಲ 400 ಮೀ. ರಸ್ತೆ ಮಾತ್ರ ಮಾಡುತ್ತೇನೆ, ತಾಕತ್ತಿದ್ದರೆ ರಸ್ತೆಯನ್ನು ನಿಲ್ಲಿಸಿ ಎಂದು ಸ್ಥಳೀಯರಿಗೆ ಆವಾಜ್ ಹಾಕಿದ್ದಾರೆ.
ಇದನ್ನೂ ಓದಿ | Siddaramaiah: ಕರ್ನಾಟಕ ರಾಜಕಾರಣದಲ್ಲಿ ನಾನು ಎಂದೆಂದಿಗೂ ಪ್ರಸ್ತುತನಾಗಿಯೇ ಇರುತ್ತೇನೆ: ಸಿದ್ದರಾಮಯ್ಯ
ಕಳೆದ ೫ ವರ್ಷಗಳಿಂದ ಅಲೆದು ಸಾಕಾಗಿದೆ. ಅರ್ಧ ಮಾಡಿ ತೆರಳಿದರೆ ಮತ್ತೆ ಮುಂದಿನ ಚುನಾವಣೆವರೆಗೆ ರಸ್ತೆ ಆಗುವುದಿಲ್ಲ. ಹಾಗಾಗಿ ದಯವಿಟ್ಟು ಸಂಪೂರ್ಣವಾಗಿ ರಸ್ತೆಯನ್ನು ನಿರ್ಮಿಸಿಕೊಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ಶಾಸಕ ಸುನೀಲ್ ನಾಯ್ಕ, ನಾನು ಶಾಸಕನಿದ್ದು, ಏನಾದರೂ ಮಾಡಲು ಯಾವುದೇ ದೊಣ್ಣೆನಾಯಕನ ಅಪ್ಪಣೆ ಬೇಕಿಲ್ಲ ಎಂದು ಹೇಳುವ ಮೂಲಕ ದರ್ಪ ಮೆರೆದಿದ್ದಾರೆ. ಶಾಸಕರ ಈ ನಡೆಯನ್ನು ಕೆಲವು ಯುವಕರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ಸದ್ದು ಮಾಡುತ್ತಿದೆ. ಇನ್ನೊಂದೆಡೆ ಶಾಸಕರ ಈ ವರ್ತನೆಗೆ ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.