ಬೆಳಗಾವಿ: ಪಕ್ಷದ ಹಿರಿಯ ನಾಯಕರಾಗಿರುವ ಬಿ.ಎಸ್. ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡದಂತೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಯಕರ ಬಗ್ಗೆ ಹಗುರವಾಗಿ ಮಾತನಾಡದಂತೆ ಶಾಸಕ ಯತ್ನಾಳ್ ಅವರಿಗೆ ವಾರ್ನ್ ಮಾಡಲಾಗಿದೆ. ಅವರಿಗೆ ಸಚಿವ ಸ್ಥಾನ ಸಿಗದಿರುವ ಬಗ್ಗೆ ಕೊರಗು ಇರಬಹುದು. ಇದನ್ನೇ ಮುಂದಿಟ್ಟುಕೊಂಡು ಪಕ್ಷಕ್ಕೆ ಮುಜುಗರ ತರಬಾರದು ಎಂದು ತಿಳಿಸಿದ್ದೇವೆ ಎಂದರು.
ʻʻಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮ ದೊಡ್ಡ ನಾಯಕರು. ಬಿಜೆಪಿ ಮಾತ್ರವಲ್ಲ; ಎಲ್ಲ ಪಕ್ಷಗಳ ಎಲ್ಲ ಮುಖಂಡರನ್ನು ಪರಿಗಣಿಸಿದರೂ ದೊಡ್ಡ ನಾಯಕ. ಪ್ರಭಾವಿ, ಅನುಭವಿ ಆಗಿರುವ ಬಿಎಸ್‌ವೈ ಬಿಜೆಪಿಯನ್ನು ಗೆಲ್ಲಿಸಲು ಮುಂಚೂಣಿಯಲ್ಲಿ ನಿಲ್ಲುತ್ತಾರೆʼʼ ಎಂದು ಅವರು ಹೇಳಿದರು.
ರಾಹುಲ್ ಗಾಂಧಿ ಪರದಾಟ
ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿದ ಅರುಣ್ ಸಿಂಗ್, ʻʻಸಿದ್ದರಾಮಯ್ಯ ಮತ್ತು ಕೆಶಿಯನ್ನು ಒಗ್ಗೂಡಿಸಲು ರಾಹುಲ್ ಗಾಂಧಿ ಪರದಾಡುತ್ತಿದ್ದಾರೆ. ಬಿಜೆಪಿಯಲ್ಲೂ ಹಲವು ನಾಯಕರ ಮಧ್ಯೆ ಮತಭೇದವಿದೆ. ಪಕ್ಷದ ಗಟ್ಟಿತನಕ್ಕೆ ಅದು ಬೇಕೂ ಕೂಡಾ. ಆದರೆ, ನಮ್ಮ ಪಕ್ಷದ ಯಾವ ಕಾರ್ಯಕರ್ತ, ನಾಯಕರ ಮಧ್ಯೆ ವೈಮನಸ್ಯವಿಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಧ್ಯೆ ಮನಸಿನಲ್ಲೇ ಸಿಟ್ಟಿದೆ. ಹೀಗಾಗಿ ಅವರಿಬ್ಬರನ್ನು ಒಂದುಗೂಡಿಸಲು ರಾಹುಲ್ ಗಾಂಧಿ ಪರದಾಡುತ್ತಿದ್ದಾರೆʼʼ ಎಂದು ವ್ಯಂಗ್ಯವಾಡಿದರು ಅರುಣ್ ಸಿಂಗ್.
ʻʻದೇಶ ಒಡೆದವರೇ ಕಾಂಗ್ರೆಸ್ಸಿಗರು, ಆದರೆ ಇವತ್ತು ಅವರೇ ಭಾರತ್ ಜೋಡೊ ಯಾತ್ರೆ ಮಾಡುತ್ತಿದ್ದಾರೆ. ಯಾವ ಉದ್ದೇಶಕ್ಕೆ ಯಾತ್ರೆ ಮಾಡುತ್ತಿದ್ದಾರೆ ಎಂಬುದು ರಾಹುಲ್ ಗಾಂಧಿ ಅವರಿಗೇನೇ ಗೊತ್ತಿಲ್ಲ. ರಾಹುಲ್ ಗಾಂಧಿ ಮೊದಲು ಕಾಂಗ್ರೆಸ್‌ನ ಇತಿಹಾಸ ಓದಿಕೊಳ್ಳಬೇಕು ನಂತರ ‘ವಾಕಿಂಗ್’ ಮಾಡುವುದು ಒಳ್ಳೆಯದು’ʼ ಎಂದು ಲೇವಡಿ ಮಾಡಿದರು ಅರುಣ್ ಸಿಂಗ್.
ಪಂಚಮಸಾಲಿ ಮೀಸಲಾತಿ ಬೇಡಿಕೆ ಬಗ್ಗೆ
ʻʻಬಸವರಾಜ ಬೊಮ್ಮಾಯಿ ಸರ್ಕಾರ ಪರಿಶಿಷ್ಟರ ಮೀಸಲಾತಿ ಹೆಚ್ಚಿಸಿದೆ. ಪಂಚಮಸಾಲಿ ಸಮುದಾಯದಿಂದಲೂ ಮೀಸಲಾತಿಗೆ ಹೋರಾಟ ನಡೆದಿದೆ. ಪಂಚಮಸಾಲಿ ಸಮಾಜದಿಂದ 2 ಎ ಮೀಸಲಾತಿಗೆ ನಡೆಯುತ್ತಿರುವ ಹೋರಾಟ ನಮಗೆ ಗೊತ್ತಿದೆ. ಬೊಮ್ಮಾಯಿ ಸಂಪುಟದಲ್ಲಿ ಆ ಸಮಾಜದ ಮೂವರು ಸಚಿವರು ಇದ್ದಾರೆ. ಮುರುಗೇಶ ನಿರಾಣಿ, ಸಿ.ಸಿ ಪಾಟೀಲ, ಶಂಕರಪಾಟೀಲ ಮುನೇನಕೊಪ್ಪ ಸಚಿವರಾಗಿದ್ದಾರೆ. ಈ ಮೂವರೂ ಮುಖ್ಯಮಂತ್ರಿಗಳ ಜೊತೆಗೆ ಕುಳಿತು ಮಾತನಾಡಿ, ಒಳ್ಳೆಯ ನಿರ್ಧಾರಕ್ಕೆ ಬರಲಿದ್ದಾರೆʼʼ ಎಂದು ಅರುಣ್ ಸಿಂಗ್ ಹೇಳಿದರು.
ಇದನ್ನೂ ಓದಿ | ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿ ನಾಯಕ ಅಲ್ಲ: ರಾಜ್ಯ ಪ್ರಭಾರಿ ಅರುಣ್ ಸಿಂಗ್ ಹೇಳಿಕೆ