Site icon Vistara News

ಶಾಸಕ ಜಮೀರ್‌ ಧ್ವಜಾರೋಹಣ ಮಾಡೋದು ಬೇಡ; ಶಾಂತಿಸಭೆಯಲ್ಲಿ ಹಿಂದು ಸಂಘಟನೆಗಳ ಒತ್ತಾಯ

ಧ್ವಜಾರೋಹಣ

ಬೆಂಗಳೂರು: ಚಾಮರಾಜಪೇಟೆ ಮೈದಾನದಲ್ಲಿ ಆ.15 ರಂದು ಶಾಸಕ ಜಮೀರ್‌ ಅಹ್ಮದ್‌ಗೆ ಧ್ವಜಾರೋಹಣ ಮಾಡಲು ಅವಕಾಶ ನೀಡಬಾರದು. ನಮಗೆ ಅನುಮತಿ ಕೊಡಲಿ-ಬಿಡಲಿ ಧ್ವಜಾರೋಹಣ ಮಾಡಿಯೇ ತೀರುವೆವು ಎಂದು ಹಿಂದು ಸಂಘಟನೆಗಳು ಶಾಂತಿ ಸಭೆಯಲ್ಲಿ ತಮ್ಮ ನಿರ್ಧಾರವನ್ನು ಪೊಲೀಸ್‌ ಅಧಿಕಾರಿಗಳಿಗೆ ತಿಳಿಸಿವೆ.

ಸ್ವಾತಂತ್ರ್ಯ ದಿನಾಚರಣೆಯಂದು ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣಕ್ಕೆ ಹಿಂದು ಸಂಘಟನೆಗಳು ಮನವಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಠಾಣೆಯಲ್ಲಿ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ನೇತೃತ್ವದಲ್ಲಿ ಮಂಗಳವಾರ ಹಿಂದು ಮುಖಂಡರ ಶಾಂತಿಸಭೆ ಏರ್ಪಡಿಸಲಾಗಿತ್ತು. ಸಭೆಯಲ್ಲಿ ಹಿಂದು ಸಂಘಟನೆಗಳ ಮನವಿಗಳನ್ನು ಪೊಲೀಸರು ಆಲಿಸಿದ್ದು, ಮೇಲಧಿಕಾರಿಗಳ ಗಮನಕ್ಕೆ ತರುವುದಾಗಿ ತಿಳಿಸಿದ್ದಾರೆ.

ಸಭೆಯ ಬಳಿಕ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಸಾಮಾಜಿಕ ಜಾಲತಾಣದಲ್ಲಿ ಯಾವುದೇ ಕೋಮು ದ್ವೇಷ ಬಿತ್ತುವ ಸಂದೇಶಗಳನ್ನು ಹರಿಬಿಡಬಾರದು. ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡಲು ಎಲ್ಲರೂ ಕಾನೂನು ಪಾಲಿಸುವ ಜತೆಗೆ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಹಿಂದು ಸಂಘಟನೆಗಳ ಮನವಿಗಳನ್ನು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು, ಅವರೇ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದಾರೆ. ಬುಧವಾರ (ಆ.೧೦) ಮುಸ್ಲಿಂ ಮುಖಂಡರ ಶಾಂತಿ ಸಭೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Amrit Mahotsav | ದೆಹಲಿ ಕೆಂಪುಕೋಟೆ ಮೇಲೆ ಹಾರಾಡೋದು ಧಾರವಾಡದಲ್ಲಿ ತಯಾರಾದ ಧ್ವಜ!

ಚಾಮರಾಜಪೇಟೆ ನಾಗರಿಕರ ಒಕ್ಕೂಟದ ವೇದಿಕೆ ಅಧ್ಯಕ್ಷ ರಾಮೇಗೌಡ ಮಾತನಾಡಿ, ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣಕ್ಕೆ ಅವಕಾಶ ನೀಡುವಂತೆ ಕೋರಿದ್ದು, ಪೊಲೀಸರು ಸರ್ಕಾರದ ಗಮನಕ್ಕೆ ತರುವುದಾಗಿ ಹೇಳಿದ್ದಾರೆ. ಶಾಂತಿಗೆ ಧಕ್ಕೆ ತರಬೇಡಿ ಎಂದು ಅವರು ಹೇಳಿದ್ದಾರೆ. ಆದರೆ ಎಲ್ಲ ಶಾಂತಿಯುತವಾಗಿ ನಡೆಯಬೇಕು ಎಂದರೆ ಧ್ವಜಾರೋಹಣಕ್ಕೆ ಸರ್ಕಾರ ಅನುಮತಿ ಕೊಡಲೇಬೇಕು. ನಾವು ಆ.15ರಂದು ಚಾಮರಾಜಪೇಟೆ ಮೈದಾನದಲ್ಲಿ ಧ್ವಜ ಹಾರಿಸಿಯೇ ತೀರುತ್ತೇವೆ ಹೇಳಿದರು.

ಗಣೇಶ ಮೂರ್ತಿ ಪ್ರತಿಷ್ಠಾಪನೆ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ. ಆದರೆ, ನಾವು ಗಣೇಶ ಮೂರ್ತಿಯನ್ನೂ ಕೂರಿಸುತ್ತೇವೆ. ಧ್ವಜಾರೋಹಣಕ್ಕೆ ಪ್ರತ್ಯೇಕ ಸಮಿತಿ ಇದೆ. ಹೀಗಾಗಿ ಶಾಸಕ ಜಮೀರ್‌ ಅಹ್ಮದ್‌ಗೆ ಧ್ವಜ ಹಾರಿಸಲು ಅವಕಾಶ ನೀಡಬಾರದು. ನಮಗೆ ಅನುಮತಿ ಕೊಡದೆ ಶಾಸಕರಿಗೆ ಅನುಮತಿ ಕೊಟ್ಟರೆ ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮೈದಾನದ ವಿವಾದ ಸೃಷ್ಟಿಯಾಗಿರುವುದೇ ಶಾಸಕರಿಂದ, ಹೀಗಾಗಿ ಅವರಿಗೆ ಅನುಮತಿ ನೀಡುವುದು ಬೇಡ. ಹಾ ವಕ್ಫ್ ಬೋರ್ಡ್ ಕೈಯಲ್ಲಿ ಧ್ವಜಾರೋಹಣ ಮಾಡಲು ನಾವು ಬಿಡಲ್ಲ. ಈ ವಿಚಾರ ಸೂಕ್ಷ್ಮವಾಗಿರುವುದರಿಂದ ಸಿಎಂ ಮಧ್ಯಪ್ರವೇಶ ಮಾಡಬೇಕು. ಆ. 15ರಂದು ಧ್ವಜಾರೋಹಣ ಮಾಡಲು ಅನುಮತಿ ನಿರಾಕರಿಸಿದರೆ ಗಲಭೆಗಳಾಗುತ್ತವೆ. ಅದಕ್ಕೆ ನಾವು ಜವಾಬ್ದಾರರಲ್ಲ ಎಂದು ತಿಳಿಸಿದರು.

ವಿಶ್ವ ಸನಾತನ ಪರಿಷತ್ ಅಧ್ಯಕ್ಷ ಭಾಸ್ಕರನ್ ಮಾತನಾಡಿ, ಶಾಸಕ ಜಮೀರ್ ಅಹ್ಮದ್ ಬಂದು ಧ್ವಜಕ್ಕೆ ಸೆಲ್ಯೂಟ್‌ ಮಾಡಿದರೆ ತೊಂದರೆ ಇಲ್ಲ. ಅದರ ಬದಲಾಗಿ ಮುಸ್ಲಿಂ ಸಂಘಟನೆಗಳು ಅಥವಾ ವಕ್ಫ್ ಬೋರ್ಡ್ ಧ್ವಜಾರೋಹಣಕ್ಕೆ ಮುಂದಾದರೆ ನಮ್ಮ ವಿರೋಧವಿದೆ. 20 ವರ್ಷ ಧ್ವಜಾರೋಹಣಕ್ಕೆ ಅಡ್ಡಿಪಡಿಸಿದ್ದೇ ಜಮೀರ್, ಈಗ ಅವರಿಂದ ಧ್ವಜಾರೋಹಣ ಮಾಡಿಸಿದರೆ ನಮ್ಮ ಹೋರಾಟ ವ್ಯರ್ಥವಾಗುತ್ತದೆ. ಹೀಗಾಗಿ ಅವರಿಂದ ಧ್ವಜಾರೋಹಣ ಮಾಡಿಸಬಾರದು ಎಂದು ಒತ್ತಾಯಿಸಿದರು.

ವಂದೇ ಮಾತರಂ ಸಂಘಟನೆ ಶಿವಕುಮಾರ್ ನಾಯಕ್, ಶ್ರೀರಾಮಸೇನೆಯ ಚಂದ್ರಶೇಖರ್ (ಕೋಟೆ ಶೇಕಿ) ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ | ವಿಸ್ತಾರ Explainer | ನಮ್ಮ ರಾಷ್ಟ್ರಧ್ವಜ ಆರೋಹಿಸುವ ಮುನ್ನ ಇವಿಷ್ಟು ನಿಮಗೆ ತಿಳಿದಿರಲಿ

Exit mobile version