ಬೆಂಗಳೂರು: ನಗರದ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಬಿಜೆಪಿ-ಜೆಡಿಎಸ್ ನಾಯಕರ ಸಮನ್ವಯ ಸಭೆ ಭಾನುವಾರ ನಡೆಯಿತು. ವಿಧಾನ ಪರಿಷತ್ ಚುನಾವಣೆಯಲ್ಲಿ ಹೊಂದಾಣಿಕೆ, ಮೈತ್ರಿ ಸಹಕಾರ ಹಾಗೂ ಪ್ರಸಕ್ತ ರಾಜಕೀಯ ವಿಚಾರಗಳ ಕುರಿತು ದೋಸ್ತಿ ನಾಯಕರು ಚರ್ಚೆ ನಡೆಸಿದ್ದಾರೆ.
ಸಭೆಯಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು, ಈಗಾಗಲೇ ನಮ್ಮ ನಾಯಕರು ಹಲವಾರು ವಿಚಾರ ಮಾತನಾಡಿದ್ದಾರೆ. ಹಾಗಾಗಿ ಅದೇ ವಿಚಾರಗಳನ್ನು ನಾನು ಮಾತನಾಡಲ್ಲ. ಅ.ದೇವೇಗೌಡರು ನಮ್ಮ ಜನತಾದಳಲ್ಲೇ ಬೆಳೆದವರು. 1996ರಲ್ಲಿ ನನ್ನ ಚುನಾವಣೆಗೂ ಅ.ದೇವೇಗೌಡರು ಕೆಲಸ ಮಾಡಿದ್ದಾರೆ. ಕಾಂಗ್ರೆಸ್‌ನವರು ಈಗಾಗಲೇ ಹಣದ ಹೊಳೆ ಹರಿಸುತ್ತಿದ್ದಾರೆ. ಅವರಂತೆ ನಮ್ಮ ಅಭ್ಯರ್ಥಿ ದೇವೇಗೌಡ ಹಣ ಖರ್ಚು ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಇಲ್ಲಿ ಬಿಜೆಪಿ ಶಾಸಕ ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನಮ್ಮ ಮತಗಳು ಸೇರಿ ಸುಮಾರು 72 ಸಾವಿರ ಮತ ಇದೆ. ಅಶೋಕ್ ಹೇಳಿದಂತೆ ನಿಮ್ಮ ಜತೆಗೆ ಒಂದಷ್ಟು ಜನರನ್ನು ಕರೆದುಕೊಂಡು ಬಂದು ಹಾಕಿಸಿ. ಮನೆ ಮನೆಗೆ ತೆರಳಿ ಎರಡು ಪಕ್ಷದ ಕಾರ್ಯಕರ್ತರ ವಿಶ್ವಾಸ ಗಳಿಸಬೇಕು. ಕಾಂಗ್ರೆಸ್‌ನವರು ಏನಾದರೂ ಆಮಿಷ ತೋರಿಸಲಿ. ಅವರು ಹಣವನ್ನು ಹೆಚ್ಚಾಗಿ ಖರ್ಚು ಮಾಡುತ್ತಾರೆ. ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ – ಜೆಡಿಎಸ್ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಿದ್ದಿರಂದ ಐತಿಹಾಸಿಕ ಫಲಿತಾಂಶ ಬರುವ ನಿರೀಕ್ಷೆ ಇದೆ. ಲೋಕಸಭಾ ಚುನಾವಣೆಯಲ್ಲಿ ಡಾ.ಸಿ.ಎನ್. ಮಂಜುನಾಥ್ ಗೆಲ್ಲುತ್ತಾರೆ ಎಂಬ ಭರವಸೆ ಇದೆ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ | Pralhad Joshi: ಸಿಎಂ ಪತ್ರ ಬರೆದು ರಾಜಕಾರಣ ಮಾಡಿದರೆ ಪ್ರಜ್ವಲ್ ಪಾಸ್‌ಪೋರ್ಟ್ ರದ್ದಾಗಲ್ಲ: ಪ್ರಲ್ಹಾದ್ ಜೋಶಿ
ಬ್ರ್ಯಾಂಡ್ ಬೆಂಗಳೂರು ಅಲ್ಲ ಲೂಟಿ ಬೆಂಗಳೂರು
ಯಾವ ಬ್ರ್ಯಾಂಡ್ ಬೆಂಗಳೂರು ಮಾಡಿರೋದು ಇವರು? ಅದು ಬ್ರ್ಯಾಂಡ್ ಬೆಂಗಳೂರು ಅಲ್ಲ, ಲೂಟಿ ಬೆಂಗಳೂರು. ಎರಡು ಮೂರು ಮಳೆಗೇ ಬೆಂಗಳೂರಿನಲ್ಲಿ ಮನೆಗಳಿಗೆ ನೀರು ತುಂಬಿಕೊಂಡಿದೆ. ಬಿಡಿಎನಲ್ಲಿ ಮೊನ್ನೆ ಕ್ಲೋಸ್ಡ್ ಡೋರ್ ಮೀಟಿಂಗ್ ಮಾಡಿದ್ದಾರಂತೆ. ಬಹಳ ರಹಸ್ಯವಾಗಿ ಸಭೆ ಮಾಡಿದ್ದಾರಂತೆ ಎಂದು ಡಿಸಿಎಂ ಡಿಕೆಶಿ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಬೆಂಗಳೂರಿಗೆ ಇವರ ಕೊಡುಗೆ ಏನು? ಈ ಸರ್ಕಾರ ಬಂದ ನಂತರ ಬೆಂಗಳೂರಿನಲ್ಲಿ, ರಾಜ್ಯದಲ್ಲಿ ಒಂದೂ ಹೊಸ ಅಭಿವೃದ್ಧಿ ಆಗಿಲ್ಲ. ಅಕ್ಕಿ ಕೊಡೋ ಯೋಗ್ಯತೆ ಇಲ್ಲ. ಐದು ಕೆ.ಜಿ. ಅಕ್ಕಿ ಬದಲಿಗೆ 170 ರೂ. ಮೂರು ತಿಂಗಳಿಂದ ಕೊಟ್ಟಿಲ್ಲ. ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ಕೊಟ್ಟಿಲ್ಲ. ಬಿತ್ತನೆ ಬೀಜದ ಬೆಲೆ 70% ಏರಿಕೆ ಮಾಡಿದ್ದಾರೆ, ಗೊಬ್ಬರ ಸಿಕ್ತಿಲ್ಲ. ರೈತರು ಹಲವು ಸಮಸ್ಯೆ ಎದುರಿಸತ್ತಿದ್ದಾರೆ. ಒಪಿಎಸ್ ಮರು ಜಾರಿ ಬಗ್ಗೆ ಸದ್ದು ಗದ್ದಲ ಇಲ್ಲ, ಈಗ ಸಮಿತಿ ಮಾಡಿದ್ದಾರೆ. ಗ್ಯಾರಂಟಿಗಳ ಹೆಸರಲ್ಲಿ ಎಲ್ಲ ಅಭಿವೃದ್ಧಿ ಸ್ಥಗಿತ ಆಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರದ ನಡವಳಿಕೆ ಬಗ್ಗೆ ಜನರು ಗಮನಿಸಬೇಕು. ರಾಜ್ಯದ ಅಭಿವೃದ್ಧಿಗೆ ಇವರು ನಯಾ ಪೈಸೆ ಕೊಟ್ಟಿಲ್ಲ. ರಾಜ್ಯದಲ್ಲಿ 2,75,000 ಹುದ್ದೆಗಳು ಖಾಲಿ ಇವೆ. ಏನು ಕ್ರಮ ಕೈಗೊಂಡಿದ್ದಾರೆ ಎಂದ ಅವರು, ಮುಂದೆ ಒಳ್ಳೆಯ ದಿನಗಳ ಪ್ರಾರಂಭಬಾಗಲು ಪರಿಷತ್ ಚುನಾವಣೆ ಗೆಲ್ಲಬೇಕು ಎಂದು ಹೇಳಿದರು.
ಇದನ್ನೂ ಓದಿ | Congress Karnataka: ಬದಲಾಗ್ತಾರಾ ಕೆಪಿಸಿಸಿ ಅಧ್ಯಕ್ಷರು?; ಡಿಕೆಶಿ ಹೇಳಿಕೆ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಚರ್ಚೆ ಶುರು!
ಸಭೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಮಾಜಿ ಸಚಿವರಾದ ಅಶ್ವತ್ಥ್ ನಾರಾಯಣ್, ಮುನಿರತ್ನ, ಗೋಪಾಲಯ್ಯ, ಎಂಎಲ್‌ಸಿ ತಿಪ್ಪೇಸ್ವಾಮಿ, ಟಿ.ಎ. ಶರವಣ, ಬೆಂಗಳೂರು ಪದವೀಧರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಅ.ದೇವೇಗೌಡ, ಮಾಜಿ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ, ಶ್ರೀನಿವಾಸ್ ಮೂರ್ತಿ , ಜೆಡಿಎಸ್ ಮಹಿಳಾ ಅಧ್ಯಕ್ಷ ರಶ್ಮಿ ರಮೇಗೌಡ ಸೇರಿದಂತೆ ಉಭಯ ಪಕ್ಷದ ಪ್ರಮುಖ ನಾಯಕರು ಭಾಗಿಯಾಗಿದ್ದರು.