ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ (MLC Election) ಬಿಜೆಪಿ ಅಭ್ಯರ್ಥಿಗಳನ್ನು ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೂರು ಶಿಕ್ಷಕರ ಕ್ಷೇತ್ರ ಮತ್ತು ಮೂರು ಪದವೀಧರ ಕ್ಷೇತ್ರಗಳಿಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಿಸಿದ್ದು, ಚುನಾವಣೆಯಲ್ಲಿ (Legislative Council Elections) ಆರೂ ಸ್ಥಾನಗಳನ್ನೂ ಗೆಲ್ಲಲು ಮಾಸ್ಟರ್ ಪ್ಲ್ಯಾನ್ ರೂಪಿಸುತ್ತಿದೆ. ಈ ನಡುವೆ ಮತದಾರರನ್ನು ಸೆಳೆಯಲು ರಾಜ್ಯ ಸರ್ಕಾರಿ ನೌಕರರ ಬಹುಕಾಲದ ಬೇಡಿಕೆಯಾದ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿ ಮಾಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ವಿಧಾನ ಸಭಾ ಚುನಾವಣೆ ಸಮಯದಲ್ಲಿ ಒಪಿಎಸ್ ಜಾರಿ ಮಾಡುವ ಭರವಸೆಯನ್ನು ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ನೀಡಿತ್ತು. ಇದೀಗ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಪೂರ್ವ ಭಾವಿ ಸಭೆಯಲ್ಲೂ ಒಪಿಎಸ್ (Old Pension Scheme) ಜಾರಿ ಬಗ್ಗೆ ಚರ್ಚೆಯಾಗಿರುವುದು ಕಂಡುಬಂದಿದೆ.
ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳಾದ ಆಯನೂರು ಮಂಜುನಾಥ್, ಕೆ.ಕೆ. ಮಂಜುನಾಥ್, ಚಂದ್ರಶೇಖರ ಪಾಟೀಲ್, ಶ್ರೀನಿವಾಸ ಹಾಗೂ ರಾಮೋಜಿ, ಮರಿತ್ತಿಬ್ಬೇಗೌಡ ಭಾಗಿಯಾಗಿದ್ದರು. ಈ ವೇಳೆ ಕೆ.ಎಚ್. ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಜಿ.ಸಿ. ಚಂದ್ರಶೇಖರ, ತನ್ವೀರ್ ಸೇಠ್, ವಸಂತ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ | 7th Pay Commission: 7ನೇ ವೇತನ ಆಯೋಗ; ವರದಿ ಜಾರಿಯಾದ್ರೆ ರಾಜ್ಯ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಲಿದೆ?
ಒಪಿಎಸ್ ಮರು ಜಾರಿ ಮಾಡಿದ್ರೆ ಗೆಲುವು ಖಚಿತ
ರಾಜ್ಯದಲ್ಲಿ ಒಪಿಎಸ್ ಮರು ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದರೆ ಗೆಲುವು ಖಚಿತ. ಹೀಗಾಗಿ ಒಪಿಎಸ್ ಬಗ್ಗೆ ಸರ್ಕಾರದ ನಿಲುವಿನ ಬಗ್ಗೆ ನೌಕರರಿಗೆ ಮನವರಿಕೆ ಮಾಡಿಕೊಡಿ ಎಂದು ಸಿಎಂ ಬಳಿ ಆಯನೂರು ಮಂಜುನಾಥ್ ಸೇರಿ ಕೈ ಅಭ್ಯರ್ಥಿಗಳು ಸಭೆಯಲ್ಲಿ ಮನವಿ ಮಾಡಿದ್ದಾರೆ. ಹೀಗಾಗಿ ನೌಕರರ ಮತದಾರರನ್ನು ಸೆಳೆಯಲು ಒಪಿಎಸ್ ಜಾರಿ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಲೋಕಸಭಾ ಚುನಾವಣೆ ಬಳಿಕ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗಿದ್ದು, 6 ವಿಧಾನ ಪರಿಷತ್ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಕೈ ಅಭ್ಯರ್ಥಿಗಳ ಪಟ್ಟಿ
- ನೈಋತ್ಯ ಶಿಕ್ಷಕರ ಕ್ಷೇತ್ರ – ಕೆ.ಕೆ. ಮಂಜುನಾಥ್
- ದಕ್ಷಿಣ ಶಿಕ್ಷಕರ ಕ್ಷೇತ್ರ – ಮರತಿಬ್ಬೇಗೌಡ
- ಆಗ್ನೇಯ ಶಿಕ್ಷಕರ ಕ್ಷೇತ್ರ – ಡಿ.ಟಿ.ಶ್ರೀನಿವಾಸ್
- ಈಶಾನ್ಯ ಪದವೀಧರ ಕ್ಷೇತ್ರ – ಡಾ.ಚಂದ್ರಶೇಖರ ಪಾಟೀಲ
- ನೈಋತ್ಯ ಪದವೀಧರ ಕ್ಷೇತ್ರ – ಆಯನೂರು ಮಂಜುನಾಥ್
- ಬೆಂಗಳೂರು ಪದವೀಧರ ಕ್ಷೇತ್ರ – ರಾಮೋಜಿ
ಪದವೀಧರ, ಶಿಕ್ಷಕರ ಕ್ಷೇತ್ರ ಚುನಾವಣೆ ವೇಳಾಪಟ್ಟಿ
ನಾಮಪತ್ರ ಸಲ್ಲಿಕೆಗೆ ಕೊನೇ ದಿನಾಂಕ: ಮೇ 16, 2024
ನಾಮಪತ್ರ ಪರಿಶೀಲನೆ: ಮೇ 17, 2024
ನಾಮಪತ್ರ ಹಿಂಪಡೆಯಲು ಕೊನೇ ದಿನಾಂಕ: ಮೇ 20, 2024
ಮತದಾನ: ಜೂನ್ 03, 2024
ಫಲಿತಾಂಶ: ಜೂನ್ 06, 2024