ಹುಬ್ಬಳ್ಳಿ: ಇಡೀ ಜಗತ್ತು ನಿಧಾನಗತಿಯಲ್ಲಿ ಸಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತವೊಂದೇ ವೇಗವಾಗಿ ದಾಪುಗಾಲು ಹಾಕುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (MLC Election) ಹೇಳಿದರು.
ಬಳ್ಳಾರಿಯಲ್ಲಿ ಶುಕ್ರವಾರ ವಿಧಾನ ಪರಿಷತ್ ಈಶಾನ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಪರ ಮತದಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ವಿಮಾನ ನಿಲ್ದಾಣಗಳನ್ನು ಹೆಚ್ಚಿಸಲಾಗಿದೆ. ಅಂತೆಯೇ ಭಾರತೀಯರಿಗೆ ಹೆಚ್ಚಿನ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಭಾರತ 1000 ವಿಮಾನಗಳ ಆರ್ಡರ್ ಕೊಟ್ಟಿದೆ ಎಂದು ಹೇಳಿದರು.
ನಾಡಿನ ಏಳಿಗೆಗೆ ಬಿಜೆಪಿ ನಾಯಕತ್ವ ಅಗತ್ಯ
ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಇಂದು ಅತ್ಯಂತ ಪ್ರಬಲ ರಾಷ್ಟ್ರವಾಗಿ ಹೊರ ಹೊಮ್ಮುತ್ತಿದೆ. ನಾಡಿನ ಏಳಿಗೆಗೆ ಬಿಜೆಪಿ ನಾಯಕತ್ವ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಮೇ 26ರಂದು ʼಭಾರತದ ಧೀರ ಚೇತನಗಳುʼ ಕೃತಿ ಲೋಕಾರ್ಪಣೆ
ಕಾಂಗ್ರೆಸ್ ಆಡಳಿತದ 60 ವರ್ಷಗಳಲ್ಲಿ ಭ್ರಷ್ಟ ರಾಜಕಾರಣದಿಂದಾಗಿ ಭಾರತ ಜಗತ್ತಿನ 5 ಅತ್ಯಂತ ದುರ್ಬಲ ರಾಷ್ಟ್ರಗಳಲ್ಲಿ ಒಂದಾಗಿತ್ತು. ಆದರೆ, 2014ರಲ್ಲಿ ಮೋದಿ ಪ್ರಧಾನಿಯಾದ ಬಳಿಕ ಈಗ 2024ರ ಹೊತ್ತಿಗೆ ಭಾರತವನ್ನು ಜಗತ್ತಿನ 5ನೇ ಅತ್ಯಂತ ಆರ್ಥಿಕ ಪ್ರಬಲ ರಾಷ್ಟ್ರವನ್ನಾಗಿಸಿದ್ದಾರೆ ಎಂದು ಜೋಶಿ ಹೇಳಿದರು.
ಕಳೆದು ಹೋಗುತ್ತಿದೆ ಕಾಂಗ್ರೆಸ್
ದೇಶದಾದ್ಯಂತ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಕಳೆದು ಹೋಗುತ್ತಿದೆ. ತನ್ನ ಸ್ಥಾನಗಳನ್ನೆಲ್ಲ ಕಳೆದುಕೊಳ್ಳುತ್ತಿದೆ. ಅಧಿಕೃತ ವಿರೋಧ ಪಕ್ಷವಾಗುವತ್ತ ವಾಲುತ್ತಿದೆ ಎಂದ ಅವರು, ಕಾಂಗ್ರೆಸ್ ಆಡಳಿತದ ಎಲ್ಲ ರಾಜ್ಯಗಳಲ್ಲಿ ಅಪರಾಧಗಳ ಸಂಖ್ಯೆ ಮಿತಿ ಮೀರಿದೆ. ಕರ್ನಾಟಕದಲ್ಲೇ ಕಳೆದ ಕೆಲ ತಿಂಗಳುಗಳಲ್ಲಿ 400ಕ್ಕೂ ಹೆಚ್ಚು ಪ್ರಕರಣಗಳು ಘಟಿಸಿವೆ ಎಂದು ಸಚಿವ ಜೋಶಿ ಕಳವಳ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷವನ್ನು ಜನರೇ ಧಿಕ್ಕರಿಸುತ್ತಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಪದವೀಧರರು ಎಚ್ಚೆತ್ತುಕೊಂಡು ಮತ ಚಲಾಯಿಸಬೇಕು. ಸುಭದ್ರ ದೇಶಕ್ಕಾಗಿ ತಮ್ಮ ಆಯ್ಕೆ ಬಿಜೆಪಿ ಆಗಿರಬೇಕು ಎಂದು ಅವರು ಕರೆ ನೀಡಿದರು.
ಇದನ್ನೂ ಓದಿ: Toothpaste Hacks: ಟೂತ್‌ಪೇಸ್ಟ್‌ನಿಂದ ಯಾವೆಲ್ಲ ವಸ್ತುಗಳನ್ನು ಹೊಳೆಯುವಂತೆ ಮಾಡಬಹುದು ನೋಡಿ!
ಸಮಾವೇಶದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು, ಜಿ.ಸೋಮಶೇಖರರೆಡ್ಡಿ, ಮುಖಂಡರಾದ ಮಹಿಪಾಲ್, ರಾಮಲಿಂಗಪ್ಪ, ಗುರುಲಿಂಗನಗೌಡ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಪ್ರಮುಖರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.