ಬೆಂಗಳೂರು: ವಿಧಾನಪರಿಷತ್ತಿನ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ (MLC Election) ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ, ಆಕಾಂಕ್ಷಿಯಾಗಿದ್ದು ನಾಮಪತ್ರ ಸಲ್ಲಿಸಿದ್ದೆ. ಪಕ್ಷ ನಿಮ್ಮನ್ನು, ನಿಮ್ಮ ಸೇವೆಯನ್ನು ಮುಂದೆ ಗುರುತಿಸಲಿದೆ ಎಂದು ಹಿರಿಯರಾದ ಯಡಿಯೂರಪ್ಪ ಅವರು ಹೇಳಿದ್ದಾರೆ. ಅಮರನಾಥ ಪಾಟೀಲರನ್ನು ಬೆಂಬಲಿಸಿ ಎಂದು ಪಕ್ಷದ ಇತರ ನಾಯಕರು ಸೂಚಿಸಿದ್ದಾರೆ. ಅವರ ಸೂಚನೆಯಂತೆ ಸೋಮವಾರ ಕಲಬುರಗಿಗೆ ತೆರಳಿ ನಾಮಪತ್ರ ಹಿಂದಕ್ಕೆ ಪಡೆಯಲಿದ್ದೇನೆ ಎಂದು ಸುರೇಶ್ ಸಜ್ಜನ್ ತಿಳಿಸಿದರು.
ಇದನ್ನೂ ಓದಿ: Karnataka Weather : ಮಲೆನಾಡಿನಲ್ಲಿ ಮಳೆ ಮೋಡಿ; ಭಾನುವಾರವೂ ಅಬ್ಬರ ಇರಲಿದೆ ನೋಡಿ
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದ ಹಿರಿಯರು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಚಿವ ರಾಜುಗೌಡ, ಎನ್. ರವಿಕುಮಾರ್, ಗೋವಿಂದ ಕಾರಜೋಳ ಅವರ ಆಶೀರ್ವಾದ ಪಡೆಯಲು ನಿಯೋಗದೊಂದಿಗೆ ಇಲ್ಲಿಗೆ ಬಂದಿದ್ದೆ. ನಾಮಪತ್ರ ವಾಪಸ್ ಪಡೆಯುವಂತೆ ಸೂಚಿಸಿದ್ದಾರೆ. ಅವರ ಮಾತಿಗೆ ಒಪ್ಪಿದ್ದೇನೆ ಎಂದು ತಿಳಿಸಿದರು. ಇಲ್ಲಿಗೆ ಬಂದಿದ್ದ ಮುಖಂಡರ ಜತೆ ಸಮಾಲೋಚನೆ ಮಾಡಿ ಈ ನಿರ್ಧಾರ ಮಾಡಿದ್ದಾಗಿ ವಿವರಿಸಿದರು.
ರಾಜ್ಯಾಧ್ಯಕ್ಷರು ಪಕ್ಷಕ್ಕಾಗಿ ಮಾಡುತ್ತಿರುವ ಹೋರಾಟ, ಸಂಘಟನಾ ಕಾರ್ಯಕ್ಕೆ ಅವರು ಮೆಚ್ಚುಗೆ ಸೂಚಿಸಿದರು. ನನಗೆ ಟಿಕೆಟ್ ಮುಖ್ಯವಲ್ಲ; ಪಕ್ಷದ ಅಭ್ಯರ್ಥಿಯ ಗೆಲುವೇ ಮುಖ್ಯ ಎಂದು ತಿಳಿಸಿದ ಅವರು, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮುಂದೆ ಮುಖ್ಯಮಂತ್ರಿಯಾಗಲು ಅವರ ಕೈ ಬಲಪಡಿಸುವ ಅಗತ್ಯವಿದೆ ಎಂದು ಇದೇ ವೇಳೆ ತಿಳಿಸಿದರು.
ಇದನ್ನೂ ಓದಿ: Ration Card: ಹೊಸ ರೇಷನ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬೇಕೆ? ಇಲ್ಲಿದೆ ಸಂಪೂರ್ಣ ವಿವರ
ಅಮರನಾಥ ಪಾಟೀಲ್ ಅವರ ಗೆಲುವಿಗೆ ನಾವೆಲ್ಲರೂ ಒಗ್ಗೂಡಿ ಶ್ರಮಿಸಲಿದ್ದೇವೆ ಎಂದು ಇದೇ ಸಂದರ್ಭದಲ್ಲಿ ಸುರೇಶ್ ಸಜ್ಜನ್ ತಿಳಿಸಿದರು.