ಬೆಂಗಳೂರು: ರಾಜ್ಯ ವಿಧಾನಮಂಡಲದಲ್ಲಿ ಕಾಗದ ರಹಿತ ಆಡಳಿತ ವ್ಯವಸ್ಥೆ ತರುವ ಉದ್ದೇಶದ ಇ-ವಿಧಾನ್ ಯೋಜನೆ ಹೆಸರಲ್ಲಿ ಅಧಿಕಾರಿಗಳು ₹254 ಕೋಟಿ ಹಗರಣ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ರಮೇಶ್ ಬಾಬು ಅವರು ಆರೋಪಿಸಿದ್ದಾರೆ.
ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿಗಳ ಮಟ್ಟದಲ್ಲಿ ₹254 ಕೋಟಿ ಮೊತ್ತದ ಹಗರಣ ಮಾಡಲು ಮುಂದಾಗಿದ್ದು, ಈ ಕುರಿತು ಮೇ 5 ಹಾಗೂ 7 ರಂದು ವಿಧಾನಸಭೆ ಸ್ಪೀಕರ್ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದೆ. ನಂತರ ಸ್ಪೀಕರ್ ಅರನ್ನು ಭೇಟಿ ಮಾಡಿಯೂ ಈ ವಿಚಾರವಾಗಿ ತಿಳಿಸಿದ್ದೆ. ಆದರೂ ಯಾವ ಕ್ರಮವನ್ನೂ ಕೈಗೊಂಡಿಲ್ಲʼ ಎಂದರು.
ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸ್ಪೀಕರ್ ಆದ ನಂತರ ಸದನದ ಹಣವನ್ನು ಕಾಪಾಡುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ ಸಾರ್ವಜನಿಕರ ವಿರೋಧದ ನಡುವೆಯೂ ಅಧಿಕಾರಿಗಳು ವಿಧಾನಸಭೆಯ ಸಚಿವಾಲಯಗಳಲ್ಲಿ ಕಾಗದ ರಹಿತ ವ್ಯವಸ್ಥೆಯನ್ನು ತರುವ ಜವಾಬ್ದಾರಿಯನ್ನು ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ (ಕಿಯೋನಿಕ್ಸ್)ದ ಮೂಲಕ ಖಾಸಗಿ ಸಂಸ್ಥೆಗೆ ನೀಡುವ ಮೂಲಕ ತಮ್ಮ ಜೇಬು ತುಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
2017-18ರಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ಆಯವ್ಯಯದಲ್ಲಿ ಕರ್ನಾಟಕ ವಿಧಾನಮಂಡಲದಲ್ಲಿ ನಗದು ರಹಿತ ಯೋಜನೆಯ ಇ-ವಿಧಾನ ಕಾರ್ಯಕ್ರಮ ಜಾರಿಗೊಳಿಸಲು ಪ್ರಾಥಮಿಕವಾಗಿ ಮೂಲಭೂತ ಸೌಕರ್ಯಗಳಿಗೆ ₹20 ಕೋಟಿ ಬಿಡುಗಡೆ ಮಾಡಿತ್ತು ಮತ್ತು ಈ ಯೋಜನೆಗೆ ₹250 ಕೋಟಿ ಅನುದಾನ ಘೋಷಣೆ ಮಾಡಿತ್ತು. ನಂತರ ಕೇಂದ್ರ ಸರ್ಕಾರ ಒಂದು ರಾಷ್ಟ್ರ ಒಂದು ವಿಧಾನಸಭೆ ಎಂಬ ಉದ್ದೇಶದಿಂದ ಎಲ್ಲ ಕಡೆ ಒಂದೇ ರೀತಿಯ ಆಡಳಿತಾತ್ಮಕ ವ್ಯವಸ್ಥೆ ಜಾರಿಗೆ ಸಂಸದೀಯ ವ್ಯವಹಾರಗಳ ಸಚಿವಾಲಯದ ಮೂಲಕ ನೇವಾ ಎಂಬ ಯೋಜನೆ ಘೋಷಿಸಿಸಲಾಗಿತ್ತು. ಯಾವ ರಾಜ್ಯಗಳ ಕಾಗದ ರಹಿತ ವ್ಯವಸ್ಥೆ ಜಾರಿಗೆ ಮುಂದೆಬರುತ್ತವೋ ಆ ರಾಜ್ಯಗಳಿಗೆ 60:40 ಅನುದಾನದ ನೀಡಲು ತೀರ್ಮಾನಿಸಲಾಗಿತ್ತು ಎಂದರು.
254 ಕೋಟಿ ರೂ. ಮೊತ್ತದ ಯೋಜನೆಗೆ ಸುಮಾರು 152 ಕೋಟಿ ರೂ. ಕೇಂದ್ರದಿಂದ ಅನುದಾನ ಬರುತ್ತಿತ್ತು. ರಾಜ್ಯ ಸರ್ಕಾರ ಕೇವಲ 101 ಕೋಟಿ ರೂ. ನೀಡಬೇಕಾಗಿತ್ತು. ಆದರೆ ಈ ನೇವಾ ಯೋಜನೆ ಜಾರಿ ಮಾಡಿದರೆ ಅಧಿಕಾರಿಗಳ ಜೇಬು ತುಂಬುವುದಿಲ್ಲ ಎಂಬ ಉದ್ದೇಶದಿಂದ ವಿಧಾನಸಭೆ ಸ್ಪೀಕರ್ ಪರಿಷತ್ತಿನ ಸಭಾಪತಿಗಳ ದಾರಿ ತಪ್ಪಿಸಿ ಇದನ್ನು ಖಾಸಗಿಯವರಿಗೆ ನೀಡಲು ಮುಂದಾಗಿದ್ದಾರೆ ಎಂದರು.
ಈ ಯೋಜನೆ ನಿರ್ವಹಣೆಗೆ ಕೇರಳದ ಏಸ್ ಟೆಕ್ ಸಿಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಜತೆ ಅಧಿಕಾರಿಗಳಿಂದ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಕೇರಳ ಸಂಸ್ಥೆ ಬ್ಲ್ಯಾಕ್ ಲಿಸ್ಟ್‌ನಲ್ಲಿದೆ. ಆದರೆ ವಿಧಾನಸಭೆ ಅಧಿಕಾರಿಗಳು ಅಕ್ರಮ ಮಾಡಲು ಈ ಯೋಜನೆ ಅನುಷ್ಠಾನ ಮಾಡುತ್ತಿದ್ದಾರೆ. ಇದಕ್ಕೆ ಸಿದ್ದರಾಮಯ್ಯ ಅವರೂ ವಿರೋಧ ಮಾಡಿದ್ದರು. ಹೀಗಾಗಿ ಹಗರಣದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಸ್ಪೀಕರ್ ಕಠಿಣ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಕೆಪಿಸಿಸಿ ಕಾನೂನು ವಿಭಾಗದ ಉಪಾಧ್ಯಕ್ಷರಾದ ದಿವಾಕರ್, ಮಾಧ್ಯಮ ವಿಭಾಗದ ಸಂಯೋಜಕರಾದ ರಾಮಚಂದ್ರಪ್ಪ, ಜಿ.ಸಿ ರಾಜುಗೌಡ ಅವರು ಉಪಸ್ಥಿತರಿದ್ದರು.
ಇದನ್ನೂ ಓದಿ | ʼಇ ಡಿ ವಿಷಯ ಬಿಡಿ, ಅಗ್ನಿಪಥ್ ಹೋರಾಟಕ್ಕೆ ಸಜ್ಜಾಗಿʼ; ಕಾಂಗ್ರೆಸ್ಸಿಗರಿಗೆ ರಾಹುಲ್ ಗಾಂಧಿ ಕರೆ