ತುಮಕೂರು: ಒಂದು ಗ್ರಾಮ ಪಂಚಾಯಿತಿಯಲ್ಲಿ ನಿಂತು ಗೆಲ್ಲುವ ಯೋಗ್ಯತೆ ಎಂಎಲ್‌ಸಿ ಶರವಣಗೆ ಇಲ್ಲ, ಅಲ್ಲೆಲ್ಲೋ ಹೆಣ್ಣು ಮಕ್ಕಳಿಗೆ ಚಿನ್ನದ ಸರ ಹಂಚುವ ಮೂಲಕ ಎಂಎಲ್‌ಸಿ ಆಗಿದ್ದಾನೆ. ಅವರ ಕ್ಷೇತ್ರ ಬಸವನಗುಡಿಯಲ್ಲಿ ಬಿಬಿಎಂಪಿ ಚುನಾವಣೆಯಲ್ಲಿ ಒಬ್ಬ ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲಿ, ಆಮೇಲೆ ಗುಬ್ಬಿ ಕ್ಷೇತ್ರಕ್ಕೆ ಬರಲಿ ಎಂದು ಶಾಸಕ ಎಸ್.ಆರ್. ಶ್ರೀನಿವಾಸ್ ಸವಾಲು ಹಾಕಿದರು.
ಗುಬ್ಬಿಯಲ್ಲಿ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಅವರ ವಿರುದ್ಧ ಜೆಡಿಎಸ್ ನಾಯಕರ ಹೇಳಿಕೆಗಳಿಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಇವರ ಕೈಯಲ್ಲಿ ಏನಾದರೂ ಸೋಲಿಸಲು ಗೆಲ್ಲಿಸಲು ಆಗಿದ್ದಿದ್ದರೆ 224 ಕ್ಷೇತ್ರದಲ್ಲೂ ಇವರೇ ಗೆದ್ದಿರುತ್ತಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರಿಗಾದರೂ ಅಧಿಕಾರ ಬರಬೇಕಾದರೆ ಅದು ಮತದಾರರದಿಂದ ಮಾತ್ರ. ಭಾಷಣ ಮಾಡಿದ ತಕ್ಷಣವೇ ಯಾರು ಪರಿವರ್ತನೆಯಾಗಿ ವೋಟ್ ಹಾಕಲ್ಲ. ಭಾಷಣ ಕೇಳಲು ಚೆನ್ನಾಗಿರುತ್ತದೆ, ಆದರೆ ಮತಗಳಾಗಿ ಪರಿವರ್ತನೆಯಾಗಲ್ಲ. 2023ರಲ್ಲಿ ಜೆಡಿಎಸ್‌ಗೆ ಏನ್ ಎಫೆಕ್ಟ್ ಆಗುತ್ತದೆ ಅಂತ ಗೊತ್ತಾಗುತ್ತದೆ ಎಂದು ಕಿಡಿ ಕಾರಿದರು.
ಚಿನ್ನ ಕೊಟ್ಟು ಅಧಿಕಾರಕ್ಕೆ ಬಂದವರೆಲ್ಲ ಮಾತನಾಡುತ್ತಾರೆ, ಇದು ಜೆಡಿಎಸ್ ದೌರ್ಬಲ್ಯ. ರೈತರ ಪಕ್ಷ, ಕಾರ್ಯಕರ್ತರ ಪಕ್ಷ ಜೆಡಿಎಸ್ ಎನ್ನುವ ಶರವಣ, ಫಾರೂಕ್ ರೈತರಾ? ಈ ಹಿಂದೆ ತಮಿಳುನಾಡಿನ ರಾಮಸ್ವಾಮಿಯನ್ನು ರಾಜ್ಯಸಭೆಗೆ ಕಳುಹಿಸಿದ್ದರು, ಅವರೇನು ರೈತರಾ? ಕುಪೇಂದ್ರ ರೆಡ್ಡಿಗೆ ಈ ಬಾರಿ ಟಿಕೆಟ್ ಕೊಟ್ಟಿದ್ದರು ಅವರು ರೈತರಾ? ಎಂದು ಪ್ರಶ್ನಿಸಿದ ಅವರು, ಶಾಸಕ ಗೌರಿಶಂಕರ್ ಕ್ಷೇತ್ರಕ್ಕೆ ನಾನೇ ಬಂದು ಬಿಡುತ್ತೇನೆ. ಗುಬ್ಬಿಗೆ ಹೋಗಿ ನಿಲ್ಲಬೇಡಿ ಎಂದು ಯಾರಾದರೂ ಸ್ಟೇ ತಂದಿದ್ದಾರಾ? ಮಧುಗಿರಿ, ತುಮಕೂರು ರೂರಲ್ ಆಯ್ತು ಈಗ ಗುಬ್ಬಿಗೆ ಬರಲಿ, ನಾನೇನಾದ್ರೂ ಹೆದರಿಕೊಂಡು ನಡುಗುತ್ತಿದ್ದೇನಾ?. ಇವರೆಲ್ಲಾ ಬಾಯಿ ಚಟಕ್ಕೆ ಮಾತನಾಡಿಕೊಂಡು ಹೋಗಿದ್ದಾರೆ ಎಂದು ಕಿಡಿಕಾರಿದರು.
ಒಬ್ಬರಿಗೆ ತಾಳಿ ಕಟ್ಟಿ ಮತ್ತೊಬ್ಬರ ಜತೆ ಸಂಸಾರ ಮಾಡುತ್ತಾರೆ ಎಂಬ ಸಿ.ಎಮ್. ಇಬ್ರಾಹಿಂ ಆರೋಪಕ್ಕೆ ತಿರುಗೇಟು ನೀಡಿದ ಅವರು, ಇಬ್ರಾಹಿಂ ಎಲ್ಲೆಲ್ಲಿ ಏನೇನು ಆಟ ಆಡಿದ್ದಾರೆ ಗೊತ್ತು. ನನಗೆ ಹೇಳುವವರು ಕೇಳುವವರು ಇದ್ದಾರೆ, ಇಬ್ರಾಹಿಂಗೆ ಯಾರಿದ್ದಾರೆ? ದುಡ್ಡು, ಅಧಿಕಾರ ಬೇಕು ಅಂದಿದ್ದರೆ ಯಾವತ್ತೊ ಹೋಗುತ್ತಿದ್ದೆ. ಇಬ್ರಾಹಿಂ ಅವರನ್ನು ಟೋಪಿ ಗಿರಾಕಿ ಎನ್ನುತ್ತಾರೆ, ಆತ ಎಷ್ಟು ಜನಕ್ಕೆ ಟೋಪಿ ಹಾಕಿಲ್ಲ? ಎಂದು ಕಿಡಿ ಕಾರಿದರು.
ಕುಮಾರಸ್ವಾಮಿ ವಿರುದ್ಧ ಮಾತನಾಡಬಾರದು, ನಾವು ಗಂಡಸರು ಎಂಬ ಶಾಸಕ ಗೌರಿಶಂಕರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಗಂಡಸು ಆಗಿರುವುದಕ್ಕೆ ಅವರಪ್ಪ ಮದುವೆ ಮಾಡಿದ್ದಾರೆ. ಈಗೇನು ಅನುಮಾನ ಬಂದಿದೆಯಂತೆ?. ಅವೆಲ್ಲಾ ಮುಂದೆ ಎಲೆಕ್ಷನ್‌ನಲ್ಲಿ ನೋಡೋಣ. ಗಂಡಸು ಹೆಂಗಸು ಯಾರಂತ ಗೊತ್ತಾಗುತ್ತದೆ. ಯಾರೇ ಬಂದರೂ ಸಂತೋಷ. ನಾನು ಗೆಲ್ಲುತ್ತೇನೆ ಎಂದು ಹೇಳಿದ್ದೀನಾ? ಇವರಲ್ಲಿ ಒಂದೂ ಸ್ಪಷ್ಟ ನಿಲುವು ಇಲ್ಲ. ಯಾರು ಏನು ಬೇಕಾದರೂ ಕ್ರಮ ಕೈಗೊಳ್ಳಲಿ, ಅವರಿಗೆ ನನನ್ನು ಕೇಳುವ ನೈತಿಕತೆಯಿಲ್ಲ ಎಂದು ಜರಿದರು.
ಡಿಸೆಂಬರ್‌ನಲ್ಲಿ ರಾಜೀನಾಮೆ ಕೊಡುವೆ
ಸಚಿವ ಸ್ಥಾನಕ್ಕಾಗಿ ದೇವೇಗೌಡರ ಕೈ ಕಾಲು ಹಿಡಿದಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಶಾಸಕ ಶ್ರೀನಿವಾಸ್, ಕೈ ಕಾಲು ಹಿಡಿಯುವ ಪರಿಸ್ಥಿತಿ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ. ಆ ರೀತಿ ರಾಜಕಾರಣ ಮಾಡುವ ಪ್ರಮೇಯವೇ ಇಲ್ಲ. ಸಚಿವ ಆಗಿದ್ದು ನನ್ನ ಜೀವನದಲ್ಲಿ ಕೆಟ್ಟ ಕನಸು, ಅದನ್ನು ಮರೆಯಲು ಪ್ರಯತ್ನಿಸುತ್ತಿದ್ದೇನೆ. ಇಂತಹವರ ಕ್ಯಾಬಿನೆಟ್‌ನಲ್ಲಿ ಇದ್ದೆನಲ್ಲಾ ಎಂಬುವುದೇ ದೊಡ್ಡ ಅಪಮಾನ ಎಂದುಕೊಳ್ಳುತ್ತೇನೆ. ಡಿಸೆಂಬರ್‌ವರೆಗೂ ಕಾಯುತ್ತೇನೆ, ನಂತರ ಜೆಡಿಎಸ್ ಪಕ್ಷದ ಈ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಬಳಿಕ ಮುಂದಿನ ರಾಜಕೀಯ ನಡೆ ಬಗ್ಗೆ ನಿರ್ಧಾರ ಮಾಡುತ್ತೇನೆ ಎಂದರು. ಜೆಡಿಎಸ್ ಪಕ್ಷದಿಂದ ತಮ್ಮನ್ನು ಉಚ್ಛಾಟಿಸಿರುವ ಬಗ್ಗೆ ಮಾತನಾಡಿದ ಶ್ರೀನಿವಾಸ್, ಜೆಡಿಎಸ್‌ನಿಂದ ಉಚ್ಛಾಟನೆ ಮಾಡಿರುವುದರಲ್ಲಿ ಹೊಸದೇನಿಲ್ಲ, ಉಚ್ಛಾಟನೆ ಮಾಡಿದ್ದು ನನಗೆ ಸಂತೋಷವಾಗಿದೆ.
ಈ ಬೆಳವಣಿಗೆ ಮುಜುಗರ, ಅವಮಾನ ಎಂದು ಭಾವಿಸುವುದಿಲ್ಲ, ಅವರು ನನ್ನ ವಿರುದ್ಧ ಅಭ್ಯರ್ಥಿಯನ್ನು ತಯಾರು ಮಾಡಿದಾಗಲೇ ನಾನು ಉಚ್ಛಾಟಿತನಾಗಿದ್ದೆ. ಡಿಸೆಂಬರ್‌ನಲ್ಲಿ ರಾಜೀನಾಮೆ ಕೊಟ್ಟು ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದರು.
ಇದನ್ನೂ ಓದಿ | ಗುಬ್ಬಿ ಶಾಸಕ ಎಸ್. ಆರ್. ಶ್ರೀನಿವಾಸ್ ಆಪ್ತ JDSನಿಂದ ಉಚ್ಚಾಟನೆ