ವಿಧಾನ ಪರಿಷತ್: ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯದಲ್ಲೇ ಸುದ್ದಿಯಾದ ಶ್ರೀ ಗುರುರಾಘವೇಂದ್ರ ಮತ್ತು ವಸಿಷ್ಠ ಸಹಕಾರ ಬ್ಯಾಂಕ್‌ಗಳ ಅವ್ಯವಹಾರದಲ್ಲಿ ಭಾಗಿಯಾದವರ ಮೇಲೆ ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ?: ಇದು ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್ ಸದಸ್ಯ ಯು.ಬಿ. ವೆಂಕಟೇಶ್ ಕೇಳಿದ ಪ್ರಶ್ನೆ.
ಗಮನ ಸೆಳೆಯುವ ಸೂಚನೆ ಚರ್ಚೆಯಡಿ ವಿಷಯ ಪ್ರಸ್ತಾಪಿಸಿದ ಅವರು ಬೆಂಗಳೂರಿನಲ್ಲಿ ಸಾಕಷ್ಟು ಜನರಿಗೆ ಆರ್ಥಿಕ ನಷ್ಟ ಉಂಟು ಮಾಡಿರುವ ಈ ಹಗರಣದ ವಿಷಯದಲ್ಲಿ ಸರಕಾರ ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಯು ಬಿ ವೆಂಕಟೇಶ್ ಹೇಳಿಕೆ
ʻʻಚಂದಮಾಮ ಕತೆಯಲ್ಲಿ ಬರುವ ಬೇತಾಳನಂತೆ ನನ್ನ ಕತೆ ಆಗಿದೆ. ಪಾಪದವರು ದುಡ್ಡು ಇಟ್ಟು ಮೋಸ ಹೋಗಿದ್ದಾರೆ. ಈ ವರೆಗೆ 90 ಮಂದಿ ಮೃತಪಟ್ಟಿದ್ದಾರೆ. ಗ್ರಾಹಕರು ಸರ್ಕಾರದ ನೆರವು ಕೇಳಿದ್ದಾರೆ. ತನಿಖೆ ಮಾಡುತ್ತಿರುವ ಸಿಐಡಿ ಅಧಿಕಾರಿಗಳು ಸಾವಿರ ಕೋಟಿ ಆಸ್ತಿ ಜಪ್ತಿ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಪ್ರಕರಣದ ಕಥೆ ಏನಾಯಿತು ಎಂದು ಕನಿಷ್ಠ ಮೂರು ಅಥವಾ ಆರು ತಿಂಗಳಿಗೊಮ್ಮೆ ಠೇವಣಿದಾರರಿಗೆ ಏನಾಗಿದೆ ಅಂತ ಮಾಹಿತಿ ಕೊಡಿ ಎಂದು ಕೇಳಿಕೊಂಡಿದ್ದೆವು. ಆದರೆ, ಅಧಿಕಾರಿಗಳು ಮಾಹಿತಿ ಕೊಡುತ್ತಿಲ್ಲʼʼ ಎಂದು ಹೇಳಿದರು.
ಆಗಾಗ ಗ್ರಾಹಕರ ಸಭೆ ನಡೆಯುತ್ತಿದೆ. ಆದರೆ, ಅದರಲ್ಲಿ ಯಾವ ಮಾಹಿತಿಯೂ ರವಾನೆಯಾಗುತ್ತಿಲ್ಲ. ನಾವು ಜನರಿಗೆ ಹೇಗೆ ಮುಖ ತೋರಿಸಬೇಕು ಎಂದೇ ತಿಳಿಯುತ್ತಿಲ್ಲ. ದುಡ್ಡು ಇಟ್ಟವರೆಲ್ಲಾ ಬಡಬ್ರಾಹ್ಮಣರು ಎಂದ ಯು.ಬಿ. ವೆಂಕಟೇಶ್, ಆದಷ್ಟು ಬೇಗನೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು.
ಮಾಡೋದೆಲ್ಲ ಮಾಡಾಗಿದೆ ಎಂದ ಸಚಿವರು
ಯು.ಬಿ ವೆಂಕಟೇಶ್ ಅವರ ಮಾತಿಗೆ ಪ್ರತಿಕ್ರಿಯಿಸಿದ ಸಹಕಾರ ಸಚಿವ ಎಸ್.ಟಿ ಸೋಮಶೇಖರ್ ಅವರು, 3-4ನೇ ಬಾರಿಗೆ ಈ ಪ್ರಶ್ನೆ ಕೇಳುತ್ತಿದ್ದಾರೆ. ಏನೇನು ಆದೇಶಗಳನ್ನು ಕೊಡಬೇಕೋ ಅವೆಲ್ಲವನ್ನೂ ಕೊಡಲಾಗಿದೆ. ಜಸ್ವಂತ್ ರೆಡ್ಡಿ ಹಾಗೂ ರಂಜಿತ್ ರೆಡ್ಡಿ ಅತಿ ಹೆಚ್ಚಿನ ಸಾಲ ಪಡೆದವರು. ಅವರೀಗ ವಿದೇಶದಲ್ಲಿದ್ದಾರೆ. ಸಿಬಿಐ ಮೂಲಕ ಅವರನ್ನು ವಶಕ್ಕೆ ಪಡೆಯುವ ಪ್ರಯತ್ನ ನಡೆಯುತ್ತಿದೆ. ಯಾರೆಲ್ಲ ಸಾಲ ತಗೊಂಡಿದಾರೋ ಅವರೆಲ್ಲರಿಗೆ ನೋಟೀಸ್ ಕೊಡಲಾಗಿದೆ ಎಂದರು. ವಿಧಾನ ಮಂಡಲದ ಅಧಿವೇಶನ ಮುಗಿಯುವ ಒಳಗೆ ಮತ್ತೊಮ್ಮೆ ಸಭೆ ನಡೆಸಲಾಗುವುದು ಎಂದರು.
ʻʻಸಹಕಾರ ಇಲಾಖೆಗೆ ಕೆಲವು ಲಿಮಿಟೇಶನ್ ಇದೆ. ಇದು ಹೈಕೋರ್ಟ್ ಮತ್ತು ರಿಸರ್ವ್ ಬ್ಯಾಂಕ್ ನಿರ್ದೇಶನದ ಮೇಲೆ ತನಿಖೆ ನಡೆಯುತ್ತಿದೆ. ಒಟ್ಟು ೨೪ ಮಂದಿ ದೊಡ್ಡ ಪ್ರಮಾಣದಲ್ಲಿ ಲೋನ್ ಪಡೆದಿದ್ದಾರೆ. ಅವರ ಪೈಕಿ ಎಂಟು ಮಂದಿ ಅತಿ ಹೆಚ್ಚು ಸಾಲ ಪಡೆದಿದ್ದಾರೆ. ಬ್ಯಾಂಕ್‌ನಲ್ಲಿ ಡೆಪಾಸಿಟ್ ಇಟ್ಟ 8100 ಮಂದಿಗೆ ಮಾಹಿತಿ ಕೊಡುವ ಕೆಲಸ ಮಾಡುತ್ತಿದ್ದೇವೆ. ವಸೂಲಿ ಮಾಡಿದ್ದನ್ನು ಡೆಪಾಸಿಟ್ ಮಾಡಿದವರಿಗೆ ಕೊಡುವ ಕೆಲಸ ಮಾಡುತ್ತಿದ್ದೇವೆʼʼ ಎಂದು ಹೇಳಿದರು.
ʻʻ1,115 ಕೋಟಿ ಆಸ್ತಿಯನ್ನು ಫ್ರೀಝ್ ಮಾಡಲಾಗಿದೆ. ಸಹಕಾರ ಇಲಾಖೆಯಿಂದ ಯಾವುದೇ ಸಮಸ್ಯೆ ಇಲ್ಲ. ರಿಸರ್ವ್ ಬ್ಯಾಂಕ್ ಹೇಳಿದಂತೆ ಕೇಳುತ್ತಿದ್ದೇವೆ. ಮುಂಬಯಿಯ ಕೆಲವರು ಬ್ಯಾಂಕನ್ನು ವಹಿಸಿಕೊಳ್ಳುವ ಆಸಕ್ತಿ ವಹಿಸಿದ್ದಾರೆ. ಆದರೆ ಇದಕ್ಕೆ ರಿಸರ್ವ್ ಬ್ಯಾಂಕ್ ಅನುಮತಿ ಕೊಡಬೇಕು. ಸಂಸದರಾಗಿರುವ ತೇಜಸ್ವಿ ಸೂರ್ಯ ಅವರು ಈ ವಿಚಾರದಲ್ಲಿ ಸಮನ್ವಯದ ಕೆಲಸ ಮಾಡುತ್ತಿದ್ದಾರೆʼʼ ಎಂದು ಸೋಮಶೇಖರ್ ವಿವರಿಸಿದರು.
ವಸಿಷ್ಠ ಸಹಕಾರ ಬ್ಯಾಂಕ್ ಬಗ್ಗೆಯೂ ಚರ್ಚೆ
ವಸಿಷ್ಠ ಸೌಹಾರ್ದ ಸಹಕಾರ ಬ್ಯಾಂಕ್‌ನ ಬಗ್ಗೆಯೂ ಉಲ್ಲೇಖ ಮಾಡಿದ ಯು.ಬಿ. ವೆಂಕಟೇಶ್ ಅವರು, ಇದರಲ್ಲಿ 85 ಕೋಟಿ ರೂ. ಅವ್ಯವಹಾರ ಆಗಿದೆ. ಹೈಕೋರ್ಟ್ ನೀಡಿದ ತಡೆಯಾಜ್ಞೆ ಈಗಷ್ಟೇ ತೆರವಾಗಿದೆ. ಈ ಬ್ಯಾಂಕ್‌ಗೆ ಸಹಕಾರ ಇಲಾಖೆಯ ನಿಯಂತ್ರಣ ಇಲ್ಲ ಕಂಟ್ರೋಲ್ ಇಲ್ಲ. ಬ್ಯಾಂಕ್‌ನಿಂದ ೩೫೦ ಕೋಟಿ ರೂ. ಸಂಗ್ರಹವಾಗಿದೆ. ೨೫೦ ಕೋಟಿ ರೂ. ಸಾಲ ನೀಡಲಾಗಿದೆ. ೨೬೦ ಕೋಟಿ ರೂ. ಸುಸ್ತಿ ಇದೆ ಎನ್ನುತ್ತಾರೆ. ಇದರ ವಿಚಾರಣೆ ಸರಿಯಾಗಿ ನಡೆಯುತ್ತಿಲ್ಲʼʼ ಎಂದು ಹೇಳಿದರು.
ಬ್ಯಾಂಕ್ ಈಗಲೂ ಗ್ರಾಹಕರಿಂದ ಹಣ ಸಂಗ್ರಹ ಮಾಡುತ್ತಿದೆ. ಅದು ಹಣವನ್ನು ಕಲೆಕ್ಟ್ ಮಾಡದ ಹಾಗೆ ಸರ್ಕಾರ ತಡೆಹಿಡಿಯಲಿ. ಲೈಸೆನ್ಸ್ ಕೊಡುವ ಸರಕಾರ ಕಂಟ್ರೋಲ್ ಕೂಡಾ ಮಾಡಬೇಕು ಎಂದು ಯು.ಬಿ. ವೆಂಕಟೇಶ್ ಆಗ್ರಹಿಸಿದರು.