ರವಿ ಬಂಗೇರ, ವಿಸ್ತಾರ ನ್ಯೂಸ್ ಬಂಟ್ವಾಳ (ದಕ್ಷಿಣ ಕನ್ನಡ ಜಿಲ್ಲೆ)
ಸಾಮಾನ್ಯವಾಗಿ ರಜೆ ಸಿಕ್ತು ಅಂದ್ರೆ ಮಕ್ಕಳು ಅಕ್ಕಪಕ್ಕದ ಮಕ್ಕಳ ಜೊತೆ ಹಾಯಾಗಿ ಆಟ ಆಡಿಕೊಂಡು ಇರ್ತಾರೆ. ಆದ್ರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ನರಿಕೊಂಬು ಎಂಬ ಗ್ರಾಮದ ನಾಯಿಲ ಎಂಬಲ್ಲಿನ 17 ವರ್ಷದ ವಿದ್ಯಾರ್ಥಿಯೊಬ್ಬ ಎಲ್ಲರೂ ನಿಬ್ಬೆರಗಾಗುವ ಸಾಧನೆಯೊಂದನ್ನು ಮಾಡಿದ್ದಾನೆ. ಇಲ್ಲಿನ ಲೋಕನಾಥ ಪೂಜಾರಿ ಹಾಗೂ ಮೋಹಿನಿ ದಂಪತಿಯ ಪುತ್ರ ಸೃಜನ್ ಮಾಡಿದ ಆ ಸಾಧನೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಸೃಜನ್ ಈಗಷ್ಟೇ ದ್ವಿತೀಯ ಪಿಯು ಕಲಿಯುತ್ತಿದ್ದಾನೆ. ಪಾಣೆಮಂಗಳೂರಿನ ಗೂಡಿನ ಬಳಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಈತ.
ಪರೀಕ್ಷೆ ಮುಗಿದ ಬಳಿಕ ಮನೆಯಲ್ಲಿ ಸುಮ್ಮನೆ ಕುಳಿತು ಏನು ಮಾಡೋದು ಅಂತ ಯೋಚಿಸಿದಾಗ ಸೃಜನ್‌ಗೆ ಮನೆಯ ನೀರಿನ ಸಮಸ್ಯೆ ಬಗೆಹರಿಸುವ ಅಲೋಚನೆ ಬಂದಿದೆ. ಹೀಗಾಗಿ ಮನೆಯ ಪಕ್ಕದಲ್ಲಿ ಇರುವ ಜಾಗದಲ್ಲೇ ಒಂದು ಬಾವಿಯನ್ನು ಕೊರೆಯುವ ನಿರ್ಧಾರಕ್ಕೆ ಬಂದಿದ್ದ. ಹಾಗಂತ ಇದು ಪೂರ್ಣ ಆಗಬಹುದು ಅಂತ ಸೃಜನ್ ಊಹಿಸಲೂ ಇಲ್ಲ. ಸುಮ್ಮನೆ ಸಮಯ ಕಳೆಯುವ ಉದ್ದೇಶದಿಂದ ಮುಂಜಾನೆಯಿಂದ ಮಧ್ಯಾಹ್ನದ ವರೆಗೆ ಹಾಗೂ ಸಂಜೆಯ ವೇಳೆಯಲ್ಲಿ ಗುಂಡಿ ತೆಗೆಯುತ್ತಾ ಹೋಗಿದ್ದಾನೆ.
ಬಾವಿ ಆಳಕ್ಕೆ ಹೋದಂತೆ ಮಣ್ಣು ಅಗೆಯೋದು ಮೇಲೆ ಬಂದು ಮಣ್ಣು ಎತ್ತೋದು ಎಲ್ಲವನ್ನೂ ಒಬ್ಬನೇ ಮಾಡುತ್ತಾ ಬಂದಿದ್ದಾನೆ. ಹೀಗೆ ಎರಡು ವಾರದಲ್ಲಿ ಸೃಜನ್ ಸುಮಾರು 24 ಅಡಿ ಆಳದವರೆಗೂ ಹೋದಾಗ ಅಲ್ಲಿ ನೀರು ಸಿಕ್ಕಿದೆ. ಈಗ ಬಾವಿಯಲ್ಲಿ ಸುಮಾರು ಮೂರು ಅಡಿ ನೀರು ತುಂಬಿಕೊಂಡಿದ್ದು ಸೃಜನ್ ಶ್ರಮಕ್ಕೆ ಫಲ ಸಿಕ್ಕಿದೆ. ಸೃಜನ್ ಕೆಲಸದ ಬಗ್ಗೆ ಮನೆಯವರೂ ಅಷ್ಟಾಗಿ ಗಮನ ಹರಿಸದೇ ಇದ್ದರೂ ಬಾವಿಯಲ್ಲಿ ನೀರು ಸಿಕ್ಕ ಬಳಿಕ ಅಕ್ಕಪಕ್ಕದ ಮನೆಯವರೂ ಸೇರಿ ಎಲ್ಲರೂ ಅಚ್ಚರಿ ಪಟ್ಟಿದ್ದಾರೆ.
ಇವರ ಮನೆಗೆ ಗ್ರಾಮ ಪಂಚಾಯತ್ ನೀರು ಸರಿಯಾಗಿ ಬರುವುದಿಲ್ಲ. ಅಕ್ಕಪಕ್ಕದಲ್ಲಿ ಬಾವಿಯೂ ಇಲ್ಲ. ಹೀಗಾಗಿ ಸೃಜನ್ ಮನೆಯವರಿಗೆ ಕುಡಿಯುವ ನೀರಿನ ಸಮಸ್ಯೆ ಇತ್ತು. ಆದ್ರೆ ಈಗ ಸೃಜನ್ ಏಕಾಂಗಿಯಾಗಿ ಶ್ರಮ ವಹಿಸಿ ನಿರ್ಮಿಸಿದ ಬಾವಿಯಿಂದಾಗಿ ಅಕ್ಕಪಕ್ಕದ ಮನೆಯವರ ನೀರಿನ ಸಮಸ್ಯೆಗೂ ಪರಿಹಾರ ಒದಗಿಸಿದ್ದಾನೆ.
ಸೃಜನ್ ಈ ಸಾಹಸ ಗೊತ್ತಾಗುತ್ತಿದ್ದಂತೆ ಗ್ರಾಮದ ಹಲವರು ಇವರ ಮನೆಗೆ ಬಂದು ಬಾವಿಯನ್ನು ನೋಡಿ ಸೃಜನ್ ಸಾಹಸವನ್ನು ಕೊಂಡಾಡುತ್ತಿದ್ದಾರೆ. ಆಟವಾಡಿಕೊಂಡು ಇರಬೇಕಾದ ಬಾಲಕ ಇಷ್ಟೊಂದು ದೊಡ್ಡ ಸಾಹಸ ಮಾಡಿರೋದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. ನಾಲ್ಕು ಅಡಿ ಅಗಲದ 24 ಅಡಿ ಆಳದ ಈ ಬಾವಿಯಲ್ಲಿ ಬೇಸಗೆಯಲ್ಲೇ ಇಷ್ಟೊಂದು ನೀರು ಸಿಕ್ಕಿರೋದು ಸೃಜನ್ ಸಾಹಸಕ್ಕೆ ಆ ಪ್ರಕೃತಿ ಕೊಟ್ಟ ಕೊಡುಗೆಯಲ್ಲದೆ ಬೇರೇನೂ ಅಲ್ಲ.
ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಕನಸುಗಳಿಗೆ ರೆಕ್ಕೆ ಕಟ್ಟಿದ ಹುಡುಗಿ ಕಲ್ಪನಾ ಚಾವ್ಲಾ; ಆಕೆಗೆ ಆಕಾಶದ ಎತ್ತರವೂ ಕಡಿಮೆಯೇ!