ಬೆಳಗಾವಿ: ಪುನರ್ ಅಭಿವೃದ್ಧಿಪಡಿಸಿದ ಬೆಳಗಾವಿ ರೈಲು ನಿಲ್ದಾಣ ಉದ್ಘಾಟನೆ, ಲೋಂಡಾ, ಬೆಳಗಾವಿ, ಫಟಪ್ರಭಾ ಮಾರ್ಗದ ಡಬ್ಲಿಂಗ್ ಲೋಕಾರ್ಪಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಬೆಳಗಾವಿಗೆ (Modi at Belagavi) ಆಗಮಿಸುತ್ತಿದ್ದು, ಕುಂದಾನಗರಿ ಕೇಸರಿ ಕಲರವದೊಂದಿಗೆ ಸಂಭ್ರಮಿಸುತ್ತಿದೆ. ಇದರ ಜತೆಗೆ ಬೆಳಗಾವಿ ನಗರದಲ್ಲಿ ನಡೆಯಲಿರುವ ೧೦.೭ ಕಿ.ಮೀ. ಉದ್ದರ ಮೆಗಾ ರೋಡ್ ಶೋನಲ್ಲಿ ಪಾಲ್ಗೊಳ್ಳುವುದಕ್ಕಾಗಿ ಈಗಾಗಲೇ ಲಕ್ಷಾಂತರ ಮಂದಿ ಆಗಮಿಸಿ ರಸ್ತೆಯ ಇಕ್ಕೆಲಗಳಲ್ಲಿ ಜಮಾವಣೆಗೊಂಡಿದ್ದಾರೆ.
ಶಿವಮೊಗ್ಗ ಭೇಟಿ ಬಳಿಕ ಮಧ್ಯಾಹ್ನ 2.30ಕ್ಕೆ ನರೇಂದ್ರ ಮೋದಿ ಬೆಳಗಾವಿಗೆ ಆಗಮಿಸಲಿದ್ದಾರೆ. ಇಲ್ಲಿನ ಮಾಲಿನಿ ಸಿಟಿ ಮೈದಾನದ ಹತ್ತು ಎಕರೆ ಜಾಗದಲ್ಲಿ ಬೃಹದಾಕಾರದ ಟೆಂಟ್ ನಿರ್ಮಾಣ ಮಾಡಲಾಗಿದ್ದು, ಒಂದು ಲಕ್ಷಕ್ಕೂ ಹೆಚ್ಚು ಆಸನಗಳ ವ್ಯವಸ್ಥೆ ಮಾಡಲಾಗಿದ್ದು, ಹಲವು ಕಾಮಗಾರಿಗಳ ಉದ್ಘಾಟನೆ ಮತ್ತು ಹೊಸ ಯೋಜನೆಗಳ ಶಂಕುಸ್ಥಾಪನೆ ಮಾಡಲಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಬಿಡುಗಡೆಯೂ ಇದೇ ವೇದಿಕೆಯಲ್ಲಿ ನಡೆಯಲಿದ್ದು, 8 ಕೋಟಿಗೂ ಹೆಚ್ಚು ರೈತರ ಖಾತೆಗೆ ತಲಾ 2000 ರೂ. ಜಮಾವಣೆ ಆಗಲಿದೆ.
ಮೋದಿ ಸ್ವಾಗತಕ್ಕೆ 10 ಸಾವಿರ ಮಹಿಳೆಯರು ಸಜ್ಜು
ಬೆಳಗಾವಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿಗೆ ವೈಭವದ ಸ್ವಾಗತ ಕೋರಲು 10 ಸಾವಿರ ಮಹಿಳೆಯರು ಸಜ್ಜಾಗಿದ್ದಾರೆ. ಕೇಸರಿ ಪೇಟ, ಕಲಶಗನ್ನು ಹಿಡಿರುವ ಮಹಿಳೆಯರು ಸ್ವಾಗತ ಕೋರಲಿದ್ದಾರೆ. ರಾಣಿ ಚೆನ್ನಮ್ಮ ವೃತ್ತದತ್ತ ಜನಸಾಗರ ಹರಿದುಬರುತ್ತಿದ್ದು, ಮೋದಿಯವರತ್ತ ಕೈಬೀಸಲು ರಸ್ತೆಯ ಇಕ್ಕೆಲಗಳಲ್ಲಿ ಜನರು ಜಮಾಯಿಸುತ್ತಿದ್ದಾರೆ.
ಮೋದಿಗೆ ಕಾಯಕ ಯೋಗಿಗಳ ಸ್ವಾಗತ
ಮೋದಿ ಅವರು ಕುಂದಾ ನಗರಿಗೆ ಬರುತ್ತಿದ್ದಂತೆಯೇ ಐವರು ಜನ ಸಾಮಾನ್ಯ ಕಾಯಕಯೋಗಿಗಳು ಅವರನ್ನು ಸ್ವಾಗತಿಸಲಿದ್ದಾರೆ. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ್ ನೇತೃತ್ವದಲ್ಲಿ ಐವರು ಕಾಯಕಯೋಗಿಗಳನ್ನು (ಆಟೋ ಚಾಲಕ, ಪೌರ ಕಾರ್ಮಿಕ ಮಹಿಳೆ, ನೇಕಾರ, ರೈತ ಮಹಿಳೆ, ಕಟ್ಟಡ ಕಾರ್ಮಿಕರು) ಆಯ್ಕೆ ಮಾಡಲಾಗಿದೆ.
ಶ್ರಮ ಜೀವಿಗಳಾದ ಆಟೋ ಚಾಲಕ ಮಯೂರ ಚವಾಣ್, ಪೌರ ಕಾರ್ಮಿಕ ಮಹಿಳೆ ಮೀನಾಕ್ಷಿ ತಳವಾರ, ಕಟ್ಟಡ ಕಾರ್ಮಿಕ ಮಂಗೇಶ ಬಸ್ತವಾಡಕರ್, ರೈತ ಮಹಿಳೆ ಶೀಲಾ ಬಾಬಾರುವಾಕ್ ಖನ್ನುಕರ್, ನೇಕಾರ ಕಲ್ಲಪ್ಪ ಟೋಪಗಿರಿ ಅವರು ಸ್ವಾಗತ ಕೋರಲಿದ್ದಾರೆ.
ಎಲ್ಲಿಂದ ಎಲ್ಲಿಯವರೆಗೆ ರೋಡ್ ಶೋ
ಬೆಳಗಾವಿಯ ಎಪಿಎಂಸಿ ಬಳಿಯ ಕೆಎಸ್‌ಆರ್‌ಪಿ ಮೈದಾನದಿಂದ ಮಾಲಿನಿ ಸಿಟಿ ಮೈದಾನದವರೆಗೆ ಸುಮಾರು ೧೦.೭ ಕಿ.ಮೀ. ರೋಡ್ ಶೋ ನಡೆಯಲಿದೆ.
ಮಾರ್ಗ ಇದು: ಕೆಎಸ್‌ಆರ್‌ಪಿ ಮೈದಾನದಿಂದ ವೀರರಾಣಿ ಕಿತ್ತೂರು ಚನ್ನಮ್ಮ ವೃತ್ತ, ಧರ್ಮವೀರ ಸಂಭಾಜಿ ವೃತ್ತ, ರಾಮಲಿಂಗಖಿಂಡ ಬೀದಿ, ಕಪಿಲೇಶ್ವರ ಮಂದಿರ ಬಳಿ ಮೇಲ್ಸೆತುವೆ, ಶಹಾಪುರ ರಸ್ತೆ, ಶಿವಚರಿತ್ರೆ ಮುಂಭಾಗದ ರಸ್ತೆ, ಹಳೆಯ ಪಿಬಿ ರಸ್ತೆ ಮೂಲಕವಾಗಿ ಬಿ.ಎಸ್.ಯಡಿಯೂರಪ್ಪ ಮಾರ್ಗವಾಗಿ ಮಾಲಿನಿ ಸಿಟಿ ಮೈದಾನವರೆಗೆ ರೋಡ್ ಶೋ ಇದಲಿದೆ.
ರೋಡ್ ಶೋ ವಿಶೇಷತೆಗಳು
ರೋಡ್ ಶೋ ಹಲವು ವಿಶೇಷಗಳನ್ನು ಒಳಗೊಂಡಿದೆ. ರಸ್ತೆಯ ಉದ್ದಕ್ಕೂ ದೇಶದ 29 ರಾಜ್ಯ, 8 ಕೇಂದ್ರಾಡಳಿತ ಪ್ರದೇಶಗಳ ವೇಷಭೂಷಣ ಧರಿಸಿ ಪ್ರದರ್ಶನ ನೀಡಲಿದ್ದಾರೆ. ಜೊತೆಗೆ ಮಹನೀಯರ ಸಾಹಸಗಾಥೆ ಬಿಂಬಿಸುವ ಲೈವ್ ಪ್ರದರ್ಶನ ಇರುತ್ತದೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಳವಡಿ ಮಲ್ಲಮ್ಮ, ಶಿವಾಜಿ ಮಹಾರಾಜರ ಸಾಹಸಗಾಥೆ ಪ್ರದರ್ಶನವಿದೆ.
ರೋಡ್ ಶೋ ಬೆಳಗಾವಿ ದಕ್ಷಿಣ ಕ್ಷೇತ್ರ ಪ್ರವೇಶಿಸುತ್ತಿದ್ದಂತೆ ಪೂರ್ಣಕುಂಭ ಹೊತ್ತು 10 ಸಾವಿರ ಮಹಿಳೆಯರು ಮೋದಿ ಅವರನ್ನು ಸ್ವಾಗತಿಸಲಿದ್ದಾರೆ. ಕೇಸರಿ ಪೇಟ ತೊಟ್ಟು, ಪೂರ್ಣಕುಂಭ ಹೊತ್ತು ಮೋದಿಯನ್ನು ಸ್ವಾಗತಿಸಲಿದ್ದಾರೆ.
ರೋಡ್ ಶೋದಲ್ಲಿ ಕಾಂಗ್ರೆಸ್ ಯುಗದಲ್ಲಿ ದೇಶದಲ್ಲಿ ಏನೇನಾಗಿತ್ತು, ಮೋದಿ ಯುಗದಲ್ಲಿ ಏನೇನಾಗಿದೆ ಎಂಬ ಬಗ್ಗೆ ಮಾಹಿತಿ ನೀಡಲಾಗುತ್ತದೆ.
ರೋಡ್ ಶೋಗೆ ಬಿಗಿ ಭದ್ರತೆ, ಅಂಗಡಿ ಮುಂಗಟ್ಟು ಬಂದ್ ಇಲ್ಲ
ರೋಡ್ ಶೋಗೆ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಮತ್ತು ಎಸ್‌ಪಿ ಬೋರಲಿಂಗಯ್ಯ ತಿಳಿಸಿದ್ದಾರೆ. 6 ಜನ ಎಸ್ಪಿಗಳು, 11 ಎಡಿಷನಲ್ ಎಸ್ಪಿ, 28 ಜನ ಡಿವೈಎಸ್ಪಿಗಳು, 60 ಇನ್‌ಸ್ಪೆಕ್ಟರ್‌ಗಳು, ೨೨ ಕೆಎಸ್ಆರ್ ತುಕಡಿ ಸೇರಿ ಒಟ್ಟು 3 ಸಾವಿರ ಸಿಬ್ಬಂದಿ ಭದ್ರತೆಗೆ ನಿಯೋಜನೆ ಮಾಡಲಾಗಿದೆ.
ರೋಡ್ ಶೋ ಸಾಗುವ ದಾರಿಯಲ್ಲಿ ವ್ಯಾಪಾರ ವಹಿವಾಟಿಗೆ ಯಾವುದೇ ಅಡ್ಡಿ ಇಲ್ಲ. ಕೆಲವರು ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ಬಂದ್ ಮಾಡುತ್ತಿದ್ದಾರೆ. ನಾವಾಗಿ ಅಂಗಡಿ- ಮುಗ್ಗಟ್ಟುಗಳನ್ನು ಬಂದ್ ಮಾಡಿಸುತ್ತಿಲ್ಲ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : PM Modi: ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಅಂಬೇಡ್ಕರ್‌ಗೆ ಅಪಮಾನ ಆರೋಪ, ರಾತ್ರೋರಾತ್ರಿ ಉಬ್ಬುಚಿತ್ರ ಅಳವಡಿಕೆ