ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ಕರ್ನಾಟಕದಲ್ಲಿ ಆಯೋಜನೆಗೊಂಡಿರುವ ಅಮೃತ ಭಾರತಿಗೆ ಕನ್ನಡದ ಆರತಿ ಕಾರ್ಯಕ್ರಮ ಈಗ ಪ್ರಧಾನಿ ನರೇಂದ್ರ ಮೋದಿ ಅವರ ʻಮನ್ʼ ಗೆದ್ದಿದೆ.
ಭಾನುವಾರ ನಡೆದ ೯೧ನೇ ಮಾಸಿಕ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮೋದಿ ಅವರು ಕರ್ನಾಟಕವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಆಯೋಜಿಸಿದ ಅಮೃತ ಭಾರತಿ ಕನ್ನಡದಾರತಿ ಕಾರ್ಯಕ್ರಮವನ್ನು ಉಲ್ಲೇಖಿಸಿ ಶ್ಲಾಘಿಸಿದರು. ಇದರ ಅಡಿಯಲ್ಲಿ ರಾಜ್ಯದ ೭೫ ಕಡೆಗಳಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಏನಿದು ವಿಶೇಷ ಸಂಭ್ರಮ?
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರವು ಆಯೋಜಿಸಿದ ಕಾರ್ಯಕ್ರಮ ಇದು. ಮೇ ೨೮ರಿಂದ ಆರಂಭಗೊಂಡಿರುವ ಈ ವಿಶೇಷ ಕಾರ್ಯಕ್ರಮಗಳ ಸರಣಿ ಆಗಸ್ಟ್ ೧೫ರವರೆಗೂ ಮುಂದುವರಿಯಲಿದೆ.
ಕಳೆದ ಮೇ ೨೮ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಸರಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರ ವಹಿಸಿದ ರಾಜ್ಯದ ೭೫ ಸ್ಥಳಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುವುದು ಇದರ ಮೂಲ ಉದ್ದೇಶ. ಮೊದಲ ಹಂತದಲ್ಲಿ ಮೇ ೨೮ರಂದು ರಾಜ್ಯದ ೪೫ ಸ್ಥಳಗಳಲ್ಲಿ ಕಾರ್ಯಕ್ರಮ ನಡೆದರೆ ಉಳಿದ ಕಡೆ ಜೂನ್ ೨೫ಕ್ಕೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಗಳಲ್ಲಿ ದೇಶ ಭಕ್ತಿಯನ್ನು ಬಿಂಬಿಸುವ ಸಾಂಸ್ಕೃತಿ ಕಾರ್ಯಕ್ರಮ, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ಥಳೀಯರನ್ನು ಗೌರವಿಸುವ ಸಂಭ್ರಮವಿತ್ತು. ಈ ಅಭಿಯಾನಕ್ಕಾಗಿ ಪ್ರತಿ ಜಿಲ್ಲೆಗೆ ೧.೮೦ ಲಕ್ಷ ರೂ. ಅನುದಾನವನ್ನು ನೀಡಲಾಗಿದೆ.
ನಾಳೆಯಿಂದ ರಥ ಯಾತ್ರೆ
ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದಡಿ ಆ.1 ರಿಂದ 8 ರವರೆಗೆ ರಾಜ್ಯದ ನಾಲ್ಕು ಕಂದಾಯ ಜಿಲ್ಲೆಗಳಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ರಥಯಾತ್ರೆ ನಡೆಸಲಾಗುವುದು. 31 ಜಿಲ್ಲೆಗಳಲ್ಲೂ ಸಂಚರಿಸುವ ರಥಯಾತ್ರೆ ಆಗಸ್ಟ್ ೯ರಂದು ಬೆಂಗಳೂರಿಗೆ ತಲುಪಲಿದೆ. ಆ.9 ರಿಂ 11 ರವರೆಗೆ ನಗರದಲ್ಲಿ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ. ರಾಜಧಾನಿಯಲ್ಲಿ ಭಾರಿ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ದೇಶದಲ್ಲಿ ಆಗಸ್ಟ್ ೧೩ರಿಂದ ೧೫ರವರೆಗೆ ಮನೆ ಮನೆಯಲ್ಲಿ ತಿರಂಗಾ ಕಾರ್ಯಕ್ರಮ ಹಮ್ಮಿಕೊಂಡಿದ್ದರೆ ಕರ್ನಾಟಕದಲ್ಲಿ ಆಗಸ್ಟ್ ೯ರಂದು ಮನೆ ಮನೆ ತ್ರಿವರ್ಣ ಧ್ವಜ ಹಾರಿಸುವ ಯೋಜನೆ ಇದೆ. ಅಮೃತ ಭಾರತಿಗೆ ಕನ್ನಡದಾರತಿ ಕಾರ್ಯಕ್ರಮದ ಭಾಗವಾಗಿ ಪ್ರಬಂಧ ಸ್ಪರ್ಧೆಯನ್ನು ಕೂಡಾ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ | ಮಧುವಿನಿಂದಲೇ ಬದುಕು ಕಟ್ಟುವ ಮಧುಕೇಶ್ವರ್ ಹೆಗಡೆ: ಮೋದಿ ಹೇಳಿದ ಈ ಸಾಹಸಿ ʻಜೇನುʼಗಾರ ಯಾರು?