ಶಿವಮೊಗ್ಗ: ಫೆಬ್ರವರಿ ೨೭ರಂದು ಲೋಕಾರ್ಪಣೆಗೊಳ್ಳಲಿರುವ ಶಿವಮೊಗ್ಗ ವಿಮಾನ ನಿಲ್ದಾಣವು (Shivamogga Airport) ವಾಣಿಜ್ಯ, ಸಂಪರ್ಕಕ್ಕೆ ಉತ್ತೇಜನ ನೀಡಲಿದೆ ಮತ್ತು ಇದು ಪ್ರವಾಸೋದ್ಯಮದ ಅವಕಾಶವನ್ನು ಹೆಚ್ಚಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕನಸು ಮತ್ತು ಹಾಲಿ ಸಂಸದ ಬಿ.ವೈ ರಾಘವೇಂದ್ರ ಅವರ ಪ್ರಯತ್ನದ ಫಲವಾಗಿ ವಿಮಾನ ನಿಲ್ದಾಣ ರೂಪುಗೊಂಡಿದ್ದು, ಲೋಕಾರ್ಪಣೆಗೆ ಸಜ್ಜುಗೊಂಡಿದೆ. ಫೆಬ್ರವರಿ ೨೭ರಂದು, ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಈ ವಿಮಾನ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ. ವಿಮಾನ ನಿಲ್ದಾಣದ ವೈಭವದ ದೃಶ್ಯಗಳನ್ನು ಒಳಗೊಂಡ ಮಾಹಿತಿಯನ್ನು ಸಂಸದ ಬಿ.ವೈ ರಾಘವೇಂದ್ರ ಅವರು ಟ್ವೀಟ್ ಮಾಡಿದ್ದು, ಈ ಟ್ವೀಟನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ.
ಬಿ.ವೈ ರಾಘವೇಂದ್ರ ಅವರ ಟ್ವೀಟ್‌ನಲ್ಲಿ ಏನಿದೆ?
ʻʻಶಿವಮೊಗ್ಗದಲ್ಲಿ ವಿಮಾನ ನಿಲ್ದಾಣದ ಸ್ಥಾಪನೆ ಕನಸು ನನಸಾಗುತ್ತಿದೆ. ಶಿವಮೊಗ್ಗದ ಈ ವಿಮಾನ ನಿಲ್ದಾಣ ಕೇವಲ ಒಂದು ಏರ್‌ಪೋರ್ಟ್ ಅಲ್ಲ. ಇದು ಮಲೆನಾಡು ಭಾಗದ ಮಹಾ ಪರಿವರ್ತನೆಯ ಪ್ರಯಾಣಕ್ಕೆ ಹೆಬ್ಬಾಗಿಲಾಗಿ ತನ್ನನ್ನು ತಾನು ಶ್ರುತಪಡಿಸಲಿದೆʼʼ ಎಂದು ಬಿ.ವೈ ರಾಘವೇಂದ್ರ ಹೇಳಿದ್ದಾರೆ.
ಈ ವಿಮಾನ ನಿಲ್ದಾಣ ಕೇವಲ ಶಿವಮೊಗ್ಗ ಜನರ ಬೇಡಿಕೆಗಳನ್ನು ಈಡೇರಿಸುವುದಲ್ಲ. ಬದಲಾಗಿ, ಇಡೀ ಮಧ್ಯ ಕರ್ನಾಟಕದ ಜನರ ಆಶೋತ್ತರಗಳನ್ನು ಈಡೇರಿಸಲಿದೆ. ಇದು ಈ ಭಾಗದ ಯುವಕರ ಆಶೋತ್ತರಗಳಿಗೆ ರೆಕ್ಕೆಯಾಗಲಿದೆ. ಅವರಿಗೆ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿ ಮಾಡಲಿದೆ ಎಂದು ರಾಘವೇಂದ್ರ ತಮ್ಮ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಏನೇನು ಲಾಭ?; ಬಿ.ವೈ ರಾಘವೇಂದ್ರ ಹೇಳೋದೇನು?
ಕೈಗಾರಿಕೆಗಳು ಅದರಲ್ಲೂ ಮುಖ್ಯವಾಗಿ ಮಾಹಿತಿ ತಂತ್ರಜ್ಞಾನ, ಪ್ರವಾಸೋದ್ಯಮ, ಹೈನುಗಾರಿಕೆ ಕ್ಷೇತ್ರಕ್ಕೆ ಇದರಿಂದ ದೊಡ್ಡ ಲಾಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರ ಮಾರ್ಗದರ್ಶನ ಮತ್ತು ಡಬಲ್ ಎಂಜಿನ್ ಸರ್ಕಾರದ ಪ್ರಯತ್ನದಿಂದಾಗಿ ಈ ಮಹತ್ವಾಕಾಂಕ್ಷೆಯ ಯೋಜನೆ ದಾಖಲೆ ಸಮಯದಲ್ಲಿ ಸಾಕಾರಗೊಂಡಿದೆ ಎಂದಿದ್ದಾರೆ ಬಿ.ವೈ ರಾಘವೇಂದ್ರ.
ಇದನ್ನೂ ಓದಿ : Narendra Modi: ಬಿ.ಎಸ್. ಯಡಿಯೂರಪ್ಪ ಭಾವನಾತ್ಮಕ ಭಾಷಣಕ್ಕೆ ಪ್ರಧಾನಿ ಮೋದಿ ಹರ್ಷ