ಬೆಂಗಳೂರು: ಚಂದ್ರಯಾನ 3 (Chandrayaana 3) ಯಶಸ್ಸಿನ ಸಂಭ್ರಮಾಚರಣೆಗಾಗಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಆಗಸ್ಟ್ 26ರಂದು ಬೆಂಗಳೂರಿಗೆ ಆಗಮಿಸಲಿದ್ದು, ಅದ್ಧೂರಿ ರೋಡ್ ಶೋ (Modi Road Show) ಕೂಡಾ ನಡೆಸಲಿದ್ದಾರೆ. ಹೀಗಾಗಿ ರಾಜಧಾನಿಯಲ್ಲಿ (Modi in Bangalore) ಕೆಲವೊಂದು ಮಾರ್ಗಗಳಲ್ಲಿ ಸಂಚಾರ ಬದಲಾವಣೆ ನಡೆಯಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸಕ್ತ ಬ್ರಿಕ್ಸ್ ಶೃಂಗಸಭೆಗಾಗಿ (BRICS Summit 2023) ದಕ್ಷಿಣ ಆಫ್ರಿಕದ ಜೋಹಾನ್ಸ್ಬರ್ಗ್ನಲ್ಲಿದ್ದಾರೆ. ಅವರು ಆಗಸ್ಟ್ 26ರಂದು ಮುಂಜಾನೆ ನೇರವಾಗಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಅವರು ಪೀಣ್ಯದಲ್ಲಿರುವ ಇಸ್ರೋ ಕಚೇರಿಗೆ ತೆರಳಿ ಅಲ್ಲಿ ವಿಜ್ಞಾನಿಗಳ ಜತೆ ಚಂದ್ರಯಾನ- 3ರ (Chandrayaan 3) ಯಶಸ್ಸನ್ನು ಸಂಭ್ರಮಿಸಲಿದ್ದು, ಬಳಿಕ ರೋಡ್ ಶೋ ಕೂಡಾ ನಡೆಸಲಿದ್ದಾರೆ.
ಮೋದಿ ಕಾರ್ಯಕ್ರಮ ಹೇಗಿರುತ್ತದೆ? (ಈಗಿನ ಮಾಹಿತಿ ಪ್ರಕಾರ)
- ಜೋಹಾನ್ಸ್ಬರ್ಗ್ನಿಂದ ನೇರವಾಗಿ ಬೆಂಗಳೂರಿಗೆ ಬರಲಿರುವ ಮೋದಿ, ಬೆಳಗ್ಗೆ 5.55ಕ್ಕೆ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಬರಲಿದ್ದಾರೆ.
- 7 ಗಂಟೆಗೆ ಪೀಣ್ಯದಲ್ಲಿರುವ ಇಸ್ರೋದ ಕಮಾಂಡ್ ಸೆಂಟರ್ ಇಸ್ಟ್ರಾಕ್ಗೆ ಮೋದಿ ಭೇಟಿ ನೀಡಲಿದ್ದಾರೆ. ಇಸ್ರೊ ಮುಖ್ಯಸ್ಥರು, ವಿಜ್ಞಾನಿಗಳಿಗೆ ಅಭಿನಂದನೆ ಹೇಳಲಿದ್ದಾರೆ.
- ಬಳಿಕ ಪೀಣ್ಯದ ಇಸ್ರೋ ಪರಿಸರದಲ್ಲಿ ಸುಮಾರು ಒಂದು ಕಿ.ಮೀ. ರೋಡ್ ಶೋನದಲ್ಲಿ ಭಾಗವಹಿಸಲಿದ್ದಾರೆ.
- ಬೆಳಗ್ಗೆ 8.35ಕ್ಕೆ ಎಚ್ಎಎಲ್ನಿಂದ ಹೊರಟು 11.35ಕ್ಕೆ ನವದೆಹಲಿಗೆ ತೆರಳಲಿದ್ದಾರೆ.
ಇದನ್ನೂ ಓದಿ: Chandrayaan 3: ನಾಳೆ ದಕ್ಷಿಣ ಆಫ್ರಿಕದಿಂದ ನೇರ ಬೆಂಗಳೂರಿನ ಇಸ್ರೋ ಕಚೇರಿಗೆ ಆಗಮಿಸಲಿರುವ ಪ್ರಧಾನಿ ಮೋದಿ; 1 ಕಿಮೀ ರೋಡ್ ಶೋ!
ರಸ್ತೆಗಳ ಸಂಚಾರ ಮಾರ್ಗ ಬದಲಾವಣೆ ವಿವರ ಹೀಗಿದೆ
ಆಗಸ್ಟ್ 26ರಂದು ಬೆಳಗ್ಗೆ 4:30ರಿಂದ ಬೆಳಗ್ಗೆ 9:30ರ ವರೆಗೆ ಕೆಳಕಂಡ ರಸ್ತೆ ಮಾರ್ಗ ಬದಲಾವಣೆ ಮಾಡಲಾಗಿದ್ದು, ಸಾರ್ವಜನಿಕರು ಈ ರಸ್ತೆಗಳ ಬದಲಾಗಿ ಪರ್ಯಾಯ ಮಾರ್ಗ ಬಳಕೆಗೆ ಪೋಲಿಸರ ಮನವಿ ಮಾಡಿದ್ದಾರೆ.
ಯಾವ ಯಾವ ರಸ್ತೆ ಬಳಸಬಾರದು?
- ಓಲ್ಡ್ ಏರ್ಪೋರ್ಟ್ ರಸ್ತೆ
- ಓಲ್ಡ್ ಮದ್ರಾಸ್ ರಸ್ತೆ
- ಎಂ.ಜಿ.ರಸ್ತೆ
- ಕಬ್ಬನ್ ರಸ್ತೆ
- ರಾಜಭವನ ರಸ್ತೆ
- ಬಳ್ಳಾರಿ ರಸ್ತೆ (ಮೇಖ್ರಿ ಸರ್ಕಲ್)
- ಸಿವಿ ರಾಮನ್ ರಸ್ತೆ
- ಯಶವಂತಪುರ ಫ್ಲೈ ಓವರ್,
- ತುಮಕೂರು ರಸ್ತೆ (ಯಶವಂತಪುರದಿಂದ ನಾಗಸಂದ್ರದವರೆಗೆ)
- ಮಾಗಡಿ ರಸ್ತೆ, ಹೊರವರ್ತುಲ ರಸ್ತೆ (ಗೊರಗುಂಟೆ ಪಾಳ್ಯ ಜಂಕ್ಷನ್ನಿಂದ ಸುಮನಹಳ್ಳಿ)
- ಗುಬ್ಬಿ ತೋಟದಪ್ಪ ರಸ್ತೆ,
- ಜಾಲಹಳ್ಳಿ ಕ್ರಾಸ್ ರಸ್ತೆ
ಭಾರಿ ಸರಕು ಸಾಗಾಣಿಕೆ (Heavy Goods) ವಾಹನಗಳ ಸಂಚಾರ ನಿರ್ಬಂಧ
ನಗರದೊಳಗೆ ಆಗಸ್ಟ್ 26ರ ಬೆಳಗಿನ ಜಾವ ನಾಲ್ಕು ಗಂಟೆಯಿಂದ ಬೆಳಗ್ಗೆ 11.00 ಗಂಟೆಯವರೆಗೆ ನಿಷೇಧಿಸಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸರ ಪ್ರಕಟಣೆ ತಿಳಿಸಿದೆ.