ಬೆಂಗಳೂರು: ಮೇಲ್ನೋಟಕ್ಕೆ ಇದು ಪಕ್ಕಾ ಸರ್ಕಾರಿ ಕಾರ್ಯಕ್ರಮ. ಬೆಂಗಳೂರು ವಿಮಾನ ನಿಲ್ದಾಣದ ಎರಡನೇ ಟರ್ಮಿನಲ್ ಉದ್ಘಾಟನೆ, ೧೦೮ ಅಡಿ ಎತ್ತರದ ಬೃಹತ್ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ ಮತ್ತು ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ: ಎಲ್ಲವೂ ಸರ್ಕಾರವೇ ಆಯೋಜಿಸಿರುವ ಸರ್ಕಾರಿ ಕಾರ್ಯಕ್ರಮ. ಭಾಗವಹಿಸುತ್ತಿರುವವರು ಪ್ರಧಾನಿ ನರೇಂದ್ರ ಮೋದಿ.
ಆದರೆ, ಈ ಒಂದೇ ಭೇಟಿಯಲ್ಲಿ ಮೂರು ಪ್ರಬಲ ಸಮುದಾಯಗಳ ಒಲವನ್ನು ಗಳಿಸುವ ನಿಟ್ಟಿನಲ್ಲಿ ಬಿಜೆಪಿ ದೊಡ್ಡದೊಂದು ಪ್ಲ್ಯಾನ್ ಮಾಡಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಬೆಳಗ್ಗೆ 9 ಗಂಟೆಗೆ ಬೆಂಗಳೂರಿಗೆ ಆಗಮಿಸಿ ಐದು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರಿ ಕಾರ್ಯಕ್ರಮಗಳಲ್ಲೇ ಭಾಗವಹಿಸಿದರೂ ಚುನಾವಣಾ ದೃಷ್ಟಿಯಿಂದ ಪ್ರಬಲ ಸಮುದಾಯಗಳನ್ನ ಸೆಳೆಯುವ ತಂತ್ರಗಾರಿಕೆಯನ್ನು ಬಿಜೆಪಿ ರೂಪಿಸಿದೆ.
ಮೊದಲು ಕೆಂಪೇಗೌಡ ಪ್ರತಿಮೆ ಅನಾವರಣ ಮಾತ್ರ ಫಿಕ್ಸ್ ಆಗಿತ್ತು. ಇದು ಒಕ್ಕಲಿಗ ಮತಗಳ ಬೇಟೆಯ ಒಂದು ಭಾಗ ಎಂದು ಹೇಳಿದರೂ ಬೃಹತ್ ಪ್ರತಿಮೆಯ ಪ್ಲ್ಯಾನ್ ಮೊದಲೇ ನಿರ್ಧಾರವಾಗಿತ್ತು. ಆದರೆ, ಈಗ ಅದರ ಜತೆಗೆ ಹೊಸದಾಗಿ ಎರಡು ಸಮುದಾಯ ಸೆಳೆಯುವ ಪ್ಲ್ಯಾನ್ ಮಾಡಲಾಗಿದೆ.
ಮೋದಿ ಅವರು ಆಗಮಿಸುವ ಶುಕ್ರವಾರ (ನವೆಂಬರ್ ೧೧) ಕನಕದಾಸರ ಜಯಂತಿ ಸಹ ಇರೋದರಿಂದ ಕುರುಬ ಸಮುದಾಯವನ್ನ ಖುಷಿ ಪಡಿಸಲು ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿಸಲು ನಿರ್ಧಾರ ಮಾಡಲಾಯಿತು. ಕನಕದಾಸರ ಪ್ರತಿಮೆ ಎದುರು ವಾಲ್ಮೀಕಿ ಪ್ರತಿಮೆಯೂ ಇರುವುದರಿಂದ ಆ ಪ್ರತಿಮೆಗೂ ಸಹ ಮಲಾರ್ಪಣೆ ಮಾಡಲು ಬಳಿಕ ನಿರ್ಧಾರ ಮಾಡಲಾಯಿತು. ಹೀಗಾಗಿ ಒಂದು ಕಾರ್ಯಕ್ರಮದಲ್ಲಿ ಮೂರು ಪ್ರಬಲ ಸಮುದಾಯಗಳನ್ನು ಸೆಳೆಯುವ ಪ್ಲ್ಯಾನ್ ಮಾಡಲಾಗಿದೆ.
ಬೆಳಿಗ್ಗೆ ಒಂಬತ್ತು ಗಂಟೆಗೆ ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು 9:45ಕ್ಕೆ ಶಾಸಕರ ಭವನದಲ್ಲಿ ಇರುವ ವಾಲ್ಮೀಕಿ ಮತ್ತು ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.
ಅಲ್ಲಿಂದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣಕ್ಕೆ ಆಗಮಿಸಿ ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದಾರೆ. ಬಳಿಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2 ಉದ್ಘಾಟನೆ, ಕೇಂಪೇಗೌಡರ ಪ್ರತಿಮೆ ಅನಾವರಣ ಮಾಡಲಿದ್ದಾರೆ. ಬಳಿಕ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳ ಬಗ್ಗೆ ಭಾಷಣ ಮಾಡಲಿದ್ದಾರೆ. ಮೋದಿ ಕಾರ್ಯಕ್ರಮಕ್ಕೆ ಪೊಲೀಸ್ ಬೀಗಿ ಬಂದೋಬಸ್ತ್ ಮಾಡಲು ಸಜ್ಜಾಗಿದೆ.
ಇದನ್ನೂ ಓದಿ | Modi In Bengaluru | ಬೆಂಗಳೂರಿನಲ್ಲಿ ಮೋದಿ ಕಾರ್ಯಕ್ರಮಗಳ ಸಂಪೂರ್ಣ ವಿವರ ಇಲ್ಲಿದೆ