ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ (ನವೆಂಬರ್ ೧೧) ಬೆಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಸ್ತೆ ಸಂಚಾರ ಮಾತ್ರವಲ್ಲ, ರೈಲು ಸಂಚಾರದಲ್ಲೂ ವ್ಯತ್ಯಯ ಉಂಟಾಗಲಿದೆ.
ಮೋದಿ ಅವರು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಮೈಸೂರು-ಚೆನ್ನೈ ನಡುವೆ ಸಂಚಾರ ಆರಂಭಿಸಲಿರುವ ವಂದೇ ಭಾರತ್ ರೈಲು ಸಂಚಾರಕ್ಕೆ ಚಾಲನೆ ನೀಡಲಿದ್ದಾರೆ. ಹೀಗಾಗಿ ಮೋದಿ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ನಿಲ್ದಾಣಕ್ಕೆ ಬರುವ ಹೋಗುವ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ. ಮೋದಿ ಕಾರ್ಯಕ್ರಮಕ್ಕೆ ಮುನ್ನ ಮತ್ತು ನಂತರ ಬಿಗಿ ಭದ್ರತಾ ವ್ಯವಸ್ಥೆ ಮಾಡಬೇಕಾಗಿರುವುದರಿಂದ ಪ್ರಯಾಣಿಕರ ಪ್ರವೇಶಕ್ಕೆ ಅವಕಾಶ ಇರುವುದಿಲ್ಲ. ಹೀಗಾಗಿ ರೈಲುಗಳ ಸಂಚಾರದ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ.
ಪೊಲೀಸರು ಹಾಗೂ ರೈಲ್ವೆ ಇಲಾಖೆಯಿಂದ ನಿಲ್ದಾಣದಲ್ಲಿ ಬಿಗಿ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿದೆ. ರೈಲ್ವೇ ಸ್ಟೇಷನ್ ಸುತ್ತಮುತ್ತ 1200ಕ್ಕೂ ಹೆಚ್ಚು ಸಿಆರ್‌ಪಿಎಫ್ ಹಾಗೂ ಪೊಲೀಸರನ್ನು ನೇಮಕ ಮಾಡಲಾಗಿದೆ.
ಜತೆಗೆ ರೈಲುಗಳ ಓಡಾಟದ ಸಮಯದಲ್ಲೂ ವ್ಯತ್ಯಾಸ ಉಂಟಾಗಲಿದೆ. ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹೊರಡಬೇಕಾದ ಕೆಲವು ರೈಲುಗಳನ್ನು ಯಶವಂತಪುರ ಹಾಗೂ ಬೈಯಪ್ಪನಹಳ್ಳಿಗೆ ಡೈವರ್ಟ್ ಮಾಡಲಾಗಿದೆ.
ಬೆಳಗ್ಗೆ ೮ರಿಂದಲೇ ಪ್ರವೇಶವಿಲ್ಲ
ಪ್ರಧಾನಿ ಮೋದಿ ಅವರು ಬೆಳಗ್ಗೆ ೧೦ ಗಂಟೆಯ ಹೊತ್ತಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ ಆಗಮಿಸಲಿದ್ದು, ಫ್ಲಾಟ್ ಫಾರಂ 7 ಹಾಗೂ 8ರಲ್ಲಿ ಕಾರ್ಯಕ್ರಮ ನಡೆಯಲಿದೆ. ಇಲ್ಲಿ ಮೋದಿ ಅವರು ಮೈಸೂರು-ಚೆನ್ನೈ ನಡುವೆ ಸಂಚರಿಸುವ ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಕಾರ್ಯಕ್ರಮದ ಕಾರಣದಿಂದಾಗಿ ಬೆಳಗ್ಗೆ 8 ಗಂಟೆಯಿಂದ ಯಾವುದೇ ರೈಲುಗಳು KSR ಫ್ಲಾಟ್ ಫಾರಂಗೆ ಆಗಮಿಸುವಂತಿಲ್ಲ. ಜತೆಗೆ ಬೆಳಗ್ಗೆ 8 ರಿಂದ 11 ಗಂಟೆಗೆ ಬೆಂಗಳೂರಿನಿಂದ ಹೊರಡಬೇಕಿದ್ದ ರೈಲುಗಳನ್ನು ಮಧ್ಯಾಹ್ನ 12 ನಂತರಕ್ಕೆ ಶೆಡ್ಯೂಲ್ ಮಾಡಲಾಗಿದೆ. ಬೆಳಗ್ಗೆ ೮ರಿಂದ ೧೧ರವರೆಗೆ ಬೆಂಗಳೂರು ಪ್ರವೇಶಿಸಬೇಕಾಗಿರುವ ಎಲ್ಲ ರೈಲುಗಳನ್ನು ಯಶವಂತಪುರ ಮತ್ತು ಬೈಯಪ್ಪನ ಹಳ್ಳಿಗೆ ಡೈವರ್ಟ್ ಮಾಡಲಾಗಿದೆ.
ಮೋದಿ ಪ್ರಯಾಣ ಹೇಗೆ?
ಪ್ರಧಾನಿ ಮೋದಿ ಅವರು ಒಂಬತ್ತು ಗಂಟೆಗೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮುಖಾಂತರ ಮೇಖ್ರಿ ಸರ್ಕಲ್ ಬಳಿ ಇರುವ ಏರ್‌ಪೋಸ್ಟ್‌ಗೆ ಆಗಮಿಸುವ ಸಾಧ್ಯತೆಗಳಿವೆ. ಬಳಿಕ ಕಾರಿನಲ್ಲಿ ನೇರವಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್‌ಗೆ ತೆರಳಲಿದ್ದಾರೆ.
೬೫೦೦ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಮೋದಿ ಆಗಮನ ಹಿನ್ನೆಲೆಯಲ್ಲಿ ಸುಮಾರು 6500ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಕೇಂದ್ರ ವಲಯದಿಂದ ದೇವನಹಳ್ಳಿ ಕೆಂಪೇಗೌಡ ಇಂಟರ್ ನ್ಯಾಶನಲ್ ಏರ್ ಪೋರ್ಟ್ ವರೆಗೆ ಬಿಗಿಭದ್ರತೆ ಇರಲಿದೆ. ರೈಲ್ವೆ ನಿಲ್ದಾಣದಿಂದ ಏರ್ ಪೋರ್ಟ್‌ಗೆ ಮೋದಿ ಕಾರು ಅಥವಾ ಹೆಲಿಕಾಪ್ಟರ್ ಮುಖಾಂತರ ಹೋಗುವ ಸಾಧ್ಯತೆ ಇದೆ.