ದಾವಣಗೆರೆ: ದಾವಣಗೆರೆಯಲ್ಲಿ ಮಾರ್ಚ್ 25ರಂದು ನಡೆಯುವ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಆಗಮಿಸಲಿದ್ದು (Modi in Karnataka) ಒಟ್ಟು 10 ಲಕ್ಷ ಭಾಗವಹಿಸಲಿದ್ದಾರೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಅವರು ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆಯು ಈಗಾಗಲೇ ಕೇಸರಿಮಯವಾಗಿದೆ. ಜಿಎಂಐಟಿ ಕಾಲೇಜಿನ ಪಕ್ಕದಲ್ಲಿ 400 ಎಕರೆ ಜಾಗದಲ್ಲಿ ಪೆಂಡಾಲ್ ಹಾಕಲಾಗಿದೆ. ಪೆಂಡಾಲ್‍ನಲ್ಲಿ ಜನರ ಮಧ್ಯೆ ಹೋಗಬೇಕೆಂದು ಮೋದಿಜಿ ಅವರು ಅಪೇಕ್ಷಿಸಿದ್ದು, ಅದಕ್ಕೆ ತಕ್ಕಂತೆ ರಸ್ತೆ ಏರ್ಪಡಿಸಲಾಗಿದೆ ಎಂದರು. ಅಂದರೆ ಶಾಮಿಯಾನ ಒಳಗೇ ವಾಹನದಲ್ಲಿ ಮೋದಿ ಅವರ ರೋಡ್ ಶೋ ನಡೆಯಲಿದೆ. ಮೋದಿ ಅವರು ವಾಹನದಲ್ಲೇ ಕುಳಿತು ಕಾರ್ಯಕರ್ತರ ಜತೆ ಮಾತನಾಡುತ್ತಾ ಹೋಗುತ್ತಾರೆ ಎಂದರು. ಕೇವಲ ದಾವಣಗೆರೆ ಜಿಲ್ಲೆಯಿಂದ 3 ಲಕ್ಷ ಜನರು ಪಾಲ್ಗೊಳ್ಳುತ್ತಾರೆ ಎಂದು ಸಂಸದರು ತಿಳಿಸಿದರು.
ಪಕ್ಷದ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ- ರಾಜ್ಯದ ಸಚಿವರು, ಇತರ ಪ್ರಮುಖರು ಭಾಗವಹಿಸುತ್ತಾರೆ. ವೇದಿಕೆಯಲ್ಲಿ ನೂರು ಮಂದಿ ನಾಯಕರು ಇರುತ್ತಾರೆ. ಕರ್ನಾಟಕದಲ್ಲಿ ನ ಭೂತೋ ನ ಭವಿಷ್ಯತಿ ಎಂಬಂತೆ ಈ ಸಭೆ ನಡೆಯಲಿದೆ. ಬಿಜೆಪಿಯ 150ಕ್ಕೂ ಹೆಚ್ಚು ಶಾಸಕರನ್ನು ಗೆಲ್ಲಿಸುವ ಕಾರ್ಯಕ್ರಮ ಇದಾಗಲಿದೆ ಎಂದು ನುಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಅವರು ಮಾತನಾಡಿ, 4 ವಿಜಯ ಸಂಕಲ್ಪ ಯಾತ್ರೆಗಳು ಯಶಸ್ವಿಯಾಗಿವೆ. 5,600 ಕಿಮೀಗಳನ್ನು ಒಟ್ಟು ಯಾತ್ರೆ ಮೂಲಕ ಕ್ರಮಿಸಲಾಗಿದೆ. ಲಕ್ಷಾಂತರ ಜನರು ಸೇರಿದ್ದರು. 224 ಕ್ಷೇತ್ರಗಳನ್ನೂ ತಲುಪಿದ್ದೇವೆ. ಬಿಜೆಪಿ ಪರ ಅಲೆ ಸೃಷ್ಟಿಯಾಗಿದೆ ಎಂದು ವಿವರಿಸಿದರು.
25ರಂದು ಮಧ್ಯಾಹ್ನ 1 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರದಿಂದ ಕಾರ್ಯಕರ್ತರು ಮತ್ತು ಬೆಂಬಲಿಗರು ಪಾಲ್ಗೊಳ್ಳುತ್ತಾರೆ ಎಂದರು.
ಉಪಾಹಾರಕ್ಕೇನು? ಊಟಕ್ಕೇನು?
ದೊಡ್ಡ ಪ್ರಮಾಣದಲ್ಲಿ ಊಟೋಪಚಾರ ವ್ಯವಸ್ಥೆ ಮಾಡಿದ್ದು, 400 ಕೌಂಟರ್‌ಗಳನ್ನು ತೆರೆಯಲಾಗುತ್ತದೆ. ಸಾವಿರ ಜನ ಅಡುಗೆ ಮಾಡುವವರನ್ನು ನಿಯೋಜಿಸಲಾಗಿದೆ ಎಂದು ತಿಳಿಸಿದರು. ಬೆಳಗ್ಗೆ ಉಪಹಾರಕ್ಕೆ ಉಪ್ಪಿಟ್ಟು, ಕೇಸರಿ ಬಾತ್, ಮಧ್ಯಾಹ್ನ ಊಟಕ್ಕೆ ಗೋಧಿ ಪಾಯಸ, ಮೊಸರನ್ನ, ಪಲಾವ್ ಇರಲಿದೆ.
ಪಾರ್ಕಿಂಗ್‍ಗೆ 44 ಜಾಗಗಳನ್ನು ಗುರುತಿಸಿದ್ದೇವೆ. ಕಾರ್ಯಾಲಯ, ಸ್ವಚ್ಛತೆ ಸೇರಿ ಹಲವು 45 ತಂಡಗಳನ್ನು ನಿಯೋಜಿಸಿದ್ದೇವೆ. 5 ಸಾವಿರ ಪ್ರಬಂಧಕರು ಇರಲಿದ್ದಾರೆ ಎಂದು ವಿವರ ನೀಡಿದರು.
ಇದನ್ನೂ ಓದಿ : Vijay Sankalpa Yatre: ಮಾ.25ರಂದು ದಾವಣಗೆರೆಯಲ್ಲಿ ಮೋದಿ ಹವಾ; 10 ಲಕ್ಷ ಜನರ ನಿರೀಕ್ಷೆ
ಮೋದಿ ಆಗಮನದ ಹಿನ್ನೆಲೆಯಲ್ಲಿ ಜಿಎಂಐಟಿ ಕಾಲೇಜು ಹೆಲಿಪ್ಯಾಡ್ ನಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಯಿತು.