ಬೆಳಗಾವಿ: ಎರಡು ದಿನಗಳ ಚುನಾವಣೆ ಪ್ರಚಾರಕ್ಕಾಗಿ ರಾಜ್ಯಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ (Modi in Karnataka) ಅವರು ಬೆಳಗಾವಿಯ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ರಾತ್ರಿ ವಾಸ್ತವ್ಯ ಹೂಡಿದ್ದಾರೆ. ಅವರಿಗಾಗಿ 36 ವಿಧದ ಭಕ್ಷ್ಯ ಭೋಜನಗಳನ್ನು ಸಿದ್ಧಪಡಿಸಲಾಗಿತ್ತು. ಆದರೆ, ಮೋದಿ ಅವರು ಎಳನೀರು ಮಾತ್ರ ಸೇವಿಸಿ ನಿದ್ರೆಗೆ ಜಾರಿದ್ದಾರೆ.
ಬೆಳಗಾವಿಯ ಕಾಕತಿ ಬಳಿಯ ಐಟಿಸಿ ವೆಲ್‌ಕಮ್ ಹೋಟೆಲ್‌ನಲ್ಲಿ ಪ್ರಧಾನಿ ಮೋದಿ ಅವರು ವಾಸ್ತವ್ಯವಿದ್ದು, ಅವರಿಗಾಗಿ ಜೋಳದ ರೊಟ್ಟಿ, ರಾಗಿ ಮುದ್ದೆ, ಟೊಮ್ಯಾಟೊ ಸಾರು ಸೇರಿ 36 ಖಾದ್ಯಗಳನ್ನು ಹೋಟೆಲ್ ಸಿಬ್ಬಂದಿ ತಯಾರಿಸಿದ್ದರು. ಆದರೆ ರಾತ್ರಿ ಭೋಜನ ತಿರಸ್ಕರಿಸಿರುವ ಪ್ರಧಾನಿ ಅವರು ಎಳನೀರು ಮಾತ್ರ ಸೇವಿಸಿ ನಿದ್ರೆಗೆ ಜಾರಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | Lok Sabha Election : ಎನ್ಡಿಎಗೆ ಶುಭ ಶಕುನ : 2ನೇ ಹಂತದ ಮತದಾನದ ಬಳಿಕ ಪ್ರಧಾನಿ ಮೋದಿ ಪ್ರತಿಕ್ರಿಯೆ ಹೀಗಿತ್ತು
ಇನ್ನು ಪ್ರಧಾನಿ ಮೋದಿ ಅವರು ಐಟಿಸಿ ವೆಲ್‌ಕಮ್ ಹೋಟೆಲ್‌ಗೆ ಆಗಮಿಸುವ ವೇಳೆ ರಸ್ತೆ ಇಕ್ಕೆಲಗಳಲ್ಲಿ ನೂರಾರು ಅಭಿಮಾನಿಗಳು ಜಮಾಯಿಸಿ ಮೋದಿ ಪರ ಜೈಕಾರಗಳನ್ನು ಕೂಗಿದರು. ಈ ವೇಳೆ ಮೋದಿ ಅವರು ಮುಗುಳ್ನಗುತ್ತಾ ಜನರತ್ತ ಕೈಬೀಸಿ ಹೋಟೆಲ್‌ನೊಳಗೆ ಹೋದರು.
ಪ್ರಧಾನಿಗೆ ಕಾರ್ಯಕರ್ತರು ಸೇರಿ ಗಣ್ಯರ ಸ್ವಾಗತ
ಲೋಕಸಭಾ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೋದಿ ಅವರಿಗೆ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್, ಸಂಸದ ಅಣ್ಣಾಸಾಬ್ ಜೊಲ್ಲೆ, ಶಾಸಕಿ ಶಶಿಕಲಾ ಜೊಲ್ಲೆ ಸೇರಿ ಗಣ್ಯರು ಸ್ವಾಗತ ಕೋರಿದರು.
ಮೋದಿ ಅವರನ್ನು ಸ್ವಾಗತಿಸಲು ಬಿಜೆಪಿ ನಾಯಕರ ಜತೆಗೆ ಲೋಕಸಭೆ ಕ್ಷೇತ್ರದ ವ್ಯಾಪ್ತಿಯ 15 ಕಾರ್ಯಕರ್ತರಿಗೆ ಅವಕಾಶ ನೀಡಲಾಗಿತ್ತು. ಬಾಳೇಶ್ ಚವ್ವನ್ನವರ್, ರಾಜೇಶ್ವರಿ ಒಡೆಯರ್, ಸುಭಾಷ್ ಸಣ್ಣ ವೀರಪ್ಪನವರ್ ಸೇರಿ ಬೆಳಗಾವಿಯ 15 ಹಲವು ಸಮುದಾಯಗಳ ಮುಖಂಡರು ಮೋದಿ ಅವರನ್ನು ಸ್ವಾಗತಿಸಿದರು.
ಬೆಳಗಾವಿ, ಶಿರಸಿ, ಬಳ್ಳಾರಿಯಲ್ಲಿ ಭಾನುವಾರ ಪ್ರಚಾರ
ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ (Lok Sabha Election 2024) ಮೊದಲ ಹಂತದ ಮತದಾನ ಮುಕ್ತಾಯವಾಗಿದೆ. ಎರಡನೇ ಹಂತದ ಮತದಾನವು ಮೇ 7ರಂದು ನಡೆಯಲಿದ್ದು, ಬಿಜೆಪಿ, ಕಾಂಗ್ರೆಸ್ ಸೇರಿ ಎಲ್ಲ ಪಕ್ಷಗಳು ಉತ್ತರ ಕರ್ನಾಟಕ ಭಾಗದ ಕಡೆ ಹೆಚ್ಚು ಒತ್ತು ಕೊಡುತ್ತಿವೆ. ಪಕ್ಷಗಳ ಬಹುತೇಕ ನಾಯಕರು ಉತ್ತರ ಕರ್ನಾಟಕದಲ್ಲಿಯೇ ಬೀಡುಬಿಟ್ಟಿದ್ದಾರೆ. ಎರಡನೇ ಹಂತದ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ರಣತಂತ್ರ ರೂಪಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ಭಾನುವಾರ (ಏಪ್ರಿಲ್ 28) ಹಾಗೂ ಸೋಮವಾರ (ಏಪ್ರಿಲ್ 29) ರಾಜ್ಯದಲ್ಲಿ ನರೇಂದ್ರ ಮೋದಿ (Narendra Modi) ಅವರು ಅಬ್ಬರದ ಪ್ರಚಾರ ಕೈಗೊಳ್ಳಲಿದ್ದಾರೆ.
ಏಪ್ರಿಲ್ 28ರಂದು ಎಲ್ಲೆಲ್ಲಿ ರ‍್ಯಾಲಿ?
ಏಪ್ರಿಲ್ 28ರಂದು ಬೆಳಗಾವಿಯಲ್ಲಿ ಬೆಳಗ್ಗೆ 10 ಗಂಟೆಗೆ ನಡೆಯುವ ಸಮಾವೇಶದಲ್ಲಿ ನರೇಂದ್ರ ಮೋದಿ ಪಾಲ್ಗೊಳ್ಳಲಿದ್ದಾರೆ. ಇಲ್ಲಿ ಜಗದೀಶ್ ಶೆಟ್ಟರ್ ಪರ ಮತಯಾಚಿಸಲಿರುವ ಅವರು ಬಳಿಕ 12 ಗಂಟೆಗೆ ಉತ್ತರ ಕನ್ನಡದ ಶಿರಸಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರ ಮತಯಾಚನೆ ಮಾಡಲಿದ್ದಾರೆ. ಇನ್ನು ಮಧ್ಯಾಹ್ನ 2 ಗಂಟೆಗೆ ದಾವಣಗೆರೆಯ ಹೈಸ್ಕೂಲ್ ಗ್ರೌಂಡ್‌ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇನ್ನು ಸಂಜೆ 4 ಗಂಟೆಗೆ ಬಳ್ಳಾರಿಯ ಸಮಾವೇಶದ ಮೂಲಕ ಇಡೀ ದಿನದ ಪ್ರಚಾರಕ್ಕೆ ತೆರೆ ಎಳೆಯಲಿದ್ದಾರೆ.
ಇದನ್ನೂ ಓದಿ: Zameer Ahmed Khan: ಸಚಿವ ಜಮೀರ್ ಅಹ್ಮದ್ ರೋಷಾವೇಶದ ಭಾಷಣಕ್ಕೆ ಗಾಜು ಪೀಸ್ ಪೀಸ್; ಇಲ್ಲಿದೆ ವಿಡಿಯೊ
ಏಪ್ರಿಲ್ 29ರಂದು ಒಂದೇ ಸಮಾವೇಶ
ಬಳ್ಳಾರಿಯಲ್ಲಿ ಪ್ರಚಾರ ಮುಗಿಸುವ ನರೇಂದ್ರ ಮೋದಿ ಅವರು ಏಪ್ರಿಲ್ 29ರಂದು ಬಾಗಲಕೋಟೆಯಲ್ಲಿ ನಡೆಯುವ ಒಂದೇ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಂದ ಅವರು ಮಹಾರಾಷ್ಟ್ರಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ. ಕರ್ನಾಟಕದಲ್ಲಿ 2ನೇ ಹಂತದ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕರೆಸುವ ಮೂಲಕ ಕಾಂಗ್ರೆಸ್‌ಗೆ ಸೆಡ್ಡು ಹೊಡೆಯಲು ಬಿಜೆಪಿ ಇಷ್ಟೆಲ್ಲ ಪ್ಲಾನ್ ಮಾಡಿದೆ. ಉತ್ತರ ಕರ್ನಾಟಕ ಸೇರಿದಂತೆ ಹಲವು ಕಡೆ ಮೋದಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅಲ್ಲದೆ, ಯುವ ಸಮುದಾಯಕ್ಕೆ ಮೋದಿ ಅಚ್ಚುಮೆಚ್ಚು. ಇಂತಹ ಯುವ ವರ್ಗದ ಮತಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಸೆಳೆಯಲು ಪ್ಲ್ಯಾನ್ ಮಾಡಿಕೊಳ್ಳಲಾಗಿದೆ.