Site icon Vistara News

ಚಾಮರಾಜಪೇಟೆ ಮೈದಾನದಲ್ಲಿ ಯೋಗಕ್ಕೆ ಬ್ರೇಕ್‌: ಸಂಘಟನೆಗಳಿಗೆ ನಿರಾಸೆ

Modi In Karnataka

ಬೆಂಗಳೂರು : ಚಾಮರಾಜಪೇಟೆ ಮೈದಾನದಲ್ಲಿ ಯೋಗ ದಿನಾಚರಣೆ ವಿವಾದಕ್ಕೆ ಸಂಬಂಧಪಟ್ಟಂತೆ ಸದ್ಯದ ಪರಿಸ್ಥಿತಿಯಲ್ಲಿ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಬಿಬಿಎಂಪಿ ತಿಳಿಸಿದೆ. ಮಂಗಳವಾರ (ಜೂನ್‌ 21) ದೇಶಾದ್ಯಂತ ಯೋಗ ದಿನಾಚರಣೆ ಅಂಗವಾಗಿ ಹಲವು ಸಂಘಟನೆಗಳು ಯೋಗ ದಿನಾಚರಣೆಗೆ ಅನುಮತಿ ಕೋರಿದ್ದವು. ಆದರೆ ಇದೀಗ ಬಿಬಿಎಂಪಿ ಅನುಮತಿ ನಿರಾಕರಿಸಿರುವುದು ಸಂಘಟನೆಗಳಿಗೆ ಬೇಸರ ಮೂಡಿಸಿದೆ.

ಬಿಬಿಎಂಪಿಯಿಂದ ವಕ್ಫ್ ಬೋರ್ಡ್‌ಗೆ ಮೈದಾನದ ದಾಖಲೆಯನ್ನು ಸಲ್ಲಿಸುವಂತೆ ನೋಟೀಸ್ ನೀಡಿತ್ತು. ನೋಟೀಸ್ ನೀಡಿದ ಪಾಲಿಕೆಗೆ ವಕ್ಫ್ ಬೋರ್ಡ್‌ ಬಳಿ ಇದ್ದ ದಾಖಲೆ ಸಲ್ಲಿಕೆ ಮಾಡಿತ್ತು. ಸಲ್ಲಿಕೆಯಾದ ದಾಖಲೆಯನ್ನು ಬಿಬಿಎಂಪಿಯ ಕಾನೂನು ವಿಭಾಗಕ್ಕೆ ರವಾನೆ ಮಾಡಲಾಗಿತ್ತು.

ಇದನ್ನೂ ಓದಿ | Modi in Karnataka | ʼಬೇಸ್‌ʼ ರೆಡಿ ಮಾಡಿದ್ದು ನಾನೇ ಎಂದು ಬೀಗುತ್ತಿದ್ದಾರೆ ಸಿದ್ದರಾಮಯ್ಯ

ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕಾನೂನು ಇಲಾಖೆಯಿಂದ ವರದಿ ಬರಲು ಇನ್ನೂ ಒಂದು ವಾರ ಸಮಯ ತೆಗೆದುಕೊಳ್ಳುವ ಕಾರಣ ಸದ್ಯದ ಪರಿಸ್ಥಿತಿಯಲ್ಲಿ ಅನುಮತಿ ನೀಡುವುದಕ್ಕೆ ಆಗುವುದಿಲ್ಲ. ಹಾಗೂ ಕಾನೂನು ಇಲಾಖೆ ಮತ್ತು ಪೊಲೀಸ್ ಇಲಾಖೆ ವರದಿ ಬರುವವರೆಗೂ ಮೈದಾನದಲ್ಲಿ ಯಾವುದೇ ಕಾರ್ಯಕ್ರಮಕ್ಕೆ ಅವಕಾಶ ಇಲ್ಲ ಎಂದು ಬಿಬಿಎಂಪಿ ಪಶ್ಚಿಮ ವಲಯ ಜಂಟಿ ಆಯುಕ್ತ ಶ್ರೀನಿವಾಸ್‌ ಹೇಳಿಕೆ ನೀಡಿದ್ದಾರೆ.

ಸದ್ಯ ಯೋಗ ದಿನಾಚರಣೆಗೆ ಅನುಮತಿ ನೀಡದ ಕಾರಣ ಸಂಘಟನೆಗಳು ಕೋರ್ಟ್‌ಗೆ ಅರ್ಜಿ ಸಲ್ಲಿಸಲು ನಿರ್ಧಾರ ಕೈಗೊಂಡಿದೆ. ಈ ಕುರಿತು ಮಾಥನಾಡಿರುವ ಹಿಂದು ಜನಜಾಗೃತಿ ಸಮಿತಿ ರಾಜ್ಯ ವಕ್ತಾರ ಮೋಹನ್‌ ಗೌಡ,
ಬಿಬಿಎಂಪಿ ಮುಖ್ಯ ಆಯುಕ್ತರಿಂದ ಅನುಮತಿ ನಿರಾಕರಣೆ ಮಾಡಲಾಗಿದೆ. ಇದು ಅತ್ಯಂತ ಖಂಡನೀಯ. ಸರ್ವ ಹಿಂದೂಗಳ ಹಕ್ಕುಗಳ ಮೇಲೆ ನಡೆಸಿರುವ ಅನ್ಯಾಯ ಇದು. 20 ಸಾವಿರ ಜನರು ಬಕ್ರೀದ್ ಹಬ್ಬದಾಚರಣೆ ಮಾಡಿದರೆ ಏನೂ ಆಗೋದಿಲ್ಲ, ಕಾನೂನು ಸುವ್ಯವಸ್ಥೆ ಹಾಳೋಗುವುದಿಲ್ಲ. ಆದರೆ ಆದರೆ 25 ಜನ ಸೇರಿ ಒಂದೆಡೆ ಯೋಗ ಮಾಡಿದರೆ ಕಾನೂನು ಸುವ್ಯವಸ್ಥೆ ನೆಪ ಹೇಳುತ್ತಾರೆ. ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಲಿದ್ದೇವೆ. ಸ್ವಾತಂತ್ರ ದಿನಾಚರಣೆ ಹಾಗು ಯೋಗ ದಿನಾಚಾರಣೆ ಆಚರಿಸಲು ನಿರಾಕರಿಸಿರುವ ಹಿನ್ನೆಲೆಯಲ್ಲಿ, ಬಿಬಿಎಂಪಿ ಮೈದಾನದಲ್ಲಿ ರಂಜಾನ್ ಆಚರಣೆಗೂ ಅವಕಾಶ ನೀಡಬಾರದು ಎಂದು ಮನವಿಯನ್ನೂ ಮಾಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ | Modi in Karnataka | ಮೋದಿಗೆ ಕೊಡುವ ಸ್ಮರಣಿಕೆ ಕನ್ನಡದಲ್ಲಿ ಏಕಿಲ್ಲ?

Exit mobile version