Site icon Vistara News

Malnutrition Crisis: ದೇಶದಲ್ಲಿ ಯಾಕೆ ಅಪೌಷ್ಟಿಕತೆ ಏರುತ್ತಿದೆ; ʼವಿಶ್ವಗುರುʼ ಉತ್ತರಿಸಲಿ ಎಂದ ಸಿಎಂ

Malnutrition Crisis

ಬೆಂಗಳೂರು: ಅಪೌಷ್ಟಿಕತೆ ಸೂಚ್ಯಂಕದಲ್ಲಿ (Malnutrition Crisis) ಹಾಗೂ ಭಾರತದ ಸೂಚ್ಯಂಕ ಏರುತ್ತಲೇ ಇದೆ ಯಾಕೆ ಹೀಗಾಯ್ತು ಎಂದು ವಿಶ್ವಗುರು ಎಂದು ಸುಮ್ ಸುಮ್ನೆ ಕರೆಸಿಕೊಳ್ಳುವ ಪ್ರಧಾನಮಂತ್ರಿ ಮೋದಿಯವರು ಉತ್ತರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಿದ್ದ ʼಅನಿಮಿಯಾ ಮುಕ್ತ ಪೌಷ್ಠಿಕ ಕರ್ನಾಟಕʼ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗುಜರಾತ್ ಮಾದರಿ, ಗುಜರಾತ್ ಮಾದರಿ ಎನ್ನುವವರು ಗುಜರಾತ್ ಅಪೌಷ್ಠಿಕತೆ ಸೂಚ್ಯಂಕದಲ್ಲಿ ಮೇಲಕ್ಕೆ ಏರುತ್ತಿರುವುದು ಏಕೆ ಎನ್ನುವುದಕ್ಕೆ ಉತ್ತರಿಸಬೇಕು. ಗುಜರಾತ್‌ನ ಈ ಸ್ಥಿತಿ ಮಾದರಿ ಆಗಲು ಸಾಧ್ಯವೇ ಎಂದು ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ 4 ಮತ್ತು 5 ರಲ್ಲಿ ಇರುವ ಅಂಕಿ ಅಂಶಗಳನ್ನು ತುಲನೆ ಮಾಡಿ ಲೇವಡಿ ಮಾಡಿದರು.

ಬಡತನ, ದಾರಿದ್ರ್ಯ ಅನಕ್ಷರತೆ ಹೋಗದೆ ಎಲ್ಲರಿಗೂ ಉತ್ತಮ ಆರೋಗ್ಯ ಸಿಗುವುದಿಲ್ಲ. ಆದ್ದರಿಂದ ಈ ಮೂರು ಪಿಡುಗುಗಳಿಗೆ ಚಿಕಿತ್ಸೆ ಕೊಡುವುದು ನಮ್ಮ ಸರ್ಕಾರದ ಪ್ರಥಮ ಆದ್ಯತೆಯಾಗಿದೆ. ಪ್ರತಿಯೊಬ್ಬರ ಮನೆ ಬಾಗಿಲಿಗೆ ಆರೋಗ್ಯದ ಸವಲತ್ತು ತಲುಪಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ. ಇದಕ್ಕಾಗಿ ಸರ್ಕಾರ ಅಗತ್ಯವಿದ್ದಷ್ಟು ಹಣ ನೀಡಲು ಸಿದ್ಧವಿದೆ ಎಂದರು.

ಮಹಿಳಾ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಬ್ಬರೂ ಸೇರಿ ನಮ್ಮ ರಾಜ್ಯದ ಮಕ್ಕಳು ಮತ್ತು ಪ್ರತಿಯೊಬ್ಬರೂ ಅತ್ಯಂತ ಆರೋಗ್ಯವಂತರಾಗುವಂತೆ ಇನ್ನಷ್ಟು ಹೆಚ್ಚೆಚ್ಚು ಶ್ರಮಿಸಿ ಸರ್ಕಾರದ ಗುರಿಯನ್ನು ಸಾಧಿಸಿ ತೋರಿಸಬೇಕು ಎಂದು ಕರೆ ನೀಡಿದರು.

ಇದನ್ನೂ ಓದಿ | Fish Delivery : ಬೆಂಗಳೂರಿನ ಮನೆ ಬಾಗಿಲಿಗೆ ಬರುತ್ತೆ ಮತ್ಸ್ಯ ವಾಹಿನಿ; ಸಿಗಲಿದೆ ತಾಜಾ ಮೀನು, ಖಾದ್ಯ!

ಬೃಹತ್ ಕಾರ್ಯಕ್ರಮದಲ್ಲಿ ಉದ್ಘಾಟಿಸಿದರು. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ನಗರಾಭಿವೃದ್ಧಿ ಸಚಿವರಾದ ಬೈರತಿ ಸುರೇಶ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಪೊನ್ನಣ್ಣ ಸೇರಿದಂತೆ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಪರಿವಾರ ಸಮುದಾಯದ ಗೊಂದಲ ನಿವಾರಣೆಗೆ ಸಿಎಂ ಸೂಚನೆ

ಬೆಂಗಳೂರು: ಹಳೆ ಮೈಸೂರು ಭಾಗದಲ್ಲಿ ಪರಿವಾರ ಪದವು ನಾಯಕ ಸಮುದಾಯಕ್ಕೆ ಪರ್ಯಾಯವಾಗಿದ್ದು, ಈ ಸಮುದಾಯವನ್ನು ಭಾರತ ಸರ್ಕಾರವು ಪರಿಶಿಷ್ಟ ಪಂಗಡದವರ ಪಟ್ಟಿಗೆ ಸೇರಿಸಿರುವುದರಿಂದ ಹಿಂದುಳಿದ ವರ್ಗಗಳ ಪಟ್ಟಿಯಿಂದ ಕೈಬಿಟ್ಟು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸಿರುವ ಕುರಿತು ಸ್ಪಷ್ಟ ಸುತ್ತೋಲೆ ಹೊರಡಿಸಿ ಗೊಂದಲ ನಿವಾರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು.

ಪರಿವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿರುವ ಕುರಿತು ಇರುವ ಗೊಂದಲ ನಿವಾರಣೆಗೆ ಸಂಬಂಧಿಸಿದಂತೆ ಶಾಸಕ ಅನಿಲ್ ಚಿಕ್ಕಮಾದು ನೇತೃತ್ವದ ಸಮುದಾಯದ ಮುಖಂಡರ ನಿಯೋಗ ಹಾಗೂ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚಿಸಿದರು.

ಸ್ಪಷ್ಟ ಸುತ್ತೋಲೆ ಹೊರಡಿಸಿ, ಜಾತಿ ಪ್ರಮಾಣ ಪತ್ರ ನೀಡುವ ಕುರಿತು ಗೊಂದಲ ನಿವಾರಿಸುವಂತೆ ಸಿಎಂ ಸೂಚಿಸಿದರು. ಈ ವೇಳೆ ಗೊಂದಲದ ಕಾರಣದಿಂದ ಸುಳ್ಳು ಜಾತಿ ಪ್ರಮಾಣ ಪತ್ರ ಕುರಿತಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದಲ್ಲಿ 58 ಪ್ರಕರಣಗಳು ದಾಖಲಾಗಿದ್ದು, ಅವುಗಳನ್ನು ಹಿಂಪಡೆಯುವಂತೆ ನಿಯೋಗದ ಮುಖಂಡರು ಮಾಡಿದರು. ಅದಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version