ಬೆಂಗಳೂರು: ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದ 50 ಲಕ್ಷಕ್ಕೂ ಅಧಿಕ ಕಾರ್ಯಕರ್ತರನ್ನು ಉದ್ದೇಶಿಸಿ ವರ್ಚುವಲ್ ವೇದಿಕೆಯ ಮೂಲಕ ಮಾತನಾಡಿದರು. ಈ ವೇಳೆ ಅವರು ಶಿವಮೊಗ್ಗ (ಶಿವಮೊಗ್ಗ ಗ್ರಾಮಾಂತರ), ಚಿತ್ರದುರ್ಗ (ಮೊಳಕಾಲ್ಮೂರು) ವಿಜಯನಗರ, ದಕ್ಷಿಣ ಕನ್ನಡ (ಮಂಗಳೂರು ದಕ್ಷಿಣ) ಮತ್ತು ಬೆಂಗಳೂರು(ಜಯನಗರ) ಕಾರ್ಯಕರ್ತರ ಪ್ರಶ್ನೆಗಳನ್ನು ಪೂರ್ವಭಾವಿಯಾಗ ಪಡೆದು ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಿದರು.
ಮುಂದಿನ ಹತ್ತು ದಿನಗಳಲ್ಲಿ ಏನು ಮಾಡಬಹುದು?
ಶಿವಮೊಗ್ಗ ವಿರೂಪಾಕ್ಷಪ್ಪ ಅವರು ಇನ್ನು ಚುನಾವಣೆಗೆ ಉಳಿದಿರುವ 10 ದಿನಗಳಲ್ಲಿ ಕಾರ್ಯಕರ್ತರು ಯಾವ ರೀತಿ ಪ್ರಚಾರ ಮಾಡಬಹುದು ಎಂದು ಕೇಳಿದ್ದಾರೆ. ಅದಕ್ಕೆ ಮೋದಿ ಅವರು ಉತ್ತರ ನೀಡಿದ್ದಾರೆ.
ನೀವು ಬಿಜೆಪಿ ರಾಜ್ಯ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸವನ್ನು ಹೊಂದಿದ್ದೀರಿ. ನಿಮ್ಮಂತೆಯೇ ವಿಶ್ವಾಸವನ್ನು ಹೊಂದಿರುವ ಸುಮಾರು 10 ಪುರುಷರು ಮತ್ತು 10 ಮಹಿಳೆಯರ ತಂಡವೊಂದನ್ನು ಕಟ್ಟಿಕೊಳ್ಳಿ. ನಿಮ್ಮ ಬಳಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳ ಸಮಗ್ರ ಮಾಹಿತಿ ಇರಲಿ. ಅದು ನಿಮ್ಮ ಮೊಬೈಲ್‌ನಲ್ಲಿರಲಿ, ಅದು ನಿಮ್ಮ ಡೈರಿಯಲ್ಲಿರಲಿ, ಅದಕ್ಕಿಂತಲೂ ಹೆಚ್ಚಾಗಿ ನಿಮ್ಮ ತಲೆಯಲ್ಲಿರಲಿ. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರು, ಯುವಕರು, ಹಿರಿಯರು, ಬೇರೆ ಬೇರೆ ಉದ್ಯೋಗಿಗಳು, ಬೇರೆ ಬೇರೆ ವೃತ್ತಿಪರರಿಗೆ ಏನೇನು ಸಹಾಯ ಮಾಡಿದೆ ಎನ್ನುವುದನ್ನು ಸ್ಪಷ್ಟವಾಗಿ ದಾಖಲಿಸಿಕೊಳ್ಳಿ.
ನೀವು ಒಬ್ಬ ಪುರುಷ ಮತ್ತು ಒಬ್ಬ ಮಹಿಳೆ ಜತೆಯಾಗಿ ಪ್ರತಿಯೊಂದು ಮನೆಗೂ ಹೋಗಿ. ಒಂದೊಂದು ಮನೆಯಲ್ಲಿ ಕನಿಷ್ಠ ಒಂದು ಗಂಟೆಯಾದರೂ ಕುಳಿತುಕೊಳ್ಳಿ. ಅವರ ಜತೆ ಅವರ ಕುಟುಂಬ, ಸಮಸ್ಯೆಗಳು, ಸಾಧನೆಗಳ ಬಗ್ಗೆ ಮಾತನಾಡಿ. ಅಲ್ಲಿನ ಮಕ್ಕಳನ್ನು ಪ್ರೀತಿಸಿ. ನೀವು ಅವರ ಕುಟುಂಬಕ್ಕೆ ಸರ್ಕಾರ ಏನು ಮಾಡಬಹುದು ಎನ್ನುವುದನ್ನು ತಿಳಿಸಿ ಹೇಳಿ. ನೀವು ಒಂದೊಂದು ಮನೆಯನ್ನು ಗೆಲ್ಲುವ ಮೂಲಕ ಬೂತ್‌ನ್ನು ಗೆಲ್ಲುವುದು ಕಷ್ಟವೇನಲ್ಲ- ಎಂದು ಮೋದಿ ವಿವರಿಸಿದರು.
ಡಬಲ್ ಎಂಜಿನ್ ಸರ್ಕಾರದಿಂದ ಏನೇನು ಉಪಯೋಗ?
ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರ, ಡಬಲ್ ಎಂಜಿನ್ ಸರ್ಕಾರದಿಂದ ಏನು ಉಪಯೋಗ ಎನ್ನುವುದು ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರಿನ ಫಕ್ಕೀರಪ್ಪ ಅವರ ಪ್ರಶ್ನೆಯಾಗಿತ್ತು.
ಇದಕ್ಕೆ ಉತ್ತರಿಸಿದ ನರೇಂದ್ರ ಮೋದಿ ಅವರು, ಡಬಲ್ ಎಂಜಿನ್ ಸರ್ಕಾರದಿಂದ ಏನಾಗುತ್ತದೆ ಎಂದರೆ ಡಬಲ್ ಎಂಜಿನ್ ಸರ್ಕಾರ ಎಂದರೆ ಡಬಲ್ ವೇಗ. ಬಡವರ ಕಲ್ಯಾಣಕ್ಕೆ ಡಬಲ್ ವೇಗ ಸಿಕ್ಕಿದೆ. ಯಾವ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇಲ್ಲವೋ ಅಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಸಫಲವಾಗುವುದಿಲ್ಲ. ಸಫಲವಾದರೆ ಮೋದಿಗೆ ಜೈಕಾರ ಬೀಳುತ್ತದೆ ಎನ್ನುವುದು ಅವರ ಭಯ. ಹಾಗಾಗಿ ಅವರೆಲ್ಲ ನಮ್ಮ ಯೋಜನೆಗಳನ್ನು ವಿಫಲಗೊಳಿಸಲು ಪ್ರಯತ್ನಿಸುತ್ತಾರೆ. ಅಥವಾ ನಮ್ಮ ಯೋಜನೆಗೆ ಅವರ ಲೇಬಲ್ ಹಾಕಿ ಪ್ರಚಾರ ಮಾಡುತ್ತಾರೆ.
ಎರಡೂ ಕಡೆ ಒಂದೇ ಪಕ್ಷದ ಡಬಲ್ ಎಂಜಿನ್ ಸರ್ಕಾರ ಇದ್ದರೆ ಏನು ಲಾಭ ಎನ್ನುವುದಕ್ಕೆ ರಾಜ್ಯದ್ದೇ ಒಂದು ಉದಾಹರಣೆ ತೆಗೆದುಕೊಳ್ಳಿ. ನಾವು ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿಯೊಬ್ಬರ ರೈತರಿಗೆ ವರ್ಷಕ್ಕೆ 6000 ರೂ. ನೀಡುತ್ತದೆ. ರಾಜ್ಯ ಸರ್ಕಾರ 4000 ರೂ. ಕೊಡುತ್ತದೆ. ಒಬ್ಬ ರೈತನಿಗೆ 10000 ರೂ. ಸಿಗುತ್ತದೆ ಅಲ್ಲವೇ ಎಂದು ಮೋದಿ ಪ್ರಶ್ನಿಸಿದರು.
ಇದನ್ನೂ ಓದಿ : Modi Virtual Samvada : ಅಖಾಡಕ್ಕಿಳಿದ ಮೋದಿ; 50 ಲಕ್ಷ ಬಿಜೆಪಿ ಕಾರ್ಯಕರ್ತರೊಂದಿಗೆ ಸಂವಾದ ಆರಂಭ