ಬೆಂಗಳೂರು: ಪದ್ಮಶ್ರೀ ಪುರಸ್ಕೃತ ಟೆಕ್ಕಿ, ಇನ್ಫೋಸಿಸ್‌ನ ಮಾಜಿ ನಿರ್ದೇಶಕ, ಮಣಿಪಾಲ್ ಗ್ಲೋಬಲ್ ಎಜುಕೇಶನ್‌ನ ಅಧ್ಯಕ್ಷರಾಗಿರುವ ಟಿ.ವಿ. ಮೋಹನ್‌ದಾಸ್ ಪೈ ಅವರು ಬೆಂಗಳೂರಿನ ಹದಗೆಟ್ಟ ರಸ್ತೆ, ಕೊಳಚೆ ತುಂಬಿದ ರಾಜಕಾಲುವೆಗಳು, ಮೂಲಭೂತ ಸೌಕರ್ಯ ಸಮಸ್ಯೆ ಬಗ್ಗೆ ಮತ್ತೊಮ್ಮೆ ಗರಂ ಆಗಿದ್ದಾರೆ. ಕಳೆದ ಏಪ್ರಿಲ್‌ನಲ್ಲೂ ಅವರು ಇಲ್ಲಿನ ಅವ್ಯವಸ್ಥೆ ಬಗ್ಗೆ ಸಿಟ್ಟಾಗಿ ಪ್ರತಿಕ್ರಿಯಿಸಿದ್ದರು.
ಈ ಬಾರಿ ರಾಜಧಾನಿಯ ಸಮಸ್ಯೆ ಬಗ್ಗೆ ಟ್ವೀಟ್ ಮಾಡಿದ್ದಲ್ಲದೆ, ನರೇಂದ್ರ ಮೋದಿಯವರೇ ನೀವಾದರೂ ಬೆಂಗಳೂರನ್ನು ಉಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಟ್ವೀಟ್‌ನಲ್ಲಿ ಏನಿದೆ?
@ನರೇಂದ್ರ ಮೋದಿ ಸರ್, ದಯವಿಟ್ಟು ಬೆಂಗಳೂರಿಗೆ ಸಹಾಯ ಮಾಡಿ. ನಮ್ಮ ರಸ್ತೆಗಳ ತುಂಬ ಕಸ, ಕೊಳಚೆಗಳು ತುಂಬಿಕೊಂಡಿವೆ. ನಮ್ಮ ಕಾಲುವೆಗಳೆಲ್ಲ ಕಟ್ಟಿಕೊಂಡಿವೆ, ನೀರು ಹರಿಯುತ್ತಿಲ್ಲ. ಇದಕ್ಕೆ ಹೆಚ್ಚು ಹಣ ಬೇಕೋ ಅಥವಾ ಒಳ್ಳೆಯ ಆಡಳಿತ ನಿರ್ವಹಣೆ ಬೇಕೋ? ನಮ್ಮ ಮೆಟ್ರೋ ಸಮಯಕ್ಕೆ ಸರಿಯಾಗಿ ಓಡುತ್ತಿಲ್ಲ. ಇಲ್ಲಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಒಟ್ಟು ನಿರ್ವಹಣೆಯೇ ಸರಿಯಿಲ್ಲ. ದಯವಿಟ್ಟು ನಮ್ಮ ಪ್ರಧಾನ ಯೋಜನೆಗಳ ಪರಿಶೀಲನೆ ಮಾಡಿ… ಎಂದು ಬರೆದು ಕೇಂದ್ರ ಸಚಿವರಾದ ಹರ್‌ದೀಪ್ ಪುರಿ, ನಿತಿನ್ ಗಡ್ಕರಿ ಮತ್ತು ಆರ್.ಕೆ. ಮಿಶ್ರಾ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಹಿಂದೆಯೂ ಆಕ್ರೋಶ ವ್ಯಕ್ತಪಡಿಸಿದ್ದರು
ಮೋಹನ್ ದಾಸ್ ಪೈ ಅವರು ಕಳೆದ ಏಪ್ರಿಲ್ ತಿಂಗಳಲ್ಲೂ ಬೆಂಗಳೂರಿನ ಮೂಲಭೂತ ಸಮಸ್ಯೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರ ಮಧ್ಯ ಪ್ರವೇಶವನ್ನು ಕೋರಿದ್ದರು. ಬೆಂಗಳೂರು ದೇಶದಲ್ಲೇ ಅತಿ ಹೆಚ್ಚು ಆದಾಯ ತೆರಿಗೆ ಪಾವತಿ ಮಾಡುತ್ತದೆ. ನಮ್ಮ ರಸ್ತೆಗಳು ಕೆಟ್ಟದಾಗಿವೆ, ಟ್ರಾಫಿಕ್ ಕಿತ್ತು ತಿನ್ನುತ್ತಿವೆ. ಜೀವನದ ಗುಣಮಟ್ಟ ಕುಸಿಯುತ್ತಿದೆ. ನಮ್ಮನ್ನು ದಿಲ್ಲಿ ನಿರ್ಲಕ್ಷಿಸುತ್ತಿದೆ ಎಂದು ಆಕ್ಷೇಪಿಸಿದ್ದರು. ಇದರಿಂದಾಗಿ ಉದ್ಯಮಿಗಳು ತೆಲಂಗಾಣ ಮತ್ತು ತಮಿಳುನಾಡು ಕಡೆಗೆ ಹೋಗುತ್ತಿದ್ದಾರೆ ಎಂದಿದ್ದರು. ಪ್ರಧಾನಿ ಮೋದಿ ಅವರಲ್ಲದೆ, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನೂ ಟ್ವೀಟ್‌ಗೆ ಟ್ಯಾಗ್ ಮಾಡಿದ್ದರು. ಆಗ ಪ್ರತಿಕ್ರಿಯೆ ನೀಡಿದ್ದ ಸಿಎಂ ಬೊಮ್ಮಾಯಿ ಅವರು, ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ರಸ್ತೆ ರಿಪೇರಿ ಕಾಮಗಾರಿಗಳು ನಡೆಯಲಿವೆ ಎಂದಿದ್ದರು.
ಈ ಬಾರಿ ಗಂಭೀರ ಆಪಾದನೆ
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಮೋಹನ್ ದಾಸ್ ಪೈ ಅವರ ಆಪಾದನೆಗಳು ಗಂಭೀರವಾಗಿವೆ. ಈ ಬಾರಿ ಇಲ್ಲಿನ ಆಡಳಿತ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದಾರೆ. ಸಮಸ್ಯೆಗಳನ್ನು ಉಲ್ಲೇಖಿಸಿದ್ದು ಮಾತ್ರವಲ್ಲದೆ, ಇದನ್ನು ಸರಿಪಡಿಸಲು ಬೇಕಿರುವುದು ಹಣವಾ ಅಥವಾ ಒಳ್ಳೆಯ ಆಡಳಿತವಾ ಎಂದು ಕೇಳಿದ್ದಾರೆ. ಇಲ್ಲಿನ ಮೆಟ್ರೋಗಳೂ ಸಮಯ ಪಾಲನೆ ಮಾಡುತ್ತಿಲ್ಲ ಎಂದಿರುವ ಅವರು ಒಟ್ಟಾರೆಯಾಗಿ ಆಡಳಿತವೇ ವಿಫಲವಾಗಿದೆ, ಹದ ತಪ್ಪಿದೆ ಎಂಬರ್ಥದ ಆರೋಪಗಳನ್ನು ಮಾಡಿರುವುದು ಕಂಡುಬಂದಿದೆ.
ಸಂಜೆಯೇ ಸಭೆ ಕರೆದ ಬೊಮ್ಮಾಯಿ
ಮೋಹನ್ ದಾಸ್ ಪೈ ಅವರು ಮಾಡಿರುವ ಟೀಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗಂಭೀರವಾರಿ ಸ್ವೀಕರಿಸಿದ್ದಾರೆ. ಬುಧವಾರ ಸಂಜೆಯೇ ಬಿಬಿಎಂಪಿ ವ್ಯಾಪ್ತಿಯ ಎಲ್ಲ ಅಧಿಕಾರಿಗಳ ಸಭೆಯನ್ನು ಕರೆದಿರುವ ಅವರು, ನಾಳೆ ಮಧ್ಯಾಹ್ನ ಹದಗೆಟ್ಟ ರಸ್ತೆಗಳ ವೀಕ್ಷಣೆಗಾಗಿ ಬೆಂಗಳೂರು ರೌಂಡ್ಸ್ ಹಾಕಲಿದ್ದಾರೆ.
ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಅವರು, ʻʻಮೋಹನ್ ದಾಸ್ ಪೈ ಅವರು ಕಳಕಳಿ ಇಟ್ಕೊಂಡೇ ಟ್ವೀಟ್ ಮಾಡ್ತಾರೆ. ಅವರ ಸಲಹೆಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿ ಕಾರ್ಯಾಚರಣೆ ಮಾಡುತ್ತೇವೆ. ಹಿಂದೆಂದೂ ಬರದ ಮಳೆ ಬಂದಿದೆ. ನಾಲ್ಕೈದು ತಿಂಗಳಿಂದ ನಿರಂತರ ಮಳೆ ಆಗುತ್ತಿದೆ. ಮಾರತ್ತಹಳ್ಳಿ ಸುತ್ತಮುತ್ತ ನಾಳೆ ಪರಿಶೀಲನೆ ಮಾಡುತ್ತೇನೆʼʼ ಎಂದರು.