Site icon Vistara News

Molasses Scam : ಕಾಕಂಬಿ ರಫ್ತು; ಬಿಜೆಪಿ ವಿರುದ್ಧ ಹಗರಣದ ಆರೋಪ ಮಾಡಿ ಈಗ ತಾನೇ ಕಳಂಕಕ್ಕೆ ಕೈ ಇಟ್ಟ ಕಾಂಗ್ರೆಸ್‌!

Molasses scam

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಭಾರಿ ಸದ್ದು ಮಾಡಿದ್ದ ಕಾಕಂಬಿ ಹಗರಣದ (Molasses Scam) ಕಳಂಕ ಇದೀಗ ಕಾಂಗ್ರೆಸ್‌ ಸರ್ಕಾರಕ್ಕೂ ತಟ್ಟಿದೆ. ಬಿಜೆಪಿ ಅವಧಿಯಲ್ಲಿ (BJP Government) ಕಾಕಂಬಿ ರಫ್ತು ಮಾಡಿದಾಗ ಇದೊಂದು ದೊಡ್ಡ ಹಗರಣ ಎಂದು ಕೂಗಾಡಿದ್ದ ಕಾಂಗ್ರೆಸ್‌ ಈಗ ಅಧಿಕಾರಕ್ಕೆ (Congress Government) ಬಂದು ನೂರೇ ದಿನದಲ್ಲಿ ತಾನೇ ಸ್ವತಃ ಪರವಾನಗಿಯನ್ನು ನೀಡಿದೆ. ಹಿಂದೆ ಭಾರಿ ವಿರೋಧ ಮಾಡಿದ್ದ ಕಾಂಗ್ರೆಸ್‌ ಕೇವಲ ನೂರೇ ದಿನದ ಅವಧಿಯಲ್ಲಿ ನಿಲುವು ಬದಲಿಸಿ ಹಳೆಯ ಪ್ರಕರಣದ ತನಿಖೆ ನಡೆಯುತ್ತಿರುವ ನಡುವೆಯೇ ಹೊಸದಾಗಿ ರಫ್ತಿಗೆ ಅನುಮತಿ ನೀಡಿರುವುದು ಹುಬ್ಬೇರಿಸಿದೆ. ಈಗ ಬಿಜೆಪಿ ನಾಯಕರು ಇದನ್ನು ಆಕ್ಷೇಪಿಸಿದ್ದಾರೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಂಬಯಿ ಮೂಲದ ಕೆ.ಎನ್‌. ರಿಸೋರ್ಸ್‌ ಪ್ರೈವೆಟ್‌ ಲಿಮಿಟೆಡ್‌ ಕಂಪನಿಗೆ 260 ಕೋಟಿ ಮೌಲ್ಯದ ಸುಮಾರು 2 ಲಕ್ಷ ಟನ್‌ ಕಾಕಂಬಿಯನ್ನು ರಫ್ತು ಮಾಡಲು ಪರವಾನಗಿ ನೀಡಲಾಗಿತ್ತು. ಇದನ್ನು ಅಂದು ಕಾಂಗ್ರೆಸ್‌ ತೀವ್ರವಾಗಿ ಆಕ್ಷೇಪಿಸಿ ಹಗರಣದ ಕೂಗೆಬ್ಬಿಸಿತ್ತು. ಈ ಪ್ರಕರಣದ ತನಿಖೆಯ ವಿಚಾರ ಇನ್ನೂ ನ್ಯಾಯಾಲಯದಲ್ಲಿರುವಂತೆಯೇ ಇದೀಗ ಕಾಂಗ್ರೆಸ್‌ ಸರ್ಕಾರ ಅದೇ ಕೆ.ಎನ. ರಿಸೋರ್ಸ್‌ ಕಂಪನಿಗೆ 11 ಕೋಟಿ ರೂ. ಮೌಲ್ಯದ ಕಾಕಂಬಿ ಎತ್ತುವಳಿ ಮತ್ತು ರಫ್ತಿಗೆ ಅನುಮತಿಯನ್ನು ನೀಡಿದೆ.

ನಿಜವೆಂದರೆ, ಕೆ.ಎನ್‌. ರಿಸೋರ್ಸ್‌ ಕಂಪನಿಗೆ ಪರವಾನಗಿ ನೀಡಿದ್ದರಲ್ಲಿ ಅಕ್ರಮ ನಡೆದಿದೆ ಕಾಂಗ್ರೆಸ್‌ ಆಕ್ಷೇಪಿಸಿತ್ತು. ಅಗತ್ಯವಿದ್ದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗ ಈ ಪರವಾನಗಿಯನ್ನು ರದ್ದು ಮಾಡಬೇಕಿತ್ತು. ಆದರೆ, ರದ್ದು ಮಾಡುವುದು ಬಿಡಿ ತಾನೇ ಹೊಸ ಆರ್ಡರ್‌ ನೀಡಿರುವುದು ಈಗ ವಿವಾದದ ಮೂಲ.

ಎಲ್ಲಿಂದ ಕಾಕಂಬಿ ಸಂಗ್ರಹಕ್ಕೆ ಅನುಮತಿ?

ಕೆಎನ್‌ ರಿಸೋರ್ಸ್‌ ಕಂಪನಿಗೆ ವಿಜಯಪುರದ ಬಸವೇಶ್ವರ ಶುಗರ್ಸ್‌ ಲಿಮಿಟೆಡ್‌ನಿಂದ 9500 ಮೆಟ್ರಿಕ್‌ ಟನ್‌ ನಷ್ಟು ಕಾಕಂಬಿಯನ್ನು ಎತ್ತುವಳಿ ಮಾಡಿ ರಫ್ತು ಮಾಡಲು 2023ರ ಆಗಸ್ಟ್‌ 23ರಂದು ಪರವಾನಗಿ ನೀಡಲಾಗಿದೆ. ಸ್ವತಃ ಅಬಕಾರಿ ಸಚಿವ ಆರ್. ಬಿ. ತಿಮ್ಮಾಪೂರ ಅವರೇ ರಫ್ತಿಗೆ ಅನುಮೋದನೆ ನೀಡಿ ಆದೇಶ ಹೊರಡಿಸಿದ್ದಾರೆ. ಈ ಕಾಕಂಬಿಯನ್ನು ಗೋವಾ ಬಂದರಿನ ಮೂಲಕ ವಿದೇಶಕ್ಕೆ ರಫ್ತು ಮಾಡಲು ಗೋವಾ ಸರ್ಕಾರ ಕೂಡಾ ಈಗಾಗಲೇ ಅನುಮತಿಯನ್ನು ನೀಡಿದೆ.

ಸಚಿವರಾಗಿದ್ದ ಗೋಪಾಲಯ್ಯ ಅವರ ಮೇಲೆ ಆರೋಪ ಹೊರಿಸಲಾಗಿತ್ತು

ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಕಾಕಂಬಿ ರಫ್ತು ವಿಚಾರದಲ್ಲಿ ಆಗ ಅಬಕಾರಿ ಸಚಿವರಾಗಿದ್ದ ಗೋಪಾಲಯ್ಯ ವಿರುದ್ಧ ಕಿಕ್ ಬ್ಯಾಕ್ ಆರೋಪ ಮಾಡಲಾಗಿತ್ತು.

ಕಾಕಂಬಿ ರಫ್ತಿಗೆ ಪರವಾನಗಿ ನೀಡಲು ಗೋಪಾಲಯ್ಯ ಅವರು ₹ 8 ಕೋಟಿ ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಕಾಂಗ್ರೆಸ್ ನಾಯಕರೇ ಆರೋಪ ಮಾಡಿದ್ದರು. ಹಾಲಿ ಸಚಿವ ಪ್ರಿಯಾಂಕ್ ಖರ್ಗೆ, ಕೈ ನಾಯಕ ರಮೇಶ್ ಬಾಬು ಅವರು ದೊಡ್ಡ ಮಟ್ಟದಲ್ಲಿ ಈ ವಿಚಾರವಾಗಿ ದಾಖಲೆಗಳನ್ನು ತೆರೆದಿಟ್ಟಿದ್ದರು.

ನಿಜವೆಂದರೆ ಅಂದು ಈ ಹಗರಣದ ತನಿಖೆಗೆ ಆದೇಶಿಸಿದ್ದರೂ ಅದು ತುಂಬ ದೂರ ಏನೂ ಹೋಗಿಲ್ಲ. ಲಂಚ ಮುಕ್ತ ಕರ್ನಾಟಕ ವೇದಿಕೆ ಸಲ್ಲಿಸಿದ್ದ ದೂರಿನ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು ತನಿಖೆ ಆರಂಭಿಸಿದ್ದರು. ಆದರೆ, ಅದು ಇದುವರೆಗೂ ಚುರುಕುಗೊಂಡಿಲ್ಲ. ಆರೋಪ ಎದುರಿಸುತ್ತಿರುವ ಮಾಜಿ ಸಚಿವ ಗೋಪಾಲಯ್ಯ ಅವರ ವಿರುದ್ಧ ಇದುವರೆಗೂ ಎಫ್‌ಐಆರ್‌ ದಾಖಲಾಗಿಲ್ಲ. ಬದಲಾಗಿ ದೂರುದಾರರಿಗೇ ಹತ್ತಾರು ಬಾರಿ ನೋಟಿಸ್‌ ನೀಡಿ ಕಿರುಕುಳ ನೀಡಲಾಗಿದೆ.

ಈ ಪ್ರಕರಣವನ್ನು ಲೋಕಾಯುಕ್ತ ಪೊಲೀಸರು ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಆರೋಪಿಸಿದ ಲಂಚಮುಕ್ತ ಕರ್ನಾಟಕ ಸಂಘಟನೆಯ ಉಪಾಧ್ಯಕ್ಷ ಮಂಜುನಾಥ್‌ ಅವರು ಕೋರ್ಟ್‌ ಮೊರೆ ಹೊಕ್ಕಿದ್ದಾರೆ. ಮಂಜುನಾಥ್‌ ಅವರ ದಾವೆಯ ವಿಚಾರಣೆ ಸೆಪ್ಟೆಂಬರ್‌ 23ಕ್ಕೆ ಮುಂದೂಡಲಾಗಿದೆ.

ಇದೆಲ್ಲದರ ನಡುವೆ ಈಗ ಕಾಂಗ್ರೆಸ್‌ ಸರ್ಕಾರವೇ ಕಾಕಂಬಿ ರಫ್ತಿಗೆ ಅನುಮತಿಯನ್ನು ನೀಡಿದೆ. ವಿಜಯಪುರದ ಬಸವೇಶ್ವರ ಶುಗರ್ಸ್‌ ಕಂಪನಿಯಿಂದ ಅಂದಾಜು 11 ಕೋಟಿ ರೂ. ಮೌಲ್ಯದ 9500 ಮೆಟ್ರಿಕ್‌ ಟನ್‌ ಕಾಕಂಬಿಯನ್ನು (ಒಂದು ಟನ್‌ಗೆ 1200 ರೂ) ರಫ್ತು ಮಾಡಲು ಅನುಮತಿ ನೀಡುವಲ್ಲಿ ಹಿರಿಯ ಸಚಿವರೊಬ್ಬರ ಕೈವಾಡವಿದೆ ಎಂಬ ಆಪಾದನೆ ಕೇಳಿಬಂದಿದೆ. ಒಟ್ಟಿನಲ್ಲಿ ಹಿಂದೆ ತನಿಖೆಗಾಗಿ ಹೋರಾಟ ಮಾಡಿದ್ದ ಕಾಂಗ್ರೆಸ್ ನಾಯಕರು ಈಗ ಸೈಲೆಂಟ್ ಆಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

ಕಾಕಂಬಿ ರಫ್ತು ಬಗ್ಗೆ ಬಿಜೆಪಿ ಹೇಳುವುದೇನು?

ಅಂದು ಆರೋಪ ಎದುರಿಸಿದ್ದ ಬಿಜೆಪಿ ಈಗಿನ ಕಾಕಂಬಿ ರಫ್ತು ಬಗ್ಗೆ ಹಗರಣದ ಆರೋಪ ಮಾಡಿದ್ದಾರೆ.

ʻʻಕಾಕಂಬಿಯನ್ನು ಗೋವಾದಿಂದ ರಫ್ತು ಮಾಡುವ ಬದಲು ರಾಜ್ಯದ ಬಂದರುಗಳ ಮೂಲಕವೇ ರಫ್ತು ಮಾಡಬೇಕು. ಕಮಿಷನ್‌ಗಾಗಿ ರಫ್ತು ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಎಷ್ಟು ಕಮಿಷನ್ ತೆಗೆದುಕೊಂಡಿದ್ದಾರೆ ಅಂತ ಗೊತ್ತಾಗಬೇಕು. ಈ ಹಿನ್ನೆಲೆಯಲ್ಲಿ ಒಂದು ‌ಸಮಗ್ರ ತನಿಖೆ ಆಗಬೇಕುʼʼ ಎಂದು ಬಿಜೆಪಿ ಎಂಎಲ್ಸಿ ರವಿಕುಮಾರ್ ವಿಸ್ತಾರ ನ್ಯೂಸ್‌ಗೆ ಹೇಳಿದ್ದಾರೆ.

ಹಾಗಿದ್ದರೆ ಈಗ ಕಾಂಗ್ರೆಸ್‌ ಏನು ಹೇಳುತ್ತದೆ?

ಅಂದು ಬಿಜೆಪಿ ವಿರುದ್ಧ ಕಾಕಂಬಿ ಹಗರಣದ ಆರೋಪ ಮಾಡಿದ್ದ ಕಾಂಗ್ರೆಸ್‌ ವಕ್ತಾರ ರಮೇಶ್‌ ಬಾಬು ಅವರು ಇದೀಗ ಕಾಂಗ್ರೆಸ್‌ ಸರ್ಕಾರದ ಹೊಸ ರಫ್ತು ಪರವಾನಗಿ ಬಗ್ಗೆ ಮಾತನಾಡಿದ್ದಾರೆ.

ʻʻಚುನಾವಣೆ ಪೂರ್ವದಲ್ಲಿ ನಾನು ಮತ್ತು ಪ್ರಿಯಾಂಕ್ ಖರ್ಗೆ ಸುದ್ದಿಗೋಷ್ಠಿ ಮಾಡಿದ್ದೆವು. ಕಾಕಂಬಿ ಪರವಾನಗಿ ಪಡೆದ ಕಂಪನಿಯ ವ್ಯಕ್ತಿ ಹಾಗೂ ಮಧ್ಯವರ್ತಿ ಪೋನ್ ಸಂಭಾಷಣೆ ಸದ್ದು ಮಾಡಿತ್ತು. ಪರವಾನಗಿ ಕೊಟ್ಟಿದ್ದರ ಬಗ್ಗೆ ಅನುಮಾನ ಬಂದು ನಾನು ಮತ್ತು ಪ್ರಿಯಾಂಕ್ ಖರ್ಗೆ ತನಿಖೆಗೆ ಒತ್ತಾಯ ಮಾಡಿದ್ದೆವು. ಈಗ ನನಗಿರುವ ಮಾಹಿತಿ ಪ್ರಕಾರ ಅಬಕಾರಿ ಆಯುಕ್ತರು ಆಗಸ್ಟ್ ಮೊದಲ ವಾರದಲ್ಲಿ ವರದಿ ಕೊಟ್ಟಿದ್ದಾರೆ. ಆ ವರದಿಯಲ್ಲಿ ಕಾನೂನು ಉಲ್ಲಂಘನೆ ಆಗಿಲ್ಲ, ನಿಯಮಗಳ ಅನ್ವಯ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ ಎಂಬ ಮಾಹಿತಿಯಿದೆʼʼ ಎಂದು ರಮೇಶ್‌ ಬಾಬು ಹೇಳಿದ್ದಾರೆ.

ಹಿಂದಿನ ಹಗರಣದ ತನಿಖೆ ವಿಚಾರ ಲೋಕಾಯುಕ್ತದಲ್ಲಿದೆ ಎನ್ನುವುದು ಗೊತ್ತು. ಕೋರ್ಟ್ ನಲ್ಲಿ ಪ್ರಕರಣ ಇರುವ ಬಗ್ಗೆ ನಮಗೆ ಮಾಹಿತಿಯಿಲ್ಲ. ಮತ್ತೊಮ್ಮೆ ಸರ್ಕಾರದ ಗಮನಕ್ಕೆ ತರುತ್ತೇವೆ. ಪರಿಶೀಲನೆ ಮಾಡುವಂತೆ ಗಮನಕ್ಕೆ ತರುತ್ತೇವೆ ಎಂದಿರುವ ರಮೇಶ್‌ ಬಾಬು ಅವರು, ʻʻನಮ್ಮ ಉದ್ದೇಶ ರಾಜ್ಯ ಸರ್ಕಾರದ ಆದಾಯ ಸೋರಿಕೆ ಆಗಬಾರದು ಎಂಬುದು. ಆಯುಕ್ತರು ಕೊಟ್ಟ ವರದಿ ಪಡೆದು, ಅದರಲ್ಲಿ ಲೋಪ ಆಗಿದ್ದರೆ ಸರಿಪಡಿಸುವಂತೆ ಸರ್ಕಾರದ ಗಮನಕ್ಕೆ ತರುತ್ತೇವೆʼʼ ಎಂದಿದ್ದಾರೆ.

Exit mobile version