ತುಮಕೂರು: ಇಲ್ಲಿನ ಮಧುಗಿರಿ ತಾಲೂಕಿನ ದೊಡ್ಡೇರಿ ಹೋಬಳಿಯ ಬೋರಗುಂಟೆ ಗ್ರಾಮದಲ್ಲಿ ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಶಿಕ್ಷಕನನ್ನು ಹಿಡಿದು ಥಳಿಸಲಾಗಿದೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಮಂಜುನಾಥ್ ಎಂಬಾತ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.
ಸಹ ಶಿಕ್ಷಕ ಮಂಜುನಾಥ್ ತರಗತಿಯಲ್ಲಿ ವಿದ್ಯಾರ್ಥಿನಿಯರ ಮೈ ಮುಟ್ಟುವುದು ಮತ್ತಿತರ ಕುಚೇಷ್ಟೆಗಳನ್ನು ಮಾಡುತ್ತಿದ್ದ ಎಂದು ವಿದ್ಯಾರ್ಥಿನಿಯರು ಪೋಷಕರಿಗೆ ಹೇಳಿದ್ದಾರೆ. ಹೀಗಾಗಿ ಸೋಮವಾರ ಶಾಲಾ ಆರಂಭಕ್ಕೂ ಮುನ್ನವೇ ಶಿಕ್ಷಕನನ್ನು ತಡೆದು ವಿಚಾರಿಸಿದ್ದಲ್ಲದೆ ಗ್ರಾಮಸ್ಥರು ಒಗ್ಗೂಡಿ ಆತನಿಗೆ ಥಳಿಸಿದ್ದಾರೆ.
ಇದನ್ನೂ ಓದಿ: Road Accident: ಬೈಕ್-ಕಾರು ನಡುವೆ ಮುಖಾಮುಖಿ ಡಿಕ್ಕಿ; ಬೈಕ್ ಸವಾರ ಮೃತ್ಯು
ಘಟನಾ ಸ್ಥಳಕ್ಕೆ ಬಿಇಒ ತಿಮ್ಮರಾಜು, ಬಡವನಹಳ್ಳಿ ಪಿ.ಐ. ಹನುಮಂತರಾಯಪ್ಪ, ಸಿಡಿಪಿಒ ಅನಿತಾ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ಈ ಬಗ್ಗೆ ವಿಚಾರಣೆ ನಡೆಸಿದಾಗ ಸತ್ಯ ಬಯಲುಗೊಂಡಿದೆ. ಈ ಬಗ್ಗೆ ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಕ್ಸೋ ಕಾಯ್ದೆ ಅಡಿ ದೂರು ದಾಖಲಿಸಿಕೊಳ್ಳಲಾಗಿದೆ. ಈಗ ಸಹ ಶಿಕ್ಷಕನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ