Site icon Vistara News

ಕೋತಿಯೆಂದರೆ ಹನುಮಂತ; ಮೃತ ಮಂಗಕ್ಕೆ ಶಾಸ್ತ್ರೋಕ್ತ ಅಂತ್ಯ ಸಂಸ್ಕಾರ, ರಾತ್ರಿಯಿಡೀ ಭಜನೆ!

Monkey carcass parade And Funeral in Vijayapura

#image_title

ವಿಜಯಪುರ: ಶಾರ್ಟ್​ ಸಕ್ಯೂಟ್​​ನಿಂದ ಮೃತಪಟ್ಟ ಕೋತಿಗೆ ಗ್ರಾಮಸ್ಥರೆಲ್ಲ ಸೇರಿ ಶಾಸ್ತ್ರೋಕ್ತವಾಗಿ ಅಂತ್ಯಸಂಸ್ಕಾರ (Monkey Funeral) ಮಾಡಿದ್ದಾರೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಕಣಕಾಲ ಗ್ರಾಮದಲ್ಲಿ ಇರುವ ನ್ಯೂ ಹೈಸ್ಕೂಲ್​ ಬಳಿ ವಿದ್ಯುತ್​ ಪರಿವರ್ತಕ ಸ್ಪರ್ಶಿಸಿ, ಮರದ ಮೇಲೆ ಕೋತಿ ಮೃತಪಟ್ಟಿತ್ತು. ಅದನ್ನು ನೋಡಿದವರು ಊರಿನ ಇನ್ನೂ ಕೆಲವರಿಗೆ ತಿಳಿಸಿದ್ದರು. ಹಲವರು ಸೇರಿ ಆ ಮಂಗವನ್ನು ಮರದಿಂದ ತೆಗೆದಿದ್ದಾರೆ. ಆದರೆ ಆ ಮಂಗದ ಮೃತದೇಹವನ್ನು ತೆಗೆಯುವುದು ಅಷ್ಟು ಸುಲಭದ್ದಾಗಿರಲಿಲ್ಲ. ಇನ್ನೆರಡು ಕೋತಿಗಳು ಅಲ್ಲೇ ಕಾವಲಿಗೆ ಇದ್ದು, ಅದನ್ನು ತೆಗೆಯಲು ಬಿಡುತ್ತಿರಲಿಲ್ಲ. ಹೇಗೇಗೋ ಪ್ರಯತ್ನ ಪಟ್ಟು ಕೋತಿ ಮೃತದೇಹವನ್ನು ತೆಗೆದಿದ್ದಾರೆ.

ಹೀಗೆ ಮಂಗದ ಮೃತದೇಹ ತೆಗೆದ ಬಳಿಕ ಅದನ್ನು ಸುಮ್ಮನೆ ಹೂಳಲಿಲ್ಲ. ವಿಧಿಬದ್ಧವಾಗಿ ಅದರ ಅಂತ್ಯಕ್ರಿಯೆ ಮಾಡಲು ಮುಂದಾಗಿದ್ದಾರೆ. ಕೋತಿ ಎಂಬುದು ಹನುಮಂತನ ಸ್ವರೂಪ. ಹಾಗಾಗಿ ಸಕಲ ವಿಧಿ-ವಿಧಾನಗಳೊಂದಿಗೆ ಅಂತಿಮ ಸಂಸ್ಕಾರ ಮಾಡಬೇಕು ಎಂದು ನಿರ್ಧರಿಸಿದ ಹಳ್ಳಿಯ ಜನರು ಆ ಕೋತಿಯ ಮೃತದೇಹಕ್ಕೆ ಶರ್ಟ್​-ಪ್ಯಾಂಟ್, ಟೋಪಿ ತೊಡಿಸಿದ್ದರು. ಒಂದು ಕುರ್ಚಿಯ ಮೇಲೆ ಕೂರಿಸಿದ್ದರು. ಹಾರ, ಕೇಸರಿ ಶಾಲನ್ನೂ ಹಾಕಿದ್ದರು.

ಇದನ್ನೂ ಓದಿ: ತಾತಯ್ಯ ತತ್ವಾಮೃತಂ : ನಿನ್ನ ನಾಮದ ಬಲವೊಂದಿದ್ದರೇ ಸಾಕೋ…!

ಅಷ್ಟೇ ಅಲ್ಲ, ಆ ಕಪಿಯ ಮೃತದೇಹವನ್ನು ವಾಹನದ ಮೇಲಿಟ್ಟು ಮೆರವಣಿಗೆ ಸಾಗಿದ್ದಾರೆ. ಈ ವೇಳೆ ವಾದ್ಯಗಳೂ ಮೊಳಗಿದವು. ತಮಟೆ ಸದ್ದೂ ಕೇಳುತ್ತಿತ್ತು. ಬಜರಂಗದಳದ ಧ್ವಜವೂ ಹಾರಾಡಿದೆ. ನಿನ್ನೆ ರಾತ್ರಿಯಿಡೀ ಮಂಗದ ಮೃತದೇಹದೊಂದಿಗೆ ಜಾಗರಣೆ ಮಾಡಿರುವ ಕಣಕಾಲ ಗ್ರಾಮಸ್ಥರು ಇಂದು ಗ್ರಾಮದ ಪತ್ರಿಮಠದ ಬಳಿ ಕೋತಿಗೆ ಸಮಾಧಿ ನಿರ್ಮಿಸಲಿದ್ದಾರೆ. ಮಧ್ಯಾಹ್ನದ ಹೊತ್ತಿಗೆ ಅಂತ್ಯಸಂಸ್ಕಾರ ಮುಕ್ತಾಯಗೊಳ್ಳಲಿದೆ.

ಕೋತಿ ಮೃತದೇಹದ ಮೆರವಣಿಗೆ
ಮೃತ ಕೋತಿ ಎದುರು ಭಜನೆ ಮಾಡುತ್ತಿರುವ ಗ್ರಾಮಸ್ಥರು
Exit mobile version