ನವದೆಹಲಿ: ನಾಲ್ಕು ದಿನ ತಡವಾಗಿ ದೇಶದಲ್ಲಿ ನೈಋತ್ಯ ಮುಂಗಾರು (southwest monsoon) ಸಂಪೂರ್ಣವಾಗಿ ನಿರ್ಗಮಿಸಿದೆ. ಸಾಮಾನ್ಯವಾಗಿ ಅಕ್ಟೋಬರ್ 15ಕ್ಕೆ ಮುಂಗಾರು ಸಂಪೂರ್ಣವಾಗಿ ನಿರ್ಗಮನವಾಗುತ್ತದೆ. ಆದರೆ ಈ ಬಾರಿ ನಾಲ್ಕು ದಿನ ತಡವಾಗಿ ಮುಂಗಾರು ಅಂತ್ಯ ಕಂಡಿದೆ (Monsoon Withdraws) ಎಂದು ಭಾರತೀಯ ಹವಾಮಾನ ಇಲಾಖೆ(India Meteorological Department – IMD) ಗುರುವಾರ ಹೇಳಿದೆ. ಇದೇ ವೇಳೆ, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಈಶಾನ್ಯ ಮಾನ್ಸೂನ್(northeast monsoon – ಹಿಂಗಾರು) ಆರಂಭವಾಗುವ ಸಾಧ್ಯತೆ ಇದೆ ಎಂದು ಹೇಳಿದೆ.
ನೈಋತ್ಯ ಮಾನ್ಸೂನ್ ನಿರ್ಗಮನವು ವಿಳಂಬವಾದ್ದರಿಂದ, ಈಶಾನ್ಯ ಮಾನ್ಸೂನ್(ಹಿಂಗಾರು) ಆರಂಭವು ದುರ್ಬಲವಾಗುವಾಗಿರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಈ ಬಾರಿ ಮುಂಗಾರು ಸಾಮಾನ್ಯವಾಗಿತ್ತು. ಸೆಪ್ಟೆಂಬರ್ 30ಕ್ಕೆ ಮುಕ್ತಾಯವಾದಂತೆ ದೇಶದಲ್ಲಿ ಶೇ.94ರಷ್ಟು ಮಳೆಯಾಗಿದೆ. ಶೇ.96ರಿಂದ ಶೇ.104ರ ನಡುವಿನ ಮಳೆಯನ್ನು ಸಾಮಾನ್ಯ ಮಳೆ ಎಂದು ಗುರುತಿಸಲಾಗುತ್ತದೆ.
ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ದೇಶದಲ್ಲಿ ಈ ಬಾರಿ ಮುಂಗಾರಿನಲ್ಲಿ ಸರಾಸರಿ ಮಳೆಗಿಂತಲೂ ಕಡಿಮೆ ಮಳೆ ಸುರಿದಿದೆ. ಜೂನ್ನಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ 868 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದರೆ, ಕೇವಲ 820 ಮಿಲಿ ಮೀಟರ್ ಮಳೆಯಾಗಿದೆ. ಹಾಗಾಗಿ, ಈ ಬಾರಿಯ ಮಳೆಯನ್ನು ಸರಾಸರಿ ಮಳೆಗಿಂತ ಕಡಿಮೆ ಮಳೆ ವರ್ಷ ಎಂದು ಗುರುತಿಸಲಾಗಿದೆ.
ಈ ಸುದ್ದಿಯನ್ನೂ ಓದಿ: Karnataka Weather : ಕೈ ಕೊಟ್ಟ ಮುಂಗಾರು; ಕೈ ಹಿಡಿಯುತ್ತಾ ಹಿಂಗಾರು?
ವಾಯುವ್ಯ ಭಾರತದಿಂದ ಮಾನ್ಸೂನ್ ಹಿಂದೆ ಸರಿಯುವ ಪ್ರಕ್ರಿಯೆಯು ಭಾರತೀಯ ಉಪಖಂಡದಿಂದ ಮಳೆಗಾಲ ಅಂತ್ಯವಾಗುವುದನ್ನು ಸೂಚಿಸುತ್ತದೆ. ಮಾನ್ಸೂನ್ ಹಿಂದೆ ಸರಿಯುವುದು ಯಾವುದೇ ವಿಳಂಬವು ದೀರ್ಘವಾದ ಮಳೆಗಾಲವನ್ನು ಅರ್ಥೈಸುತ್ತದೆ. ಇದು ಕೃಷಿ ಉತ್ಪಾದನೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರಲಿದೆ. ವಿಶೇಷವಾಗಿ ವಾಯುವ್ಯ ಭಾರತದಲ್ಲಿ ಮಾನ್ಸೂನ್ ಮಳೆಯು ರಾಬಿ ಬೆಳೆ ಉತ್ಪಾದನೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ.
ಭಾರತದಲ್ಲಿ ಮುಂಗಾರು ಮಳೆಯ ಜೂನ್ 1ರಂದು ಕೇರಳದ ಮೂಲಕ ಪ್ರವೇಶಿಸುತ್ತದೆ. ಜುಲೈ 8ರ ವೇಳೆಗೆ ಇಡೀ ದೇಶವನ್ನು ಮುಂಗಾರು ಆವರಿಸುತ್ತದೆ. ಸೆಪ್ಟೆಂಬರ್ 17ರ ಹೊತ್ತಿಗೆ ಕ್ಷೀಣವಾಗಲಾರಂಭಿಸುತ್ತದೆ. ಅಕ್ಟೋಬರ್ 15ರ ವೇಳೆ ಮಾನ್ಸೂನ್ ಸಂಪೂರ್ಣವಾಗಿ ದೇಶದಿಂದ ಮಾಯವಾಗುತ್ತದೆ ಎಂದು ಭಾರತೀಯ ಹವಮಾನ ಇಲಾಖೆ ತಿಳಿಸಿದೆ.