Site icon Vistara News

Monsoon: ʻದಕ್ಷಿಣದ ಚಿರಾಪುಂಜಿʼ ಎನಿಸಿದ್ದ ಆಗುಂಬೆಯ ಮಳೆ ಎಲ್ಲಿ ಹೋಯಿತು?

rain in agumbe

“ಮೋಡಗಳ ಜಡೆಬಿಚ್ಚಿ ಮೈ ತೊಳೆದುಕೊಳುತಿಹಳು ಬಯಲ ಭಾಮಿನಿ ಜಗದ ಮಣೆಯ ಮೇಲೆ; ಕೇಶರಾಶಿಯ ನೀರು ತೊಟ್ಟಿಕ್ಕಿ ಸುರಿಯುತಿದೆ, ಇದಕೆ ಜನವೆನ್ನುವುದು ಮಳೆಯ ಲೀಲೆ”

ಮಳೆಯೆಂಬ ದೃಶ್ಯಕಾವ್ಯವನ್ನು ಬಣ್ಣಿಸಲು ಲೋಕ ಯತ್ನಿಸಿದ್ದು, ಕುರುಡ ಆನೆ ಮುಟ್ಟಿದಂತೆ! ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಅನುಭವಕ್ಕೆ ಬರುತ್ತದೆ ಮಳೆ. ಆದರೆ ನಿಜವಾಗಿ ಮಳೆಯಲ್ಲೂ ಬೆವರುವಂಥ ಅನುಭವ ಆಗಬೇಕೆಂದರೆ ಮಳೆ ಹಿಡಿದು ಜಡಿಯುವಂಥ ಜಾಗಕ್ಕೆ ಹೋಗಿ ಕುಳಿತುಕೊಳ್ಳಬೇಕು. ಅದಕ್ಕಾಗಿ ಮೇಘಾಲಯದ ಚಿರಾಪುಂಜಿಗೇನೂ ಹೋಗಬೇಕೆಂದಿಲ್ಲ, ನಮ್ಮದೇ ಆದ ಶಿವಮೊಗ್ಗ ಜಿಲ್ಲೆಯ ಆಗುಂಬೆಗೆ (Agumbe rain) ಹೋದರೂ ಸಾಕು- ಎನ್ನುವ ಕಾಲವೊಂದಿತ್ತು. ಆದರೆ ಈಗಿಲ್ಲ!

ಏನು ಹಾಗೆಂದರೆ? ದಕ್ಷಿಣದ ಚಿರಾಪುಂಜಿ (Chirapunji) ಎಂದೇ ಹೆಸರಾಗಿದ್ದ ಆಗುಂಬೆ ತನ್ನೀ ಪಟ್ಟವನ್ನು ಕಳೆದುಕೊಂಡಿದೆಯೇ? ಹಾಗಾದರೆ ಕರ್ನಾಟಕದಲ್ಲಿ ಹೆಚ್ಚು ಮಳೆಯಾಗುತ್ತಿರುವ ಪ್ರದೇಶ ಯಾವುದು? ಎಷ್ಟು ಮಳೆಯಾಗುತ್ತಿದೆ? ಈ ಬದಲಾವಣೆ ಯಾಕಾಯಿತು? ಮುಂತಾದ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಯತ್ನವಿದು.

ಇದು ಕೇವಲ ಶಿವಮೊಗ್ಗ ಜಿಲ್ಲೆ ಒಂದರ ಪರಿಸ್ಥಿತಿಯಲ್ಲ, ಕಳೆದೊಂದು ದಶಕದಿಂದ ಇಡೀ ರಾಜ್ಯದಲ್ಲೇ ಮಳೆಯ ನಕಾಶೆ ಬದಲಾಗಿದೆ. ಜೂನ್‌ ೧ರಂದು ಮಕ್ಕಳಿಗೆ ಶಾಲೆ ಶುರುವಾಗುವಷ್ಟೇ ಶಿಸ್ತಿನಿಂದ ಕರ್ನಾಟಕವನ್ನು ಪ್ರವೇಶಿಸುತ್ತಿದ್ದ ಮುಂಗಾರು ಮಾರುತಗಳ ಸ್ವರೂಪವೇ ಈಗ ಬೇರಾಗಿದೆ. ಹಳೆಯ ಜನರ ಮಳೆ ನಕ್ಷತ್ರದ ಲೆಕ್ಕಾಚಾರವೂ ಬುಡಮೇಲಾಗಿದೆ. ಹಾಗೆಂದು ಮಳೆ ಸುರಿದ ಅಂಕಿ-ಅಂಶಗಳನ್ನು ನೋಡಿದರೆ ʻಬರʼ ಎನ್ನುವಂಥ ಸೂಚನೆಗಳು ಇಲ್ಲದಿದ್ದರೂ, ಮಾರ್ಚ್‌ ತಿಂಗಳಲ್ಲಿ ಮಲೆನಾಡಿನಲ್ಲೇ ಕುಡಿಯುವ ನೀರಿನ ಕೊರತೆ ಎದುರಾಗುತ್ತಿದೆ. ಯಾಕಿಂಥ ವೈಪರಿತ್ಯಗಳು ಕಾಣುತ್ತಿವೆ?

ತಜ್ಞರ ವಿಶ್ಲೇಷಣೆಯ ಪ್ರಕಾರ, ದಕ್ಷಿಣದ ಅಥವಾ ಕರ್ನಾಟಕದ ಚಿರಾಪುಂಜಿ ಎಂಬ ಕಿರೀಟವನ್ನು ಕಳೆದ ಏಳು ವರ್ಷಗಳಿಂದೀಚೆಗೆ ಆಗುಂಬೆ ಬಿಟ್ಟುಕೊಟ್ಟಿದೆ. ಈಗ ಉಡುಪಿ ಜಿಲ್ಲೆಯ ಬೇರೆಬೇರೆ ಭಾಗಗಳಲ್ಲಿ ಪ್ರತಿ ವರ್ಷ ಹೆಚ್ಚಿನ ಮಳೆ ದಾಖಲಾಗುತ್ತಿದೆ. 2019ರಲ್ಲಿ ಉಡುಪಿ ಬೈರಂಪಳ್ಳಿಯಲ್ಲಿ, 2017ರಲ್ಲಿ ಕಾರ್ಕಳದ ಶಿರ್ಲಾಲು, 2018ರಲ್ಲಿ ಉತ್ತರಕನ್ನಡ, 2019, 20, 21, 22ರಲ್ಲಿ ಕ್ರಮವಾಗಿ ಉಡುಪಿಯ ಹೆಬ್ರಿ, ಇನ್ನಂಜೆ ಮತ್ತು ಮುದ್ರಾಡಿ ಹಾಗೂ ಕಾರ್ಕಳ ತಾಲೂಕು ಈ ಸ್ಥಾನ ಪಡೆದಿವೆ. ಹಾಗಾದರೆ ಆಗುಂಬೆ ಎಲ್ಲಿ ಹೋಯಿತು?

ಬರವೇ?: ಖಂಡಿತಕ್ಕೂ ಆಗುಂಬೆಯಲ್ಲಿ ಬರಗಾಲವಲ್ಲ. ಆದರೆ ಎರಡು ಅಥವಾ ಮೂರನೇ ಸ್ಥಾನಕ್ಕೆ ಇಳಿದಿದೆ ಈ ಜಾಗ. ಪರಿಣತರ ಪ್ರಕಾರ ಪಶ್ಚಿಮ ಘಟ್ಟಗಳಲ್ಲಿ ಅವಿತರವಾಗಿ ನಡೆಯುತ್ತಿರುವ ಅರಣ್ಯನಾಶ ಮತ್ತು ಭೂಮಿ ಬಿಸಿಯಾಗುತ್ತಿರುವುದು ಇದಕ್ಕೆ ಮುಖ್ಯ ಕಾರಣಗಳು. ಸಾಮಾನ್ಯವಾಗಿ ತಂಪಾದ ಹವೆಯಿರುತ್ತಿದ್ದ ಪ್ರದೇಶಗಳು ಇದರಿಂದಾಗಿ ಬಿಸಿಯೇರಿವೆ. ಕಳೆದ ಹತ್ತು ವರ್ಷಗಳಲ್ಲಿ ಕಳೆದುಳಿದ ನೈಸರ್ಗಿಕ ಅರಣ್ಯದ ಪ್ರಮಾಣ ಕೇವಲ ಶೇ. ೧೮ರಷ್ಟು ಎಂದು ತಜ್ಞರು ಹೇಳುವಾಗ, ಭವಿಷ್ಯದಲ್ಲಿ ಭೂಮಿ ಇನ್ನೂ ಬಿಸಿಯಾಗಿ, ಮಳೆಯ ಏರುಪೇರು ಇನ್ನಷ್ಟು ಕಾದಿದೆ ಎಂಬ ಎಚ್ಚರಿಕೆಯನ್ನೂ ನಾವು ಗಮನಿಸಬೇಕು. ಕರ್ನಾಟಕದ ಅಂಕಿ-ಅಂಶಗಳನ್ನು ಗಮನಿಸಿದರೆ, ಶೇ. ೩೩ರಕ್ಕಿಂತ ಹೆಚ್ಚಿನ ಭೂಭಾಗ ಅರಣ್ಯದಿಂದ ಕೂಡಿದ್ದ ನಾಡಿನಲ್ಲಿ ಈಗ ಉಳಿದಿರುವುದು ಶೇ. ೨೦ಕ್ಕೂ ಕಡಿಮೆ.

ಕಳೆದ ಮೂರು ದಶಕಗಳಿಂದ ಈ ಪ್ರದೇಶಗಳ ನೈಸರ್ಗಿಕ ಅರಣ್ಯಗಳನ್ನು ಕಡಿದು ನೆಡುತೋಪುಗಳ ಮೊರೆ ಹೋಗಲಾಗುತ್ತಿದೆ. ಆದರೆ ಸಮಸ್ಯೆಯೆಂದರೆ, ನಮಗಿಷ್ಟದ ಯಾವುದೊ ಸಸಿಗಳನ್ನು ನೆಟ್ಟು ಬೆಳೆಸುತ್ತಿರುವುದು. ಅಂದರೆ ಅಕೇಶಿಯಾ, ರಬ್ಬರು ಮುಂತಾದ ಮರಗಳು ಇಲ್ಲಿಗೆ ಸ್ಥಳೀಯವಲ್ಲ. ಎರವಲು ಸಸ್ಯಾದಿಗಳು. ಇಲ್ಲಿಯದೇ ಮರಗಳಾದ, ಹೊನ್ನೆ, ತೇಗ, ಬೀಟೆ, ನಂದಿ, ಮತ್ತಿ ಮುಂತಾದ ಅಗಣಿತ ಜಾತಿಯ ಮರಗಳು ನಿಧಾನಕ್ಕೆ ಖಾಲಿಯಾಗುತ್ತಿವೆ. ಇಲ್ಲಿನ ನೈಸರ್ಗಿಕ ಸಮತೋಲನವನ್ನು ಕಾಯ್ದುಕೊಳ್ಳಲು ಬೇಕಾಗಿರುವುದು ಮೊದಲಿನಿಂದ ಇಲ್ಲಿಯೇ ಹುಟ್ಟಿದ ಸಸ್ಯಾದಿ ವರ್ಗಗಳು. ಈ ಕಾಡುಗಳ ಪ್ರಾಣಿ ಪಕ್ಷಿಗಳು ತಿನ್ನುವುದು ಈ ವನಸಂಪತ್ತಿನ ಎಲೆ, ಹಣ್ಣುಗಳನ್ನೇ, ಅದಕ್ಕೆ ಬರುವ ಕೀಟಗಳನ್ನೇ.

#image_title

ಈ ಎಲ್ಲಾ ಸಮತೋಲನ ಈಗ ಬುಡಮೇಲಾಗುತ್ತಿದೆ. ಎಲ್ಲದರ ಪರಿಣಾಮವಾಗಿ ಮಳೆಯ ಸ್ವರೂಪ ಬದಲಾಗುತ್ತಿದೆ. ಮೊದಲಿನಂತೆ ಹಲವಾರು ತಿಂಗಳುಗಳ ಕಾಲ ಹದ ಹಿಡಿದು ಹೊಯ್ಯದ ಮಳೆ, ಈಗ ನಾನು-ನನ್ನಿಷ್ಟ ಎಂಬಂತೆ ಮನಸ್ಸಿಗೆ ಬಂದಾಗ ಒಂದೇಸಮ ಸುರಿಯುತ್ತಿದೆ. ಇದರಿಂದ ದಿಢೀರ್‌ ಪ್ರವಾಹ ಉಂಟಾಗುತ್ತಿದ್ದು, ಮಣ್ಣಿನ ಫಲವತ್ತತೆ ನಶಿಸುತ್ತಿದೆ. ಭೂಮಿ ಸವೆಯುತ್ತಿದ್ದು, ಗುಡ್ಡಗಳು ಕುಸಿಯಲಾರಂಭಿಸಿವೆ. ಮಳೆಯ ಪ್ರಮಾಣ ಸಿಕ್ಕಾಪಟ್ಟೆ ಕಡಿಮೆ ಆಗದಿದ್ದರೂ, ಭೋರ್ಗರೆವ ಮಳೆಯಿಂದಾಗಿ ನದಿಗಳಲ್ಲಿ ನೀರು ನಿಲ್ಲದೇ ಒಮ್ಮೆಲೇ ಹರಿದು ಹೋಗಿ, ಜೀವನಾಡಿಗಳು ಬತ್ತುತ್ತಿವೆ. ಅಂತರ್ಜಲದ ಮಟ್ಟವೂ ಕುಸಿಯುತ್ತಿದೆ. ಅಕ್ಟೋಬರ್‌ ಮತ್ತು ಡಿಸೆಂಬರ್‌ ತಿಂಗಳುಗಳ ನಡುವೆ ರಾಜ್ಯದಲ್ಲಿ ಶೇ. ೬೦ರಷ್ಟು ಹೆಚ್ಚು ಮಳೆಯಾಗುತ್ತಿದ್ದರೂ, ಮಾರ್ಚ್‌ ಎನ್ನುವಷ್ಟರಲ್ಲಿ ಕುಡಿಯಲೂ ನೀರಿಗೆ ಪರದಾಡುವಂತಾಗುತ್ತಿದೆ.

ಆಮದು ಗಿಡ-ಮರಗಳಿಂದ ಈ ಹಾನಿಯನ್ನು ತಡೆಯುವುದು ಸಾಧ್ಯವಾಗುತ್ತಿಲ್ಲ. ಇಲ್ಲಿ ದುರ್ಗಮವಾಗಿ ಬೆಳೆಯುವ ನೈಸರ್ಗಿಕ ಕಾಡುಗಳನ್ನು ಪುನರುಜ್ಜೀವನಗಿಳಿಸಿದರೆ ಮಾತ್ರವೇ ಮಲೆನಾಡು ಮತ್ತು ಕರಾವಳಿಯ ಜಿಲ್ಲೆಗಳಲ್ಲಿ ಏರುಪೇರಾಗಿರುವ ಮಳೆಗೆ ಮದ್ದರೆಯುವುದಕ್ಕೆ ಸಾಧ್ಯ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಮಾನವನ ಹಸ್ತಕ್ಷೇಪ ಕಡಿಮೆಯಾದಷ್ಟೂ ನಿಸರ್ಗ ಮತ್ತು ಆ ಮೂಲಕ ನಾವೂ ಕ್ಷೇಮವಾಗಿರಬಹುದು.

ಇದನ್ನೂ ಓದಿ: Monsoon 2023: ‘ಲೇಟ್ ಲತೀಫ್’ ಮಳೆರಾಯ! ಒಂದು ವಾರ ತಡವಾಗಿ ಕೇರಳಕ್ಕೆ ಬಂದ

Exit mobile version