ಬೆಂಗಳೂರು: ಶಾಲೆಯಲ್ಲಿ ಮೌಲ್ಯಯುತ ಶಿಕ್ಷಣವನ್ನು (Moral education) ಜಾರಿಗೆ ತರುವ ನಿಟ್ಟಿನಲ್ಲಿ ಮೌಲ್ಯ ಶಿಕ್ಷಣ ಸಮಿತಿಯನ್ನು ರಚಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಅಭಿಪ್ರಾಯ/ಸಲಹೆಗಳನ್ನು ಸಂಗ್ರಹಿಸಲು ವಿಧಾನಸೌಧದಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ನೇತೃತ್ವದಲ್ಲಿ ಕರೆಯಲಾಗಿದ್ದ ವಿವಿಧ ಮಠಾಧೀಶರು, ಧಾರ್ಮಿಕ ಮುಖಂಡರು ಹಾಗೂ ಶಿಕ್ಷಣ ತಜ್ಞರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮೌಲ್ಯಯುತ ಶಿಕ್ಷಣದ ಬಗ್ಗೆ ಸಾಕಷ್ಟು ಚರ್ಚೆಯಾಗಿದ್ದು, ಈ ಎಲ್ಲ ಸಲಹೆಗಳನ್ನು ಆಧರಿಸಿ, ವರದಿ ನೀಡುವಂತೆ ಸಮಿತಿಯನ್ನು ರಚಿಸಲು ಮುಂದಾಗಲಾಗಿದೆ. ಮುಂದಿನ ವರ್ಷದಿಂದಲೇ ಜಾರಿ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದ್ದಾರೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಸೋಮವಾರ (ಜ.9) ನಡೆದ ದುಂಡು ಮೇಜಿನ ಸಮಾಲೋಚನಾ ಸಭೆಯು ಸುಮಾರು ಮೂರು ಗಂಟೆಗಳ ಕಾಲ ನಡೆದಿದ್ದು, ಮೌಲ್ಯಯುತ ಶಿಕ್ಷಣದ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು. ಚರ್ಚೆಯಲ್ಲಿ ಶಿಕ್ಷಣ ತಜ್ಞರು, ವಿವಿಧ ಮಠಾಧೀಶರು, ಧರ್ಮ ಗುರುಗಳು ತಮ್ಮ ತಮ್ಮ ಅಭಿಪ್ರಾಯಗಳು ಹಾಗೂ ಸಲಹೆಗಳನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಪ್ರಮುಖವಾಗಿ ಶಾಲೆಯಲ್ಲಿ ಮಕ್ಕಳಿಗೆ ಯಾವ ರೀತಿಯ ಶಿಕ್ಷಣದ ಅಗತ್ಯತೆ ಇದೆ, ಶಾಲಾಡಳಿತದೊಂದಿಗೆ ಶಿಕ್ಷಕರು ಹಾಗೂ ಪೋಷಕರ ಜವಾಬ್ದಾರಿ ಏನು? ರ‍್ಯಾಂಕ್ ಗಳಿಕೆ ಮಾನದಂಡವೇ? ಆಧ್ಯಾತ್ಮಿಕ ಮೌಲ್ಯ ಏಕೆ ಪ್ರಮುಖ ಪಾತ್ರ ವಹಿಸುತ್ತದೆ? ಎಂಬಿತ್ಯಾದಿ ಅಂಶಗಳನ್ನು ಚರ್ಚಿಸಲಾಯಿತು. ಶಿಕ್ಷಣದಲ್ಲಿ ಇವುಗಳ ಅನುಷ್ಠಾನದಿಂದ ಆಗುವ ಸಾಧಕ-ಬಾಧಕಗಳ ಬಗ್ಗೆಯೂ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಎಲ್ಲ ಧಾರ್ಮಿಕ ಮುಖಂಡರು, ಶಿಕ್ಷಣ ತಜ್ಞರ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಇದೀಗ ಮೌಲ್ಯ ಶಿಕ್ಷಣಕ್ಕೆ ಸಮಿತಿ ರಚಿಸಲಾಗುತ್ತಿದ್ದು, ಅಧ್ಯಯನ ವರದಿ ಬಳಿಕ ಮುಂದಿನ ವರ್ಷದಿಂದಲೇ ಮೌಲ್ಯ ಶಿಕ್ಷಣವನ್ನು ಜಾರಿ ಮಾಡಲು ಸಭೆಯಲ್ಲಿ ತೀರ್ಮಾನಿಸಿರುವುದಾಗಿ ಸಚಿವ ನಾಗೇಶ್ ತಿಳಿಸಿದ್ದಾರೆ.
ಉತ್ತಮ ಶಿಕ್ಷಣ ನೀಡುವಲ್ಲಿ ಶಾಲಾಡಳಿತ ಸೋತಿದೆ- ಕಸ್ತೂರಿ ರಂಗನ್
ಇಂದಿನ ದಿನಗಳಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಲ್ಲಿ ಶಾಲಾ ಆಡಳಿತ ಸೋತಿದ್ದು, ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ಸಿಗಬೇಕಿದೆ ಎಂದು ಎನ್‌ಇಪಿ ಅಧ್ಯಕ್ಷ ಕಸ್ತೂರಿ ರಂಗನ್ ತಿಳಿಸಿದರು. “I Can” (ನನ್ನಿಂದ ಆಗುತ್ತದೆ) ಎಂಬ ಮನೋಭಾವ ಮಕ್ಕಳಲ್ಲಿ ಬೆಳೆಯಬೇಕಿದೆ ಎಂದು ತಿಳಿಸಿದರು.
ದಾರಿ ತಪ್ಪಿದ ಮಕ್ಕಳು- ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
ಈಗಿನ ಮಕ್ಕಳಿಗೆ ಬೆಳಗ್ಗೆ ಎದ್ದರೆ ಮೊಬೈಲ್ ಅವರ ಬದುಕಾಗಿದ್ದು, ಇತ್ತೀಚಿನ ದಿನಗಳಲ್ಲಿ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಹೀಗಾಗಿ ನೈತಿಕ ಶಿಕ್ಷಣದ ಅಗತ್ಯತೆ ಇದ್ದು, ರಾಮಾಯಣ, ಭಗವದ್ಗೀತೆ ವಿಚಾರಗಳ ಕುರಿತು ಹೇಳಬೇಕು. ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದ್ದು, ನಮ್ಮ ದೇಶದಲ್ಲಿ ಶಿಕ್ಷಣದ ಗುಣಮಟ್ಟವು ವಿಸ್ತಾರ ಆಗಲಿದೆ ಎಂದರು.
ಮಕ್ಕಳಿಗಲ್ಲ, ರಾಜಕಾರಣಿಗಳಿಗೆ ನೈತಿಕ ಶಿಕ್ಷಣದ ಅಗತ್ಯವಿದೆ- ಸಿರಿಗೆರೆ ಮಠ ಸ್ವಾಮೀಜಿ ತರಾಟೆ
ನೈತಿಕ ಶಿಕ್ಷಣದ ಅಗತ್ಯತೆಯು ಮಕ್ಕಳಿಗಲ್ಲ ಬದಲಿಗೆ ರಾಜಕಾರಣಿಗಳಿಗೆ ಇದೆ ಎಂದು ಸಿರಿಗೆರೆ ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ. ಶಿಕ್ಷಣದಲ್ಲಿ ಪರಿವರ್ತನೆ ಆಗಬೇಕಿದೆ. ವಿದ್ಯಾರ್ಥಿಗಳಿಗೆ ಔದ್ಯೋಗಿಕ, ಆಧ್ಯಾತ್ಮಿಕ, ವ್ಯಾವಹಾರಿಕ ಶಿಕ್ಷಣ ದೊರೆಯಬೇಕಿದೆ. ಆದರೆ, ಇಂದಿನ ಶಿಕ್ಷಣದಲ್ಲಿ ಔದ್ಯೋಗಿಕ ಹಾಗೂ ವ್ಯಾವಹಾರಿಕ ಶಿಕ್ಷಣ ಮಾತ್ರವೇ ಸಿಗುತ್ತಿದೆ. ಆಧ್ಯಾತ್ಮಿಕ ಶಿಕ್ಷಣ ಸಿಗುತ್ತಿಲ್ಲ. ಹೀಗಾಗಿ ಈ ಸಭೆ ಬಹಳ ಮುಖ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಕ್ಕಳಿಗೆ ನೈತಿಕ ಶಿಕ್ಷಣ ಕೊಡುವ ಬಗ್ಗೆ ಯಾವುದೇ ವಿವಾದ ಇಲ್ಲ. ಆದರೆ ನೈತಿಕ ಶಿಕ್ಷಣ ನೀಡುವವರಿಗೆ ಮೊದಲು ಶಿಕ್ಷಣ ನೀಡಬೇಕು. ಆಗಲೇ ಮಕ್ಕಳು ಸರಿಯಾದ ಮಾರ್ಗದಲ್ಲಿ ನಡೆಯುತ್ತಾರೆ ಎಂದು ಸಲಹೆ ನೀಡಿದ್ದರು. ಸಭೆಯಲ್ಲಿದ್ದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ, ನೀವು ರಾಜಕಾರಣಿಗಳನ್ನು ಕರೆದು ನೈತಿಕ ಶಿಕ್ಷಣ ನೀಡಿ, ಆ ಮೂಲಕ ಬದಲಾವಣೆ ತನ್ನಿ ಎಂದು ಸಲಹೆ ನೀಡಿದರು.
ವಿಧಾನಸೌಧದಲ್ಲಿ ಹೇಗೆ ಕಾರ್ಯಕಲಾಪ ನಡೆಯುತ್ತಿದೆ ಎಂಬುದನ್ನು ನೋಡ್ತಿದ್ದೇವೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಮಾಡುತ್ತೀರಿ. ಆದರೆ ಯಾವ ರೀತಿ ವೈಯಕ್ತಿಕ ನಿಂದನೆಗಳು ಸದನದಲ್ಲಿ ಆಗುತ್ತಿದೆ ಎಂಬುದನ್ನು ಕಾಣಬಹುದು. ಇದಕ್ಕೆಲ್ಲ ಮೊದಲು ಕಡಿವಾಣ ಹಾಕಬೇಕಿದ್ದು, ಇದಕ್ಕಾಗಿ ಪ್ರತ್ಯೇಕ ಕಾಯಿದೆ ಜಾರಿಗೆ ತರುವ ಅವಶ್ಯಕತೆ ಇದೆ. ಮುಂದಿನ ದಿನಗಳಲ್ಲಿ ಈ ರೀತಿಯ ದುಂಡು ಮೇಜಿನ ಸಭೆ ಕರೆದು ಕಾಯಿದೆ ಪಾಸ್ ಮಾಡಿಕೊಳ್ಳಿ ಎಂದು ರಾಜಕಾರಣಿಗಳ ಕಿವಿ ಹಿಂಡಿದರು.
ಇದನ್ನೂ ಓದಿ | Karnataka Election | ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಗಿಫ್ಟ್ ಪಾಲಿಟಿಕ್ಸ್ ಬಳಿಕ ಈಗ ಆಣೆ ಪ್ರಮಾಣ ರಾಜಕೀಯ!
ಅಸ್ವತ್ವತೆ ಪ್ರಶ್ನಿಸುವ ಕಾಲವಿದು-ನಿರ್ಮಲಾನಂದನಾಥ ಸ್ವಾಮೀಜಿ
ಬಾಲ್ಯದಿಂದ ಯೂನಿವರ್ಸಿಟಿವರೆಗೂ ಕಲಿಯುವ ವಿದ್ಯೆ ಬೇರೆ ಇದೆ. ಹೀಗಾಗಿ ಶಾಲೆಯಿಂದ ಹಿಡಿದು ಯೂನಿವರ್ಸಿಟಿಗಳವರೆಗೂ ಇರುವ ಸಮಸ್ಯೆಗಳನ್ನು ಪ್ರಶ್ನಿಸುವ ಕಾಲ ಇದಾಗಿದೆ ಎಂದು ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ ಸಭೆಯಲ್ಲಿ ಹೇಳಿದರು. ಮನುಷ್ಯನ ಕೈಗೆ ವಿದ್ಯೆಯಿಂದ ಹತ್ತಿರವಾಗಬೇಕಿದ್ದ ವಿಚಾರ ದೂರವಾಗುತ್ತಿದೆ. ಮನುಷ್ಯನಿಗೆ ತನ್ನ ಒಳಗೆ ಇರುವ ವಿದ್ಯೆಯನ್ನು ಅರಿಯಲು ಅವಕಾಶ ಮಾಡಿಕೊಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಶಾಲೆ ಹಾಗೂ ಮನೆಗಳಲ್ಲಿ ಮಕ್ಕಳಿಗೆ ಬೇಕಾದ ವಿಷಯವನ್ನು ರೂಪಿಸಬೇಕಿದೆ. ಶಿಕ್ಷಕರಿಗೆ ಅಂಥದ್ದೊಂದು ವಿದ್ಯೆ ಕೊಡಬೇಕಿದೆ, ಇಲ್ಲವಾದರೆ ಬುದ್ಧನ ಕುದುರೆಯ ಕಥೆ ಇಲ್ಲಿ ಬಂದು ನಿಲ್ಲುತ್ತದೆ. ಬಹಳ ದಶಕಗಳಿಂದ ಸಂಸ್ಥಾನಗಳು, ಮಠಗಳು ಈ ಕೆಲಸ ಮಾಡಿಕೊಂಡು ಬಂದಿದೆ. ನಮ್ಮ ನಾಡಿಗೆ, ನಮ್ಮ ನೆಲಕ್ಕೆ ಶಕ್ತಿಯಿದ್ದು, ಆಧುನಿಕ ವಿದ್ಯೆ ಬೇಕಾಗುತ್ತದೆ. ಏಕಾಏಕಿ ಅಡ್ವಾನ್ಸ್ಡ್ ಸೈಕಾಲಜಿ, ಸ್ಪಿರುಚ್ಯುಯಾಲಿಟಿ ತಂದಿಟ್ಟರೆ ಕಷ್ಟವಾಗುತ್ತದೆ. ಹಂತ ಹಂತವಾಗಿ ಇದನ್ನು ಕಲಿಸುತ್ತಾ ಹೋದರೆ ಒಳ್ಳೆಯದು ಎಂದು ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ಇದನ್ನೂ ಓದಿ | Gold price | ಬಂಗಾರದ ದರದಲ್ಲಿ 330 ರೂ. ಏರಿಕೆ, ಬೆಳ್ಳಿ 500 ರೂ. ಹೆಚ್ಚಳ
ಯೂನಿವರ್ಸಲ್ ಚಿಂತನೆಗಳನ್ನು ತರಬೇಕು- ಮುಸ್ಲಿಂ ಮುಖಂಡ ಅಬ್ದುಲ್ ರಹಿಮ್
ನಮ್ಮ ದೇಶ ವಿವಿಧ ಸಂಸ್ಕೃತಿಗಳ ನಾಡಾಗಿದ್ದು, ಎಲ್ಲ ಶಾಲೆಗಳಲ್ಲಿ ಮೌಲ್ಯ ಶಿಕ್ಷಣ ಬೇಕಿದೆ. ಯೂನಿವರ್ಸಲ್ ಚಿಂತನೆಗಳನ್ನು ನಾವು ತರಬೇಕು. ಮೌಲ್ಯ ಶಿಕ್ಷಣ ಪ್ರಾಯೋಗಿಕವಾಗಿರಬೇಕು. ಮೌಲ್ಯಯುತ ಶಿಕ್ಷಣವು ಮನೆಯಿಂದ ಶುರುವಾಗಬೇಕೆಂದು ರಾಮಯಣದ ಕಥೆಯ ಮೂಲಕ ಮೌಲ್ಯಯುತ ಶಿಕ್ಷಣದ ಮಹತ್ವವನ್ನು ಅಬ್ದುಲ್ ರಹಿಮ್ ತಿಳಿಸಿದರು. ಮೌಲ್ಯಯುತ ಶಿಕ್ಷಣವನ್ನು ಮಕ್ಕಳಿಗೆ ನೀಡಿದರೆ ಯುದ್ಧ ಗೆದ್ದಂತೆ. ಭಾರತ ಜಾತಿ-ಧರ್ಮಗಳ ನಾಡು, ಮೌಲ್ಯ ಶಿಕ್ಷಣಕ್ಕೆ ಮಹತ್ವ ನೀಡಿರುವ ಸರ್ಕಾರಕ್ಕೆ ಧನ್ಯವಾದವನ್ನು ಅರ್ಪಿಸುತ್ತೇನೆ. ಮೌಲ್ಯ ಶಿಕ್ಷಣ ಕೇವಲ ತಿಳಿವಳಿಕೆಗಷ್ಟೇ ಇರದೆ ಅಂಕಗಳನ್ನು ನೀಡುವ ಮಾದರಿಯಲ್ಲಿರಬೇಕು ಎಂದರು.
ರ‍್ಯಾಂಕ್ ಗಳಿಸುವ ಮಷಿನ್ ಆಗಿರುವ ಮಕ್ಕಳು- ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಇತ್ತೀಚೆಗೆ ಮಕ್ಕಳನ್ನು ರ‍್ಯಾಂಕ್ ಗಳಿಸುವ ಮಷಿನ್ ಆಗಿ ಮಾಡಿಕೊಳ್ಳಲಾಗಿದೆ ಎಂದು ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಮಕ್ಕಳ ನಡೆ-ನುಡಿಯಲ್ಲಿ ಸಂಸ್ಕಾರವನ್ನು ಬೆಳೆಸಬೇಕು. ನಾಟಕಗಳ ಮೂಲಕ ಮಕ್ಕಳಿಗೆ ವ್ಯವಹಾರ ಜ್ಞಾನ ಆಗಬೇಕು. ಮಕ್ಕಳೇ ಪಾತ್ರಧಾರಿಗಳು ಆದಾಗ ಮೌಲ್ಯಗಳ ಅಗತ್ಯತೆಯ ಬಗ್ಗೆ ಅವರ ಮನಸ್ಸಿನಲ್ಲಿ ಗಾಢವಾದ ಪರಿಣಾಮ ಬೀರಲಿದೆ. ಶಿಕ್ಷಕರ ಮತ್ತು ತಂದೆ-ತಾಯಿ ಹಾಗೂ ಸಮಾಜದ ನಡವಳಿಕೆಯು ಮಕ್ಕಳಲ್ಲಿ ಬದಲಾವಣೆಯನ್ನು ತರಲು ಸಾಧ್ಯವಿದೆ. ಹಿಂದೆಲ್ಲ ಪಂಚತಂತ್ರದ ಕಥೆಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿತ್ತು. ಇದು ಮತ್ತೆ ಆರಂಭವಾಗಬೇಕು. ದೃಶ್ಯ ಮಾಧ್ಯಮದಲ್ಲಿ ಹಿಂಸೆಯ ವೈಭವ ಕಡಿಮೆ ಆಗಬೇಕು, ಮಕ್ಕಳ ಮುಂದೆ ಪ್ರಾಣಿವಧೆ ಮಾಡಬಾರದು. ಇದು ಮಕ್ಕಳ ಮೇಲೆ ಬೇರೆ ಪರಿಣಾಮ ಬೀರುತ್ತದೆ. ಮತ್ತೊಬ್ಬರಿಗೆ ಗೌರವ ಕೊಡುವ ಶಿಕ್ಷಣ ನೀಡಬೇಕು. ದೈವ ಭಕ್ತಿಯ ಜತೆಗೆ ದೇಶಭಕ್ತಿ, ಸಂವಿಧಾನದ ಬಗ್ಗೆ ಗೌರವ ಬೆಳೆಸುವ ಬಗ್ಗೆ ಶಿಕ್ಷಣ ಅತ್ಯಗತ್ಯ ಎಂದರು.
ಶಾಲಾ ಶಿಕ್ಷಕರೇ ನೊಂದಿರುವಾಗ ಮಕ್ಕಳಿಗೇನು ಹೇಳಿಕೊಡಬಲ್ಲರು?: ರವಿಶಂಕರ್ ಗುರೂಜಿ
ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ ವರ್ಚುವಲ್ ಮೂಲಕ ಸಭೆಯಲ್ಲಿ ಭಾಗಿಯಾಗಿ ಮಾತನಾಡಿ, ನೈತಿಕ ಶಿಕ್ಷಣ ಬಹಳ ಅವಶ್ಯಕವಾಗಿದ್ದು, ಸರ್ಕಾರ ಈ ಹೆಜ್ಜೆ ಇರಿಸಿರುವುದು ಉತ್ತಮವಾದ ಕಾರ್ಯವಾಗಿದೆ. ನಮ್ಮ ಶಿಕ್ಷಕರಿಗೆ ವ್ಯಕ್ತಿತ್ವ ನಿರ್ಮಾಣದ ಪಾಠ ಕಲಿಸಿಕೊಡಬೇಕು. ಅವರಿಗೇ ಈ ಬಗ್ಗೆ ಅರಿವಿಲ್ಲದಿದ್ದರೆ ಅವರು ಮಕ್ಕಳಿಗೇನು ಹೇಳಿಕೊಡಲು ಸಾಧ್ಯವಿದೆ ಎಂದು ಪ್ರಶ್ನಿಸಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ನೈತಿಕ ಪಾಠ ಈ ಹೊತ್ತಿನಲ್ಲಿ ಅಗತ್ಯ ಇದ್ದು, ಶಿಕ್ಷಕರಿಗೆ ಸರ್ವತೋಮುಖವಾದ ಪ್ರತಿಭೆ, ಶಿಕ್ಷಣ, ಮಕ್ಕಳಲ್ಲಿ ಆತ್ಮೀಯತೆ ಭಾವವನ್ನು ಕಲಿಸಿಕೊಡಬೇಕು ಎಂದು ತಿಳಿಸಿದರು.
ನಶೆಗೆ ಒಳಗಾಗುತ್ತಿರುವ ಮಕ್ಕಳು
ಉತ್ತರ ಭಾರತದಲ್ಲಿ ನಶಾ ಪದಾರ್ಥಗಳು ಹೆಚ್ಚಾಗಿದೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ಮಕ್ಕಳು ದುಶ್ಚಟಕ್ಕೆ ಬಲಿಯಾಗುತ್ತಿದ್ದು, ನೆರೆಯ ರಾಜ್ಯಗಳಲ್ಲಿ ಡ್ರಗ್ ಪ್ರಕರಣ ಹೆಚ್ಚಳಗೊಳ್ಳುತ್ತಿರುವುದು ನಮಗೆ ಎಚ್ಚರಿಕೆಯ ಗಂಟೆಯಾಗಿದೆ. ಹಾಲಿ ನಮ್ಮ ರಾಜ್ಯದಲ್ಲಿ ಡ್ರಗ್ ಸಮಸ್ಯೆ ಇಲ್ಲ, ಆದರೆ ನಗರದಲ್ಲಿ ಈ ಬೆಳವಣಿಗೆ ಅಂಬೆಗಾಲಿಡಲು ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ಒತ್ತಡದ ಬದಲು ನೆಮ್ಮದಿ-ಸಂತೋಷದ ವಾತಾವರಣವನ್ನು ನಿರ್ಮಾಣ ಮಾಡಬೇಕು. ಮಗು ನರ್ಸರಿಯಲ್ಲಿ ದಿನಕ್ಕೆ 400 ಬಾರಿ ಮುಗುಳು ನಗುತ್ತದೆ. ಬೆಳೆಯುತ್ತಾ ಕೇವಲ 17 ಬಾರಿ ಮಾತ್ರವೇ ಈ ಮುಗುಳು ನಗು ಇರುತ್ತದೆ. ಇದು ನಿಜಕ್ಕೂ ನಾವು ಪ್ರಶ್ನೆ ಮಾಡಿಕೊಳ್ಳಬೇಕಾದ ಸಂಗತಿಯಾಗಿದೆ. ಅವರಿಗೆ ನಗು ಕೊಡುವ ಕೆಲಸವನ್ನು ನಾವು ಮಾಡಬೇಕಿದೆ. ಹಿಂಸೆಯಲ್ಲಿ ತೊಡಗಿದವರಿಗೆ ಇಂದು ಹೀರೋ ಪಟ್ಟವನ್ನು ಕೊಡಲಾಗಿದೆ. ನಮ್ಮ ಕಾಲದಲ್ಲಿ ಶಾಂತ ಸ್ವರೂಪಿಗೆ ಹೀರೋ ಎಂದು ಹೇಳಿಕೊಡಲಾಗಿತ್ತು. ಇನ್ನು ಶಿಕ್ಷಕರು ಮಾತ್ರವಲ್ಲದೆ ಪೋಷಕರಿಗೂ ಸೆಮಿನಾರ್‌ಗಳನ್ನು ಆಯೋಜಿಸಬೇಕು. ಮಕ್ಕಳ ಮೇಲೆ ಶೇಕಡಾ 25ರಷ್ಟು ಪ್ರಭಾವ ಪೋಷಕರಿಂದಲೇ ಇರುತ್ತದೆ ಎಂದು ತಿಳಿಸಿದರು.
ನೈತಿಕ ಶಿಕ್ಷಣದ ಮೂಲಕ ಭಾರತ ವಿಶ್ವ ಗುರುವನ್ನಾಗಿ ಮಾಡಬೇಕು- ಹೊಂಬುಜ ಮಠ ಸ್ವಾಮೀಜಿ
ಶಿಕ್ಷಣ ಮೂಲಕ ಮಕ್ಕಳಿಗೆ ನೈತಿಕ ಶಿಕ್ಷಣ ನೀಡಬೇಕೆಂದು ಈಗೀನ ಮಕ್ಕಳಿಗೆ ಅವಶ್ಯಕತೆ ಇದೆ. ಈಗಾಗಲೇ ವಿದೇಶಿ ಶಿಕ್ಷಣ ಹಾಗೂ ನಮ್ಮ ದೇಶದ ಶಿಕ್ಷಣದ ಬಗ್ಗೆ ಹಿರಿಯರು ತಿಳಿಸಿದ್ದಾರೆ. ನೈತಿಕ ಶಿಕ್ಷಣದ ಮೂಲಕ ಭಾರತವನ್ನು ವಿಶ್ವ ಗುರುವನ್ನಾಗಿ ಮಾಡಬೇಕೆಂದು ಹೊಂಬುಜ ಮಠದ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಶಿಕ್ಷಣ ಪದ್ಧತಿಯಲ್ಲಿ ಮೇಜರ್ ಬದಲಾವಣೆ ಅಗತ್ಯ- ತೇಜಸ್ವಿನಿ ಅನಂತಕುಮಾರ್
ನಮ್ಮ ಶಿಕ್ಷಣ ಪದ್ಧತಿಯಲ್ಲಿ ಬೃಹತ್ ಬದಲಾವಣೆ ಆಗಬೇಕಿದೆ. ಇಲ್ಲವಾದಲ್ಲಿ ಚರ್ಚೆಯನ್ನು ಹೀಗೇ ಮಾಡುತ್ತಿರುತ್ತೇವೆಯೇ ಹೊರತು ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಅದಮ್ಯ ಚೇತನ ಸಂಸ್ಥೆಯ ತೇಜಸ್ವಿನಿ ಅನಂತಕುಮಾರ್ ತಿಳಿಸಿದರು.
ಪಾಲಕರಲ್ಲಿ ಕೆಲ ಬದಲಾವಣೆ ತರಬೇಕು, ಪರಿಸರವನ್ನು ಬಳಸಿಕೊಂಡು ಬಾಳುವ ಬಗ್ಗೆ ಮಕ್ಕಳಿಗೆ ತಿಳಿ ಹೇಳಬೇಕು. ಸಾಮಾಜಿಕ ಜವಾಬ್ದಾರಿಯು ಮಕ್ಕಳಲ್ಲಿ ಬೆಳೆಯುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕವಾಗಿ ಸೂಕ್ಷ್ಮತೆಯನ್ನು ಬಳಸಿಕೊಳ್ಳಬೇಕು. ಸ್ವಾಮಿ ವಿವೇಕಾನಂದರಿಂದಲೂ ಅನೇಕರು ಆದರ್ಶಗಳನ್ನು ಹೊಂದಿದ್ದಾರೆ. ತಂತ್ರಜ್ಞಾನವನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಬೇಕಿದೆ. ಇನ್ನು ಸಾತ್ವಿಕ ಆಹಾರದ ಜತೆ ಅನ್ನದಾತನ ಬಗ್ಗೆ ಹೇಳಿಕೊಡಬೇಕು. ಆದರೆ, ಇದನ್ನು ನಾವು ಹೇಳಿಕೊಡುತ್ತಿಲ್ಲ ಎಂದು ಬೇಸರ ಹೊರಹಾಕಿದರು.
ಮೂರು ಗಂಟೆಗಳ ಸುದೀರ್ಘ ಚರ್ಚೆ
ಸಭೆ ಬಳಿಕ ಮಾತಾನಾಡಿದ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡಬೇಕೆಂದು ಬಯಸಿದ್ದಾರೆ. ವಿವೇಕಾನಂದರು, ಮಹಾತ್ಮ ಗಾಂಧಿ, ವಿನೋಭಬಾವೆ ಕೂಡ ಹಿಂದೆಯೇ ಹೇಳಿದ್ದರು. ಶಿಕ್ಷಣ ವ್ಯವಸ್ಥೆಯಲ್ಲೇ, ಪಠ್ಯದಲ್ಲಿ ಇಲ್ಲದಿರುವ ಮೌಲ್ಯ ಶಿಕ್ಷಣ ಬಗ್ಗೆ ಮಾತನಾಡಿದ್ದಾರೆ. ಮೂರು ಗಂಟೆಗಳ ಕಾಲ ಸುದೀರ್ಘ ಚರ್ಚೆ ನಡೆದಿದೆ. ಪ್ರಾಕ್ಟಿಕಲ್ ಆಗಿ ಶಿಕ್ಷಣ ನೀಡುವ ಬಗ್ಗೆ ನಿರ್ಧಾರ ಮಾಡಿರುವುದಾಗಿ ಹೇಳಿದರು.
ಶಿಕ್ಷಣ ತಜ್ಞ ಪ್ರೊಫೆಸರ್ ಎಂ.ಕೆ ಶ್ರೀಧರ್, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮೀಜಿ, ಪ್ರಮುಖ ಕ್ರಿಚ್ಚಿಯನ್ ಮುಖಂಡರು, ಮೌಲ್ವಿಗಳು, ಪ್ರಮುಖ ಶಿಕ್ಷಣ ತಜ್ಞರಾದ ಪ್ರೊಫೆಸರ್ ಎಂ.ಕೆ ಶ್ರೀಧರ್, ರಾಮಯ್ಯ ಸಂಸ್ಥೆಯ ಜಯರಾಂ, ತೇಜಸ್ವಿನಿ ಅನಂತ್ ಕುಮಾರ್, ಕಸ್ತೂರಿ ರಂಗನ್ ಸೇರಿದಂತೆ 67 ಮಂದಿ ಭಾಗಿಯಾಗಿದ್ದರು.
ಇದನ್ನೂ ಓದಿ | Metro Dance | ಮೆಟ್ರೋದಲ್ಲಿ ಜೋಕಾಲಿ ಆಡಿದ ಯೂಟ್ಯೂಬರ್; ಶಿಕ್ಷೆಯಾಗಲಿ ಅಂತಿದ್ದಾರೆ ನೆಟ್ಟಿಗರು