ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ನೈತಿಕ ಪೊಲೀಸ್‌ಗಿರಿಯ (Moral policing), ಆರೆಸ್ಸೆಸ್-ಬಜರಂಗ ದಳ ಬ್ಯಾನ್ (RSS-Bajarang dal Ban) ಮೊದಲಾದ ಚರ್ಚೆಗಳು ಜೋರಾಗಿರುವ ನಡುವೆಯೇ ಚಿಕ್ಕಬಳ್ಳಾಪುರದಲ್ಲಿ ನೈತಿಕ ಪೊಲೀಸ್‌ಗಿರಿಯ ಘಟನೆಯೊಂದು ನಡೆದಿದೆ. ಸಾಮಾನ್ಯವಾಗಿ ಹಿಂದೂ ಯುವತಿಯರ ಜತೆ ಮುಸ್ಲಿಂ ಯುವಕರು ಹೋದಾಗ ಹಿಂದೂ ಹುಡುಗರು ಥಳಿಸುವ ಘಟನೆಗಳು ಎಲ್ಲೆಡೆ ನಡೆದರೆ ಇಲ್ಲಿ ಮುಸ್ಲಿಂ ಯುವತಿ ಮತ್ತು ಹಿಂದೂ ಯುವಕ ಜತೆಗೆ ಇದ್ದಾಗ ಥಳಿಸಲಾಗಿದೆ.
ಹಿಂದೂ ಯುವಕ ಮತ್ತು ಮುಸ್ಲಿಂ ಯುವತಿ ಅಲ್ಲಿನ ಹೋಟೆಲ್ ಒಂದಕ್ಕೆ ಬಂದಿದ್ದರು. ಆಕೆ ಬುರ್ಕಾ ಮತ್ತು ಹಿಜಾಬ್ ಧರಿಸಿಯೇ ಅಲ್ಲಿಗೆ ಆಗಮಿಸಿದ್ದಳು. ಹಿಂದು ಯುವಕ ಆಕೆಗೆ ಚೆನ್ನಾಗಿಯೇ ಪರಿಚಿತನಾಗಿರುವಂತೆ ಕಂಡುಬರುತ್ತಿದ್ದ.
ಚಿಕ್ಕಬಳ್ಳಾಪುರ ನಗರದ ಗೋಪಿಕಾ ಚಾಟ್ಸ್‌ಗೆ ಇವರಿಬ್ಬರೂ ಬಂದುದನ್ನು ಅಲ್ಲಿದ್ದ ಮುಸ್ಲಿಂ ಯುವಕರು ನೋಡಿದ್ದಾರೆ. ಮುಸ್ಲಿಂ ಯುವತಿಯ ಜತೆ ಬಂದಿರುವ ಹುಡುಗ ಹಿಂದೂನಾ ಮುಸ್ಲಿಮನಾ ಎಂದು ಅಲ್ಲಿದ್ದವರಿಗೆ ಕುತೂಹಲ ಮೂಡಿದೆ. ಅವರಿಬ್ಬರೂ ಒಳಗೆ ಹೋಗುತ್ತಿದ್ದಂತೆಯೇ ಮುಸ್ಲಿಂ ಯುವಕರು ಅಲ್ಲೇ ಅವರ ಆಸುಪಾಸಿನಲ್ಲಿ ಠಳಾಯಿಸಿದ್ದಾರೆ. ಅವರಿಬ್ಬರೂ ಒಂದು ಟೇಬಲ್‌ಗೆ ಹೋಗಿ ಕುಳಿತಾಗ ಇಬ್ಬರು ಹುಡುಗರು ಬಂದು ಹುಡುಗಿಯ ಜತೆಗೆ ಇರುವವನು ಯಾವ ಧರ್ಮ ಎಂದು ದೃಢಪಡಿಸಿಕೊಳ್ಳುತ್ತಾನೆ.
ಹುಡುಗ ಹಿಂದು ಎಂದು ತಿಳಿಯುತ್ತಿದ್ದಂತೆಯೇ ಆತ ಆಸುಪಾಸಿನಲ್ಲಿದ್ದ ಅವನ ಟೀಮ್‌ಗೆ ವಿಷಯ ಮುಟ್ಟಿಸುತ್ತಾನೆ. ಕೂಡಲೇ ಒಂದಷ್ಟು ಜನ ಸೇರಿ ಅವರಿಬ್ಬರನ್ನೂ ಬದಿಗೆ ಕರೆಯುತ್ತಾರೆ. ಮುಸ್ಲಿಂ ಹುಡುಗರು ಯುವಕನನ್ನು ಪ್ರಶ್ನಿಸುವುದರ ಜತೆ ಹಲ್ಲೆಗೆ ಯತ್ನಿಸುತ್ತಾರೆ. ಒಂದು ಹಂತದಲ್ಲಿ ಯುವತಿ ಅವನು ನನ್ನ ಪರಿಚಿತ, ಅವನ ಜತೆಗೆ ಹೋಟೆಲ್‌ಗೆ ಬಂದರೆ ತಪ್ಪೇನು ಎಂದು ಪ್ರಶ್ನಿಸಿ ಕೋಪ ತೋರಿಸುತ್ತಾಳೆ. ಈ ಹಂತದಲ್ಲಿ ಆಕೆಯ ಮೇಲೂ ಹಲ್ಲೆಗೆ ಯತ್ನ ನಡೆಯುತ್ತದೆ. ಆಕೆ ನೀರು ಕುಡಿಯುತ್ತಾ ಆರಾಮವಾಗಿ ಯಾಕೆ ಹೀಗೆ ಮಾಡುತ್ತೀರಿ ಎಂದು ಪ್ರಶ್ನಿಸುತ್ತಾಳೆ.
ಯುವತಿ ಹಿಂದೂ ಯುವಕನ ಪರ ವಹಿಸಿ ಮಾತನಾಡಿದ್ದರಿಂದ ಯುವಕರು ಆಕ್ರೋಶಗೊಂಡು ಆಕೆಯನ್ನೂ ಅವಮಾನಿಸಲು ಯತ್ನಿಸಿದರು. ಕೊನೆಗೆ ಯುವತಿಯ ಬಾಯಲ್ಲಿ ಈ ರೀತಿ ಬೇರೆ ಧರ್ಮದವರ ಜತೆಗೆ ಹೋಟೆಲ್‌ಗೆ ಹೋಗಿದ್ದ ತಪ್ಪಾಯಿತು, ಇದನ್ನು ನಾನು ಹೃದಯಪೂರ್ವಕವಾಗಿ ಹೇಳುತ್ತಿದ್ದೇನೆ ಎಂದು ಹುಡುಗಿಯ ಬಾಯಲ್ಲಿ ಹೇಳಿಸುವಲ್ಲಿ ನೈತಿಕ ಪೊಲೀಸ್‌ಗಿರಿ ನಡೆಸಿದ ಯುವಕರು ಯಶಸ್ವಿಯಾದರು.
ಚಿಕ್ಕಬಳ್ಳಾಫುರ ನಗರ ಪೊಲೀಸ್ ಠಾಣೆಯ ವ್ಯಾಪ್ತಿ ಪ್ರಕರಣ ನಡೆದಿದ್ದು, ಇದರ ವಿಡಿಯೊಗಳು ವೈರಲ್ ಆಗಿವೆ.
ರಾಜ್ಯ ಸರ್ಕಾರ ನೈತಿಕ ಪೊಲೀಸ್‌ಗಿರಿಯ ಯಾರೇ ಮಾಡಿದರೂ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದು ಈ ಬಗ್ಗೆ ಮುಂದಿನ ಕ್ರಮವನ್ನು ಪೊಲೀಸರು ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ: ಪುತ್ತೂರಿನಲ್ಲಿ ನೈತಿಕ ಪೊಲೀಸ್‌ಗಿರಿ; ಹಿಂದು ಯುವತಿ ಜತೆ ಮಾತನಾಡಿದ್ದಕ್ಕೆ ಮುಸ್ಲಿಂ ಯುವಕನಿಗೆ ಥಳಿತ